• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಯನಗರದ ರಿಚ್ ಗಣಪನಿಗೆ ರಜತರಥ

By * ವರದಿ : ಪೋಶೆಟ್ಟಿಹಳ್ಳಿ ಗುರುರಾಜ
|

ಬೆಂಗಳೂರು, ಮೇ. 13 : ದಕ್ಷಿಣ ಬೆಂಗಳೂರು ಪ್ರದೇಶದಲ್ಲಿ ಅತ್ಯಂತ ಜನಪ್ರಿಯ ಜಯನಗರದ 4ನೇ ಬ್ಲಾಕ್‌ನ ಶ್ರೀ ವಿನಾಯಕಸ್ವಾಮಿ ದೇವಾಲಯದ 33ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಇದೇ ಮೇ 21ರಿಂದ 23ರವರೆಗೆ ನಡೆಯಲಿದೆ. ಬೆಳ್ಳಿ ರಥ ಲೋಕಾರ್ಪಣೆ ಹಾಗೂ ಗುರುವಂದನೆ ಮತ್ತು ನಗರದೇವತೆಗಳ ಜಾತ್ರಾ ಮಹೋತ್ಸವ ಈ ವರ್ಷದ ವಿಶೇಷ ಕಾರ್ಯಕ್ರಮಗಳಾಗಿರುತ್ತವೆ.

ನಗರದ ಹೆಸರಾಂತ ಬಡಾವಣೆಗಳಲ್ಲಿ ಪ್ರಸಿದ್ಧ ದೇವಾಲಯಗಳು ನಿತ್ಯವೂ ಕಾರ್ಯಕ್ರಮಗಳನ್ನು ನಡೆಸುತ್ತಾ ಜನರನ್ನು ಭಕ್ತಿ ಮಾರ್ಗದತ್ತ ಕರೆದೊಯ್ಯುತ್ತಿವೆ. ಇವುಗಳಲ್ಲಿ ಎಷ್ಯಾ ಖಂಡದ ಅತಿದೊಡ್ಡ ಸುಸಜ್ಜಿತ ಬಡಾವಣೆವೆನಿಸಿದ ಬೆಂಗಳೂರಿನ ಜಯನಗರ ನಾಲ್ಕನೇ ಬಡಾವಣೆಯ ಶ್ರೀ ವಿನಾಯಕ ದೇವಾಲಯದ ಪಾತ್ರ ಹಿರಿದಾದದು. 33 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ದೇವಾಲಯ ಭಕ್ತರ ಮನಸೂರೆಗೊಂಡು ಭಕ್ತಿ, ಶ್ರದ್ಧೆಯ ತಳಹದಿಯ ಮೇಲೆ ಬೃಹದಾಕಾರವಾಗಿ ಬೆಳೆದು ಆಶೋತ್ತರಗಳನ್ನು ನಡೆಸುವ ಸಿದ್ಧಿವಿನಾಯಕ ಕ್ಷೇತ್ರವಾಗಿದೆ. ಇವನು ಕೇಳಿದ್ದನ್ನು ಕೊಡುವ 'ಕ್ಷಿಪ್ರ ಪ್ರಸಾದ ಗಣಪ'ನೆಂದೇ ಖ್ಯಾತಿ. ಇದೊಂದು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕೊಡುಕೊಳ್ಳುವಿಕೆಯ ಕೇಂದ್ರ. ಅಪರೂಪದ ಆದರೆ ಅಷ್ಟೇ ಆದರ್ಶ ಪರಂಪರೆಯ ಪ್ರತೀಕ. ಹಲವು ವೈಶಿಷ್ಟ್ಯಗಳ ಸಂಗಮ.

ಜಯನಗರ 4ನೇ ಬ್ಲಾಕ್ ಎಂದರೆ ಥಟ್ಟನೆ ನೆನಪಾಗುವುದು ಲೌಕಿಕ ಜಗತ್ತಿನ ಬೆಡಗು ಬಿನ್ನಾಣಗಳನ್ನು ಮೈಗೂಡಿಸಿಕೊಂಡಿರುವ ಅಂಗಡಿ ಮುಂಗಟ್ಟು, ಅದಕ್ಕೆ ತಾಕಿಕೊಂಡಂತೆ ಇರುವ ಈ ಗಣೇಶ ಗುಡಿಯ ಮಹಿಮೆ ಎಷ್ಟು ಬಣ್ಣಿಸಿದರೂ ಕಡಿಮೆಯೇ. ಜಯನಗರಕ್ಕೆ ಬಂದವರು ಈ ಗುಡಿಗೆ ಬಾರದೆ ಹೋಗುತ್ತಾರೆಯೇ ಎಂಬ ಮಾತಿನ ಗೂಡಾರ್ಥ ಈ ವಿಘ್ನೇಶನ ಮಹಿಮೆಯ ದ್ಯೋತಕ. ಚಿಕ್ಕ ಮಾಡಿನಲ್ಲಿ ಪ್ರಾರಂಭವಾಗಿ ಇಂದು ಬೃಹದಾಕಾರವಾಗಿ ಬೆಳೆದು ಬೆಂಗಳೂರು ಮಾತ್ರವಲ್ಲದೆ ರಾಜ್ಯ, ನೆರೆ ರಾಜ್ಯ ಹಾಗೂ ದೇಶವಿದೇಶಗಳಲ್ಲಿ ಸ್ವಾಮಿಯ ಭಕ್ತರು ನೆಲೆಸಿದ್ದು, ದಿನವಹಿ ಹಲವಾರು ಭಕ್ತರು ಸ್ವಾಮಿ ಸೇವೆಯಲ್ಲಿ ಪಾಲ್ಗೊಂಡು ಧನ್ಯರಾಗುತ್ತಿರುವುದು ಆಸ್ತಿಕ ಮಹಾಶಯರಿಗೆ ಸಂತಸದ ಸುದ್ದಯಾಗಿದೆ.

ಪ್ರಣವ ಸ್ವರೂಪಿ ವಿನಾಯಕನಿಗೆ 'ಭಕ್ತಿ ನಿಮಿತ್ತಂ ಬಹುಕೃತ ವೇಷಂ' ಎಂಬಂತೆ ನಯನಮನೋಹರ, ವೈವಿಧ್ಯಮಯ ಅಲಂಕಾರಗಳು ದಿನಂಪ್ರತಿ ನಡೆಯುವುದು. ಬೆಣ್ಣೆ, ಒಣ ಹಣ್ಣುಗಳು, ಹಣ್ಣುಗಳು, ವೀಳ್ಯೆಯದೆಲೆ, ನಾಣ್ಯ, ಅರಿಶಿನಕುಂಕುಮ, ಮುತ್ತುಗಳು, ಮಲ್ಲಿಗೆಮೊಗ್ಗು ಇವುಗಳ ಅಲಂಕಾರ ಪ್ರಮುಖವಾದವು. ಅಲ್ಲದೆ ಬೆಳ್ಳಿಯ ಚಿನ್ನದ ಕಿರೀಟ ಆಭರಣಗಳನ್ನು ಆಯಾ ಸಂದರ್ಭಕ್ಕೆ ಅನುಗುಣವಾಗಿ ಬದಲಿಸಲಾಗುವುದು. ಹಬ್ಬ ಹರಿದಿನಗಳಲ್ಲಂತು ಭಕ್ತಜನ ಸಮೂಹ ಜಾತ್ರಾರೂಪದಲ್ಲಿ ಬಂದು ಸೇವೆ ಸಲ್ಲಿಸಿ ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳುತ್ತಿರುವುದು ಆಸ್ತಿಕತೆಗೆ ಸಂದ ಜಯವಾಗಿದೆ.

ಭಕ್ತರ ಕೋರಿಕೆಯಂತೆ ದೇಗುಲದ ವಿಸ್ತರಣೆ ಮತ್ತು ರಾಜಗೋಪುರ ಪೌಳಿ ನಿರ್ಮಾಣ ಕಾರ್ಯಕ್ರಮಗಳನ್ನು ದೇವಸ್ಥಾನ ಸಮಿತಿ ಮೂರು ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಂಡಿದ್ದು ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ. ಈ ರಾಜಗೋಪುರ ಒಂದು ಸ್ಮಾರಕವಾಗಿ ಉಳಿದು, ಭಕ್ತರಿಗೆ ಆನಂದ ನೀಡುವುದರಲ್ಲಿ ಸಂದೇಹವೇ ಇಲ್ಲ.

ಮೂರು ದಿನಗಳ ಜಾತ್ರಾ ಮಹೋತ್ಸವಕ್ಕೆ ಶತಾಯುಷಿಗಳು, ತ್ರಿವಿಧ ದಾಸೋಹಿಗಳು ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಕರ್ನಾಟಕ ರತ್ನ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಡಾ|| ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಆದಿಚುಂಚನಗಿರಿ ಮಠದ ಪದ್ಮಭೂಷಣ ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು ಮೊದಲಾದ ನಾಡಿನ ಹಲವು ಮಠಾಧೀಶರ ದಿವ್ಯ ಸಾನ್ನಿಧ್ಯದಲ್ಲಿ ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಎಚ್.ಡಿ. ದೇವೇಗೌಡರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಸ್ವಾಮಿಯ ಪ್ರಾಕಾರೋತ್ಸವಕ್ಕೆ ಉಪಯೋಗಿಸಲು ಭಕ್ತರ ಜನರ ಸಹಕಾರದಿಂದ ನಿರ್ಮಾಣಗೊಂಡಿರುವ ಅಂದಾಜು 100 ಕೆಜಿ ತೂಕದ ಬೆಳ್ಳಿ ರಥವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಪೂಜ್ಯ ಡಾ. ಶಿವಕುಮಾರ ಸ್ವಾಮಿಗಳಿಗೆ ಗುರುವಂದನೆಯನ್ನು ಸಮಿತಿ ಮತ್ತು ಸ್ವಾಮಿಗಳ ಭಕ್ತವೃಂದದ ಪರವಾಗಿ ಬಿಬಿಎಂಪಿಯ ಮಹಾಪೌರರಾದ ಎಸ್.ಕೆ. ನಟರಾಜ್‌ರವರು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ಅನಂತಕುಮಾರ್, ಎನ್. ಧರ್ಮಸಿಂಗ್, ಸಾರಿಗೆ ಸಚಿವರಾದ ಆರ್. ಅಶೋಕ್, ಮಾಜಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ, ಹಾಲಿ ಶಾಸಕರಾದ ಎಂ. ಶ್ರೀನಿವಾಸ್ ಮತ್ತು ಎಂ. ಕೃಷ್ಣಪ್ಪನವರು ಆಗಮಿಸಲಿದ್ದಾರೆ. ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎನ್. ಬಿಜಯಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಪೊರೇಟರುಗಳಾದ ರಾಮಮೂರ್ತಿ, ಎನ್. ನಾಗರಾಜು, ಬಿ. ಸೋಮಶೇಖರ, ಚಂದ್ರಶೇಖರ ರಾಜು ಮತ್ತು ಎನ್. ಆರ್. ರಮೇಶ್ ಉಪಸ್ಥಿತರಿರುವರು.

23 ಭಾನುವಾರ ಸಂಜೆ 7 ಗಂಟೆಗೆ ಬೆಳ್ಳಿರಥದಲ್ಲಿ ಶ್ರೀ ಸ್ವಾಮಿಯ ಸಹಿತ ರಾಜಬೀದಿಯಲ್ಲಿ ನಗರ ದೇವತೆಗಳ ಮೆರವಣಿಗೆಯೊಂದಿಗೆ ಸಂಪನ್ನಗೊಳ್ಳಲಿದೆ. ಸರ್ವ ಭಕ್ತರು ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತ್ರಿಕರಣಪೂರ್ವಕವಾಗಿ ಭಾಗವಹಿಸಿ ಶ್ರೀ ಸ್ವಾಮಿ ಕೃಪೆಗೆ ಪಾತ್ರರಾಗಲು ಕೋರಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಶ್ರೀ ವಿನಾಯಕ ಸೇವಾ ಸಮಿತಿ (ರಿ), 7ನೇ "ಬಿ" ಮುಖ್ಯರಸ್ತೆ, ಜಯನಗರ 4ನೇ ಬಡಾವಣೆ (ಪಶ್ಚಿಮ) ಬೆಂಗಳೂರು -560 001 . ದೂರವಾಣಿ : 080-2244 3255.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more