ಪೃಥ್ವಿ ಪಾತ್ರಜನತೆ ನಿರ್ವಹಿಸಲಿದ್ದಾರೆ: ದೇವೇಗೌಡ
ಬೆಂಗಳೂರು,ಮೇ.1: ಮಲ್ಲೇಶ್ವರಂನ ರೇಣುಕಾಂಬ ಮಿನಿ ಚಿತ್ರಮಂದಿರದಲ್ಲಿ 'ಪೃಥ್ವಿ' ಚಿತ್ರವನ್ನು ವೀಕ್ಷಿಸಿದ ಬಳಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಭೂತಯ್ಯನ ಮಗ ಅಯ್ಯು' ಚಿತ್ರದಂತೆ 'ಪೃಥ್ವಿ' ಚಿತ್ರದಲ್ಲೂ ಉತ್ತಮ ಸಂದೇಶವಿದೆ ಎಂದು ಚಿತ್ರದ ಬಗ್ಗೆ ಒಂದೆರಡು ಮೆಚ್ಚುಗೆ ಮಾತುಗಳನ್ನು ಆಡಿದರು.
ಪೃಥ್ವಿ ಚಿತ್ರವನ್ನು ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮುಂದೊಂದು ದಿನ 'ಪೃಥ್ವಿ' ಪಾತ್ರವನ್ನು ಜನತೆಯೇ ನಿರ್ವಹಿಸಲಿದ್ದಾರೆ.ಈ ಚಿತ್ರ ರಾಜ್ಯದ ಐದು ಕೋಟಿ ಜನತೆ ಮೇಲೆ ಪರಿಣಾಮ ಬೀರಲಿದೆ ಎಂದರು. ಒಟ್ಟಿನಲ್ಲಿ ದೇವೇಗೌಡರು ಚಿತ್ರವನ್ನು ಮನರಂಜನೆ ಉದ್ದೇಶದಿಂದ ಅಲ್ಲದೆ ರಾಜಕೀಯ ಉದ್ದೇಶದಿಂದ ಚಿತ್ರವನ್ನು ನೋಡಿರುವುದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.
ಪೃಥ್ವಿ ಚಿತ್ರವನ್ನು ನೋಡುವಾಗಲೂ ಅವರು ರಾಜಕೀಯ ಚಿಂತಿಸುತ್ತಿದ್ದರು.ಯಾರ ಹೆಸರನ್ನು ಪ್ರಸ್ತಾಪಿಸದೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಗುಡುಗಿದರು. ರಾಜ್ಯದ ಸಂಪತ್ತನ್ನು, ಜನರ ಸಂಪತ್ತನ್ನು ರ‌್ಯಾಸ್ಕಲ್ಸ್ ಲೂಟಿ ಹೊಡೆಯುತ್ತಿದ್ದಾರೆ ಎಂದು ಬೈದರು. ಎಲ್ಲಾ ರಾಜಕಾರಣಿಗಳು ಈ ಚಿತ್ರವನ್ನು ತಪ್ಪದೆ ನೋಡಬೇಕು. ಪೃಥ್ವಿ ಚಿತ್ರ ರಾಷ್ಟ್ರ ಪ್ರಶಸ್ತಿಗೆ ಅರ್ಹವಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಿರ್ಮಿಸಿದ್ದ 'ಚಂದ್ರ ಚಕೋರಿ' ಚಿತ್ರವೇ ದೇವೇಗೌಡರು ನೋಡಿದ ಕಟ್ಟಕಡೆಯ ಚಿತ್ರ. ಅದಾದ ಐದು ವರ್ಷಗಳ ಬಳಿಕ ಅವರು ಪೃಥ್ವಿ ಚಿತ್ರವನ್ನು ನೋಡಿದ್ದಾರೆ. ಪೃಥ್ವಿ ಚಿತ್ರದ ವೀಕ್ಷಣೆಯಲ್ಲಿ ಕೇವಲ ಮನರಂಜನೆಯ ಉದ್ದೇಶ ಅಷ್ಟೇ ಅಲ್ಲದೆ ರಾಜಕೀಯ ಉದ್ದೇಶವೂ ಬೆರೆತಿತ್ತು.
ಯಾವುದೇ ಬೆದರಿಕೆ ಬಂದಿಲ್ಲ: ಸೂರಪ್ಪ ಬಾಬು
ಚಿತ್ರೀಕರಣ ಸಮಯದಲ್ಲಾಗಲಿ, ಚಿತ್ರ ಬಿಡುಗಡೆಯ ಬಳಿಕವಾಗಲಿ ಯಾವುದೆ ಬೆದರಿಕೆ ಬಂದಿಲ್ಲ ಎಂದು ಪೃಥ್ವಿ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಇಂದು (ಮೇ.1) ಸ್ಪಷ್ಟಪಡಿಸಿದ್ದಾರೆ. ಚಿತ್ರೀಕರಣದ ವೇಳೆಯೂ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಜನಕ್ಕೆ ಚಿತ್ರ ತಲುಪಬೇಕು. ಈ ಚಿತ್ರವನ್ನು ಜನ ಒಳ್ಳೆ ರೀತಿಯಲ್ಲಿ ತೆಗೆದುಕೊಳ್ಳಬೇಕು ಎಂದರು.
ಯಾವುದೇ ರಾಜಕೀಯ ಉದ್ದೇಶದಿಂದ ಚಿತ್ರ ತೆಗೆದಿಲ್ಲ. ನಿರ್ದೇಶಕರ ಜಾಕಬ್ ವರ್ಗೀಸ್ ಕತೆ ಹೇಳಿದ ಕೂಡಲೆ ಜನಕ್ಕೆ ಹತ್ತಿರವಾದ ಚಿತ್ರ ಅನ್ನಿಸಿತು. ಹಾಗಾಗಿ ಈ ಚಿತ್ರವನ್ನು ನಿರ್ಮಿಸಿದೆ. ಈ ಚಿತ್ರ ಗೆದ್ದರೆ ಮತ್ತಷ್ಟು ಸಾಮಾಜಿಕ ಕಳಕಳಿಯ ಚಿತ್ರಗಳನ್ನು ತೆಗೆಯುವುದಾಗಿ ಅವರು ತಿಳಿಸಿದರು.ದೇವೇಗೌಡರು ಚಿತ್ರ ವೀಕ್ಷಿಸಿರುವ ಕಾರಣ ಮತ್ತಷ್ಟು ಜನ ಸಿನಿಮಾ ನೋಡುವ ಸಾಧ್ಯತೆಯಿದೆ ಎಂದು ಸೂರಪ್ಪ ಬಾಬು ಹೇಳಿದರು.











Click it and Unblock the Notifications