ಪರಿಹಾರ 'ದುರಂತ'ಗಳಿಗೆ ಕಾರಣರಾರು?

ಇದು ನಿಜಕ್ಕೂ ದುರಂತ, ಆದರೆ ಅಷ್ಟೇ ಸತ್ಯ. ಕಳೆದ ಮೇ 22ರಂದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಸತ್ತವರ ಕುಟುಂಬಕ್ಕೆ 72 ಲಕ್ಷ ರು. ಪರಿಹಾರ ನೀಡಲಾಗಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸತ್ತವರ ಕುಟುಂಬಕ್ಕೆ ಕೇವಲ 4 ಲಕ್ಷ ಪರಿಹಾರ ನೀಡಲಾಗಿದೆ. ವಿಮಾನ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ರೈಲು ಅಪಘಾತದಲ್ಲಿ ಸತ್ತವರಿಗಿಂತ 18 ಪಟ್ಟು ಹೆಚ್ಚು ಪರಿಹಾರ ನೀಡಲಾಗಿದೆ.
ಸಾವು ಒಂದೇ, ದುಃಖವೂ ಒಂದೇ, ರಾಷ್ಟ್ರವು ಒಂದೇ, ಆದರೆ ಪರಿಹಾರ ನೀಡುವಲ್ಲಿ ಮಾತ್ರ ಒಂದು ಕಣ್ಣಿಗೆ ಬೆಣ್ಣೆ ಮತ್ತು ಇನ್ನೊಂದು ಕಣ್ಣಿಗೆ ಸುಣ್ಣ ನೀತಿಯನ್ನು ಅನುಸರಿಸಲಾಗುತ್ತಿದೆ. ಎರಡು ಅಪಘಾತಗಳೂ ಭೀಕರವಾಗಿದ್ದವು. ಎರಡರಲ್ಲೂ ಅಪಾರ ಪ್ರಮಾಣದಲ್ಲಿ ಪ್ರಾಣ ಹಾನಿಯಾಗಿವೆ. ಆದರೂ ಪರಿಹಾರಗಳು ಬೇರೆಬೇರೆಯಾಗಿರುವುದಕ್ಕೆ ಕಾರಣಗಳೂ ಇಲ್ಲದಿಲ್ಲ.
ವಿಮಾನಯಾನ ಸಂಸ್ಥೆಗಳು ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಏರ್ ಕ್ಯಾರೇಜ್ ಕಾನೂನಿನ ಪ್ರಕಾರ ಸತ್ತವರಿಗೆ ಅಷ್ಟೊಂದು ಪರಿಹಾರ ನೀಡಲೇಬೇಕಾಗುತ್ತದೆ. ಆದರೆ, ರೈಲಿನಲ್ಲಿ ಪ್ರಯಾಣಿಸುವ ಜನ ಅಷ್ಟು ಅದೃಷ್ಟವಂತರಲ್ಲ. ರೈಲು ಅಪಘಾತದಲ್ಲಿ ಮಡಿದವರ ಕುಟುಂಬಕ್ಕೆ ಭಾರತೀಯ ರೈಲು ಕಾನೂನಿನ ಪ್ರಕಾರ ರೈಲು ಇಲಾಖೆಯೇ ಪರಿಹಾರ ನೀಡುತ್ತದೆ. ಹಿಂದೆ ವಿಮಾ ಕಂಪನಿಗಳೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಪುನರ್ ವಿಮರ್ಶಿಸಲು ಮತ್ತು ನವೀಕರಿಸಲು ಕೂಡ ರೈಲು ಇಲಾಖೆ ಯತ್ನಿಸಿಲ್ಲ. ಪರಿಹಾರ ದುರಂತಗಳಿಗೆ ಇದೇ ಮೂಲ ಕಾರಣ.












Click it and Unblock the Notifications