ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಭಗವದ್ಗೀತೆ ರಸಪ್ರಶ್ನೆ

ಉಡುಪಿಯ ಶ್ರೀಕೃಷ್ಣನ ಸನ್ನಿಧಿಯಲ್ಲಿ ಜೂನ್ 5ರಂದು ಪರ್ಯಾಯ ಶೀರೂರು ಶ್ರೀಕೃಷ್ಣಮಠದ ಪರಮಪೂಜ್ಯ ಶ್ರೀಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದಂಗಳವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರ್ಕಾರದ ಗೃಹಮಂತ್ರಿ ವಿ.ಎಸ್. ಆಚಾರ್ಯರವರು ಗೀತಾದ್ಯುತಿ - ವಿಶೇಷ ವಿದ್ಯಾರ್ಥಿ ಆವೃತ್ತಿ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ವರ್ಷ ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದ ಯಶಸ್ಸಿನಿಂದ ಪ್ರೋತ್ಸಾಹಿತರಾಗಿ ಗೀತಾ ದ್ಯುತಿ 2010 ಸ್ಪರ್ಧೆಯನ್ನು ರಾಜ್ಯಾದ್ಯಂತ 12,000 ವಿದ್ಯಾರ್ಥಿಗಳಿಗೆ ನಡೆಸುತ್ತಿದ್ದು ವಿಜೇತರಿಗೆ ರೂ. 42,300 ನಗದು ಬಹುಮಾನವನ್ನು ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ 12ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.
ಉಡುಪಿಯ ಪರ್ಯಾಯ ಶೀರೂರು ಶ್ರೀಕೃಷ್ಣ ಮಠ, ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಪ್ರಮುಖವಾದ ಕಲ್ಕೂರ ಪ್ರತಿಷ್ಠಾನದ ಸಹಯೋಗದೊಂದಿಗೆ ಕಲ್ಚರಲ್ ಇಂಡಿಯಾ ಸಂಸ್ಥೆಯು ನಡೆಸುತ್ತಿರುವ ಗೀತಾದ್ಯುತಿ 2010 ಸ್ಪರ್ಧೆಯಲ್ಲಿ ಹೈಸ್ಕೂಲು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು ರಾಜ್ಯಾದ್ಯಂತ 300ಕ್ಕೂ ಹೆಚ್ಚು ಶಾಲೆಗಳ 12,000 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇದಕ್ಕಾಗಿ ರಾಜ್ಯಾದ್ಯಂತ 12 ಜಿಲ್ಲೆಗಳಲ್ಲಿ ಪ್ರಮುಖ ಶಾಲೆಗಳನ್ನು ಗೀತಾದ್ಯುತಿ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಈ ಸ್ಪರ್ಧೆಯಲ್ಲಿ ಲಿಖಿತ ಹಾಗೂ ಮೌಖಿಕ ಪ್ರಶ್ನೆಗಳನ್ನು ಕನ್ನಡ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ವಿದ್ಯಾರ್ಥಿಗಳು ಉತ್ತರಿಸಬಹುದು.
ಜುಲೈನಲ್ಲಿ ಮೊದಲ ಸುತ್ತಿನ ಲಿಖಿತ ಪರೀಕ್ಷೆ ನಡೆಯಲಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಫೈನಲ್ ಬೆಂಗಳೂರಿನಲ್ಲಿ ನಡೆಯಲಿದೆ. ಫೈನಲ್ ನಲ್ಲಿ ಸ್ವಾಮೀಜಿಗಳೇ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಉಡುಪಿ ಶಾಸಕರಾದ ರಘುಪತಿ ಭಟ್, ತರಂಗ ನಿರ್ವಾಹಕ ಸಂಪಾದಕಿ ಸಂಧ್ಯಾ ಪೈ, ಬೆಂಗಳೂರು ದೂರದರ್ಶನ ನಿರ್ದೇಶಕ ಮಹೇಶ್ ಜೋಶಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಮತ್ತು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕಲ್ಕೂರ್ ಭಾಗವಹಿಸಲಿದ್ದಾರೆ.
ಭಗವದ್ಗೀತೆಯಂತಹ ಕೃತಿಗಳ ಅಧ್ಯಯನ, ವಿಚಾರ ಕೇವಲ ಹಿರಿಯರಿಗಷ್ಟೇ ಅಲ್ಲದೆ ಮುಂದಿನ ಪೀಳಿಗೆಯ ಪ್ರಜೆಗಳಿಗೂ ಸೇರುವಂತೆ ಮಾಡಿ ಅವರು ಕಷ್ಟಕಾಲದಲ್ಲಿ ಧೈರ್ಯದಿಂದಲೂ, ಸ್ಥೈರ್ಯದಿಂದಲೂ ಇರುವಂತಾಗಬೇಕಾದದ್ದು ಅತ್ಯಂತ ಅವಶ್ಯಕ ಎಂಬುದನ್ನು ಮನಗಂಡು ದೇಶದ ಪ್ರತಿಷ್ಠಿತ ಐಐಎಂ ಸಂಸ್ಥೆಗಳು ಗೀತೆಯನ್ನು ತಮ್ಮ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ಪಠ್ಯವನ್ನಾಗಿ ನಿಯಮಿಸಿವೆ.












Click it and Unblock the Notifications