ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸದ್ಯಕ್ಕಿಲ್ಲ

ಕೇಂದ್ರ ಗೃಹಸಚಿವ ಪ್ರಣಬ್ ಮುಖರ್ಜಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಲೆ ಏರಿಕೆಯ ಬಗ್ಗೆ ಯಾವುದೇ ಒಮ್ಮತ ನಿರ್ಣಯ ಕೈಗೊಳ್ಳಲು ಸಾಧ್ಯವಾಗಲಿಲ್ಲ ಆದರೆ, ಇಂಧನ ಬೆಲೆ ಏರಿಕೆ ಕೀರಟ್ ಪಾರೀಖ್ ಸಮಿತಿ ಶಿಫಾರಿಸ್ಸಿನ ಮೇಲೆ ಚರ್ಚೆ ನಡೆಸಲು ಮತ್ತೆ ಸಭೆ ಸೇರುವುದಾಗಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಆರ್ಥಿಕ ತಜ್ಞ ಕೀರಟ್ ಪಾರೀಖ್ ಅವರ ಸಮಿತಿ ಇಂಧನ ಬೆಲೆ ಏರಿಕೆ, ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಉದ್ಯಮಕ್ಕೆ ಆಗುತ್ತಿರುವ ನಷ್ಟದ ಬಗ್ಗೆ ಸಮಗ್ರ ವರದಿಯನ್ನು ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಿದ್ದರು.
ಇಂಧನ ಕಂಪೆನಿಗಳಿಗೆ ನಷ್ಟ:ಬೆಲೆ ಪರಿಷ್ಕರಣೆ ಮಾಡದಿದ್ದಲ್ಲಿ ಈ ಹಣಕಾಸು ವರ್ಷದಲ್ಲಿ ತೈಲ ಕಂಪೆನಿಗಳು ಒಟ್ಟು 72,300 ಕೋಟಿ ರೂಪಾಯಿಗಳ ನಷ್ಟ ಅನುಭವಿಸಬೇಕಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 3.50 ರು ಹೆಚ್ಚಳ ಹಾಗೂ ಅನಿಲದ ದರ ಪ್ರತಿ ಸಿಲಿಂಡರ್ ಗೆ 25 ರುಪಾಯಿಗಳಿಂದ 50 ರುಪಾಯಿಗಳವರೆಗೂ ಹೆಚ್ಚಿಸುವಂತೆ ಸೂಚಿಸಲಾಗಿತ್ತು.
ಸಬ್ಸಿಡಿ ದರದಲ್ಲಿ ಇಂಧನ ಮಾರಾಟ ಮಾಡುತ್ತಿರುವ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ಭಾರತ್ ಪೆಟ್ರೋಲಿಯಂಗಳಿಗೆ ಪ್ರತಿದಿನ 203 ಕೋಟಿ ರು ನಷ್ಟು ನಷ್ಟವಾಗುತ್ತಿದೆ.
ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ನಡೆದ ಸಚಿವರ ಸಮೂಹ ಸಭೆಯಲ್ಲಿ ಇಂಧನ ಸಚಿವ ಮುರಳಿ ದಿಯೋರಾ, ಕೃಷಿ ಸಚಿವ ಶರದ್ ಪವಾರ್ , ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಎಂಕೆ ಅಳಗಿರಿ, ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ, ರಸ್ತೆ ಸಾರಿಗೆ ಸಚಿವ ಕಮಲ್ ನಾಥ್ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಭಾಗವಹಿಸಿದ್ದರು.












Click it and Unblock the Notifications