• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀ ಅಪ್ರಮೇಯನ ಪಾದಕ್ಕೆ ಸೂರ್ಯರಶ್ಮಿ

By *ತಿಲಕ್‌ರಾಜ್
|
ಚನ್ನಪಟ್ಟಣ, ಏ.27:ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ತಾಲ್ಲೂಕಿನ ದೊಡ್ಡಮಳೂರು ಅಪ್ರಮೇಯ ಸ್ವಾಮಿಯ ಬ್ರಹ್ಮರಥೋತ್ಸವ ಸೋಮವಾರದಂದು ವಿಜೃಂಭಣೆಯಿಂದ ನೆರವೇರಿತು.ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ರಥವನ್ನು ಎಳೆದು, ರಥಕ್ಕೆ ಹೂವು-ಹಣ್ಣು, ಜವನ ಎಸೆದು ಪುನೀತರಾದರು. ಉತ್ಸವದ ಸಂಬಂಧ ಕಳೆದ ವಾರದಿಂದ ಹಲವಾರು ಕಾರ್ಯಕ್ರಮಗಳು ನಡೆದು ಇಂದು ಬ್ರಹ್ಮರಥೋತ್ಸವ ಹಾಗೂ ಜಾತ್ರೆ ನಡೆಯಿತು.

ತಾಲೂಕಿನ ಹಲವಾರು ಗ್ರಾಮಗಳ ಸಾವಿರಾರು ಮಂದಿ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾದರು. ರಥೋತ್ಸವದಂದು ನೇರವಾಗಿ ಸೂರ್ಯರಶ್ಮಿ ಸ್ವಾಮಿಯ ಪಾದಗಳ ಮೇಲೆ ಬೀಳುವ ಅಚ್ಚರಿಯನ್ನು ವೀಕ್ಷಿಸಲು ಭಕ್ತರು ದೇವಾಲಯದಲ್ಲಿ ಜಮಾಯಿಸಿದ್ದರು. ಬರಿಯ ತಾಲೂಕಲ್ಲದೆ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಈ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು.

ಹಿನ್ನಲೆ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಚನ್ನಪಟ್ಟಣದಿಂದ ಮೈಸೂರು ಕಡೆಗೆ ಸುಮಾರು 3 ಕಿ.ಮೀ. ಕ್ರಮಿಸಿದಾಗ ಸಿಗುವ ದೊಡ್ಡಮಳೂರು ಗ್ರ್ರಾಮದಲ್ಲಿರುವ ಈ ದೇವಾಲಯಕ್ಕೆ ಸುಮಾರು 1600 ವರ್ಷಗಳ ಇತಿಹಾಸವಿದೆ. ರಥೋತ್ಸವದಂದು ಸೂರ್ಯರಶ್ಮಿ ನೇರವಾಗಿ ಸ್ವಾಮಿಯ ಪಾದಗಳ ಮೇಲೆ ಬೀಳುವುದು ಇಲ್ಲಿನ ಅಪ್ರಮೇಯ.

ದೇವಾಲಯವನ್ನು ತಳಪಾಯವಿಲ್ಲದೆ ಮರಳಿನ ಮೇಲೆ ಕಲ್ಲುಗಳಿಂದ ನಿರ್ಮಿಸಲಾಗಿದೆ. ಮುಂಭಾಗದಲ್ಲಿ ಅನೇಕ ದ್ವಾರಗಳು, ಧ್ವಜಸ್ಥಂಭ, ಗರುಢಗಂಭವಿದೆ.ಶ್ರೀಕೃಷ್ಣ ಸಹಸ್ರ ನಾಮದಲ್ಲಿ ಅಪ್ರಮೇಯ ಎಂಬುದು ಒಂದು ನಾಮವಾಗಿದ್ದು, ಶ್ರೀ ಅಪ್ರಮೇಯಸ್ವಾಮಿ ನೆಲಸಿರುವ ಏಕೈಕ ಕ್ಷೇತ್ರ ದೊಡ್ಡಮಳೂರು. ಈ ಮುಖ್ಯ ದೇವಾಲಯವನ್ನು ಕೇಂದ್ರವನ್ನಾಗಿಸಿ ಕೈಲಾಸೇಶ್ವರ, ಅರಕೇಶ್ವರ, ಕಲಿನಾಥೇಶ್ವರ, ಮಂಗಳೇಶ್ವರ ಎಂಬ ಶಿವ ದೇಗುಲಗಳು ಹಾಗೂ ಮಳೂರು ರಾಮದೇವರು, ಬೈರಾಪಟ್ಟಣದ ಜನಾರ್ಧನಸ್ವಾಮಿ, ಕೂಡ್ಲೂರು ರಾಮದೇವರು, ನದಿ ನರಸಿಂಹಸ್ವಾಮಿ ದೇವಾಲಯಗಳೆಂಬ ವಿಷ್ಣು ದೇಗುಲಗಳು ನಾಲ್ಕು ದಿಕ್ಕುಗಳಲ್ಲೂ ನೆಲೆಗೊಂಡಿವೆ. ದೊಡ್ಡಮಳೂರು ಹಿಂದೆ ರಾಜೇಂದ್ರ ಸಿಂಹವಗಲಿ, ತೆಂಕ ಅಯೋಧ್ಯೆ, ಮಳೂರು ಅಗ್ರಹಾರ, ಮರಳೂರು ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು.

ದಂತಕಥೆ : ಕ್ಷೇತ್ರದ ಪಕ್ಕದಲ್ಲಿರುವ ಮುಕುಂದರಾಜಪಟ್ಟಣದ (ಈಗಿನ ಮುಕುಂದ) ರಾಜನಿಗೆ ಸಾರಂಗಧರನೆಂಬ ಮಗನಿದ್ದ. ತಂದೆಯ ಅನೇಕ ರಾಣಿಯರಲ್ಲಿ ಕಿರಿಯವರು ಸಾರಂಗಧನ ಮೇಲೆ ಮೋಹಿತಳಾದಳು. ನಿಷ್ಠಾವಂತ ಸಾರಂಗಧರ ತನ್ನ ಚಿಕ್ಕಮ್ಮ ಮಾತೃ ಸಮಾನಳೆಂದು ಅವಳ ಬೇಡಿಕೆ ತಿರಸ್ಕರಿಸಿದ. ಇದರಿಂದ ಕೋಪಗೊಂಡ ಕಿರಿಯ ರಾಣಿ, ಸಾರಂಗಧರನ ನಡತೆ ಬಗ್ಗೆ ಆರೋಪ ಹೊರಿಸಿ, ಮಹಾರಾಜರಲ್ಲಿ ಧ್ವೇಷ ಹುಟ್ಟಿಸಿದಳು. ಕೋಪಗೊಂಡ ಮಹಾರಾಜ ಸಾರಂಗಧರ ಕೈಕಾಲು ಕತ್ತರಿಸಿ, ನದಿಗೆ ಎಸೆಯುವಂತೆ ಆದೇಶಿಸಿದ. ಅಬ್ಬೂರು ಗುಡ್ಡದ ಬಳಿ ರಾಜಭಟರು ರಾಜಾಜ್ಞೆಯಂತೆ ಕೈಕಾಲು ಕತ್ತರಿಸಿ ಕಣ್ವ ನದಿಗೆ ಎಸೆಯುತ್ತಾರೆ.

ಅಪ್ರಮೇಯಸ್ವಾಮಿ ದೇಗುಲದ ಸನಿಹ ತೇಲುತ್ತಾ ಬಂದ ರಾಜಕುಮಾರನಿಗೆ ಒಂದು ಜ್ಯೋತಿ ಕಾಣಿಸುತ್ತದೆ. ಆ ಜ್ಯೋತಿಯನ್ನು ದೃಷ್ಟಿಸಿ ಅಪ್ರಮೇಯಸ್ವಾಮಿಯನ್ನು ಪ್ರಾರ್ಥಿಸಿದಾಗ ತಕ್ಷಣ ಆತನಿಗೆ ಕೈಕಾಲುಗಳು ಮೊಳೆತು ಮೊದಲಿನಂತಾಗುತ್ತಾನೆ. ಇದರಿಂದ ಮೊಳೆತೂರು ಎಂದು ಹೆಸರಾಗಿ ನಂತರ ಮಳೂರು ಎಂದು ಮಾರ್ಪಾಡಾಯಿತೆಂಬುದು ಪ್ರತೀತಿ.

ಅಂಬೇಗಾಲು ಕೃಷ್ಣನ ನೋಡಿರಿ: ಇಲ್ಲಿನ ಅಂಬೇಗಾಲು ಕೃಷ್ಣನ ಮೂರ್ತಿ(ನವನೀತ ಕೃಷ್ಣ) ಪ್ರಮುಖ ಆಕರ್ಷಣೆ. ಪ್ರದಕ್ಷಿಣೆ ಪಥದಲ್ಲಿ ವಾಯುವ್ಯ ಭಾಗದಲ್ಲಿ ಗರುಢ ಪೀಠದ ಮೇಲೆ ವಿಗ್ರಹ ಪ್ರತಿಷ್ಟಾಪಿಸಲಾಗಿದೆ. ಕೈಯಲ್ಲಿ ಬೆಣ್ಣೆಯ ಉಂಡೆ ಹಿಡಿದು ಅಂಬೆಗಾಲಿಕ್ಕುತ್ತಾ ಒಂದು ಕೈಯನ್ನು ನೆಲಕ್ಕೆ ಊರಿ, ಒಂದು ಕಾಲನ್ನು ಮೇಲಕ್ಕೆ ಎತ್ತಿ ಮುಂದೆ ಬರುತ್ತಿರುವ ಶಿಶುವಿನ ಭಂಗಿಯಲ್ಲಿದೆ ಈ ವಿಗ್ರಹ.

ಪುರಂದರ, ಕನಕದಾಸರು ಕೃಷ್ಣನ ದರ್ಶನ ಪಡೆದು ಹಾಡಿ ಹೊಗಳಿದ್ದಾರೆ. ಹಾಗೆಯೇ ಅರವಿಂದವಲ್ಲಿ ಅಮ್ಮನವರ ವಿಗ್ರಹವೂ ಚತುರ್ಭುಜ, ಅಭಯ ವರದ ಹಸ್ತದಿಂದ ಕೂಡಿದ್ದು, ಮೇಲಿನ ಎರಡೂ ಕೈಗಳಲ್ಲೂ ಕಮಲ ಹಿಡಿದು, ಕರಂಡ ಮುಕುಟಹಾರ, ಕುಂಡಲಾದಿಯಾಗಿಗಳಿಂದ ಅಲಂಕೃತವಾಗಿರುವಂತೆ ಕೆತ್ತಲಾಗಿದೆ.

ವಿಜ್ಞಾನೇಶ್ವರ ಸಂಬ ಮಹರ್ಷಿಗಳು ಹಿಂದೂ ನ್ಯಾಯ ಶಾಸ್ತ್ರದ ಮೀತಾಕ್ಷರಿಯನ್ನು ಇಲ್ಲೇ ಬರೆದಿದ್ದಾರೆಂಬುದಕ್ಕೆ ದೇವಾಲಯದ ಗೋಡೆಗಳ ಮೇಲೆ ಕಲ್ಲಿನ ಕೆತ್ತನೆಯ ಶಾಸನಗಳಲ್ಲಿ ಆಧಾರಗಳಿವೆ. ನ್ಯಾಯಾಂಗ ಕ್ಷೇತ್ರದ ಧುರೀಣರು ದೇವಾಲಯದ ವಿಸ್ಮಯ ಆಧಾರ ಕಂಡು ಪ್ರೇರಿತರಾಗಿದ್ದಾರೆ.ರಥೋತ್ಸವಕ್ಕೆ ಏಳು ದಿನ ಮುಂಚಿನಿಂದ ಪೂಜಾ ವಿಧಾನ ಆರಂಭಗೊಳ್ಳುತ್ತದೆ. ಉತ್ಸವದ ನಂತರ ಮೂರು ದಿನಗಳು ವಿವಿಧ ಕಾರ್ಯಕ್ರಮಗಳು ವೈಭವಯುತದಿಂದ ಜರುಗುತ್ತವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more