ರಾಮನಗರ ಮೇಷ್ಟ್ರೆ ನೀವು ಮಾಡಿದ್ದು ಸರೀನಾ?
ರಾಮನಗರ, ಏ.23 : ಬಂಧಿತ ಸ್ವಾಮಿ ನಿತ್ಯಾನಂದನ ವಿರುದ್ಧ ಬೈಗುಳಗಳ ಸುರಿಮಳೆಗರೆದು ಚಪ್ಪಲಿ ಎಸೆದು ಸುದ್ದಿಗೆ ಗ್ರಾಸವಾಗಿದ್ದ ಶಾಲಾ ಮೇಷ್ಟ್ರು ಈಗ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ. ಮಕ್ಕಳಿಗೆ ಸಂಯಮದ ಪಾಠ ಹೇಳಬೇಕಾಗಿದ್ದ ಶಿಕ್ಷಕ ಸಂಯಮ ಕಳೆದುಕೊಂಡು ತನ್ನ ನಂಬಿಕೊಂಡ ಕುಟುಂಬವನ್ನು ಸಂಕಷ್ಟಕ್ಕೆ ದೂಡುವಂತಾಗಿದೆ.
ಚಪ್ಪಲಿ ಎಸೆದು ಪ್ರಚಾರ ಗಿಟ್ಟಿಸಿರುವ ಶ್ರೀನಿವಾಸ್ ರಾಮನಗರ ಜಿಲ್ಲೆ ಚನ್ನಪಟ್ಟಣದ ಕೆಳಮೇಗಲದೊಡ್ಡಿಯ ಪ್ರಾಥಮಿಕ ಶಾಲಾ ಶಿಕ್ಷಕ. ಮೊದಲಿನಿಂದಲೂ ಶಾಂತಮನೋಭಾವ ಹೊಂದಿರುವ ಶ್ರೀನಿವಾಸ್ ನಿತ್ಯಾನಂದನ ಕಾಮಕೇಳಿಯ ದೃಶ್ಯಾವಳಿಗಳು ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದರೆ ಇಂತಹವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಕ್ರೋಶವ್ಯಕ್ತಪಡಿಸುತ್ತಿದ್ದರೆಂದು ಕುಟುಂಬದ ಸದಸ್ಯರು ಹೇಳುತ್ತಾರೆ.
ನಿತ್ಯಾನಂದ ಬರುವಿಕೆಯ ಮಾಹಿತಿ ತಿಳಿದು ಪತ್ರಕರ್ತನ ಸೋಗಿನಲ್ಲಿ ಬಂದು ನಿತ್ಯಾನಂದನ ಮೇಲೆ ಚಪ್ಪಲಿ ಎಸೆದಿದ್ದಾರೆ. ಈಗ ಪೊಲೀಸರ ಅತಿಥಿಯಾಗಿರುವ ಶ್ರೀನಿವಾಸನ ತಪ್ಪನ್ನ ಮನ್ನಿಸಿ ಶಿಕ್ಷೆಯಾಗದಂತೆ ಮಾಡಬೇಕೆಂಬುದು ಕುಟುಂಬದವರು ಮನವಿ ಮಾಡಿಕೊಳ್ಳುತ್ತಿದ್ದಾರೆ. ತನ್ನ ಸಹೋದ್ಯೋಗಳೊಂದಿಗೆ ಚರ್ಚಿಸುವಾಗಲೂ ನಿತ್ಯಾನಂದನಿಗೆ ಶಿಕ್ಷೆಯಾದಾಗ ಮಾತ್ರ ಧರ್ಮ ಉಳಿಯಲು ಸಾಧ್ಯ ಎಂದು ಹೇಳುತ್ತಿದ್ದರೆಂದು ಸಹಶಿಕ್ಷಕ ಗಿರೀಶ್ ಹೇಳುತ್ತಾರೆ. ಶ್ರೀನಿವಾಸ್‌ರವರು ನಡೆದುಕೊಂಡಿದ್ದು ಸರಿಯಿಲ್ಲದಿದ್ದರೂ ಕುಟುಂಬದ ದೃಷ್ಟಿಯಿಂದ ಶ್ರೀನಿವಾಸರನ್ನ ಬಿಡುಗಡೆಗೊಳಿಸಬೇಕೆಂದು ಸಹಶಿಕ್ಷಕರು ಮನವಿ ಮಾಡಿದ್ದಾರೆ.
ಇಂತಿಪ್ಪ ಶ್ರೀನಿವಾಸ್ ವಿಚಿತ್ರ ಹವ್ಯಾಸಗಳನ್ನೂ ಬೆಳೆಸಿಕೊಂಡಿದ್ದರು. ಊರಿಗೆ ಬಂದ ಖ್ಯಾತನಾಮರೊಂದಿಗೆ ಫೋಟೋ ತೆಗೆಸಿಕೊಳ್ಳುವುದು ಅವುಗಳಲ್ಲೊಂದು. ರಾಜಕುಮಾರ್ ಅವರ ಭಕ್ತರಾಗಿರುವ ಶ್ರೀನಿವಾಸ್ ಅವರ ಮಕ್ಕಳಾದ ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ಅವರೊಂದಿಗೆ ಛಾಯಾಚಿತ್ರ ತೆಗೆಸಿಕೊಂಡಿದ್ದಾರೆ.
ಇಬ್ಬರು ಹೆಂಡಿರ ಮುದ್ದಿನ ಗಂಡ : ವಿಚಿತ್ರ ಮತ್ತು ವಿಶಿಷ್ಟ ವ್ಯಕ್ತಿತ್ವದ ಶಿಕ್ಷಕ ಶ್ರೀನಿವಾಸನಿಗೂ ಇಬ್ಬರು ಹೆಂಡಿರು ಎಂಬ ವಿಷಯ ಬೆಳಕಿಗೆ ಬಂದಿದೆ. ಶ್ರೀನಿವಾಸನ ಪತ್ನಿಯೊಬ್ಬರು ಶಿಕ್ಷಕಿಯಾಗಿದ್ದಾರೆ. ಇಬ್ಬರು ಹೆಂಡಿರ ಗಂಡನಾಗಿಯೂ ನಿತ್ಯಾನಂದನ ಕಾಮಕೇಳಿಯ ಬಗ್ಗೆ ಆಕ್ರೋಶವ್ಯಕ್ತಪಡಿಸಿ ಚಪ್ಪಲಿಸೇವೆ ಮಾಡಿದ್ದು ಧರ್ಮದ ಬಗ್ಗೆಯಿರುವ ಕಾಳಜಿಯಿಂದಲ್ಲ ಕೇವಲ ಪ್ರಚಾರಕ್ಕಾಗಿ ಶ್ರೀನಿವಾಸ್ ಚಪ್ಪಲಿಸೇವೆ ಮಾಡಿರಬಹುದೆಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.












Click it and Unblock the Notifications