ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಥ್ ಅವರ್ ಚಳವಳಿಗೆ ದಟ್ಸ್ ಕನ್ನಡ

By Shami
|
Google Oneindia Kannada News

ThatsKannada joins Earth Hour 2010
ಬೆಂಗಳೂರು, ಮಾ. 25 : ಈ ತಲೆಮಾರು ಅನುಭವಿಸುತ್ತಿರುವ ಅತಿದೊಡ್ಡ ಸವಾಲು ಯುದ್ಧ ಅಲ್ಲ, ಧರ್ಮಯುದ್ಧ ಅಲ್ಲ. ಆರ್ಥಿಕ ಬಿಕ್ಕಟ್ಟೂ ಅಲ್ಲ. ಮಾರಕವಾದ ಸಮೂಹ ರೋಗರುಜಿನಗಳೂ ಅಲ್ಲ. ಅಗಾಧಕ್ಕಿಂತ ಅಗಾಧವಾದ ಸವಾಲೆಂದರೆ, ಪ್ರತಿಯೊಂದು ಜೀವಿಯ ಜೀವ ಹಿಂಡುವ, ಎಲ್ಲರನ್ನೂ ಏಕಕಾಲಕ್ಕೆ ನುಂಗುವ ಶಕ್ತಿಯಿರುವ, ಕೆಟ್ಟು ಕುಲಗೆಟ್ಟು ಹೋಗುತ್ತಿರುವ ಹವಾಮಾನ.

ವಿಪರೀತ ಬದಲಾಗುತ್ತಿರುವ ಹವಾಗುಣದ ಬಗೆಗೆ ಈಗಲಾದರೂ ಮಾನವ ಎಚ್ಚೆತ್ತುಕೊಂಡು ಸರಿಪಡಿಸುವ ಹಾದಿಯಲ್ಲಿ ಹೆಜ್ಜೆಯಿಡದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ಇದು ಒಬ್ಬರ ಕೆಲಸವಲ್ಲ, ಒಂದು ಸಂಸ್ಥೆ, ಒಂದು ಸಂಘಟನೆಯ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರೀಕನೂ ಇದರ ಭಾರ ಹೊರಲೇಬೇಕು.

ಈ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬದಲಾಗುತ್ತಿರುವ ಹವಾಗುಣ ಮತ್ತು ಅದರಿಂದ ಉಂಟಾಗುತ್ತಿರುವ ಜೀವಜಂಜಾಟಗಳ ಬಗೆಗೆ ಮಾನವನಿಗೆ ಮನವರಿಕೆ ಮಾಡಿಕೊಡುವ ಉದ್ದೇಶದ ಒಂದು ಜಾಗತಿಕ ಜಾಗೃತಿ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. ಬರುವ ಶನಿವಾರ ಮಾರ್ಚ್ 27ರಂದು ಬದಲಾಗುತ್ತಿರುವ ಹವಾಗುಣದ ವಿರುದ್ಧ ಸಾಂಕೇತಿಕ ಪ್ರತಿಭಟನೆ ಕಾರ್ಯಕ್ರಮವನ್ನು ಪ್ರಪಂಚದಾದ್ಯಂತ ಹಮ್ಮಿಕೊಳ್ಳಲಾಗಿದೆ. ಇದು ಭಾರತದಿಂದ ಆಸ್ಟ್ರೇಲಿಯಾದವರೆಗೆ, ಆಸ್ಟ್ರೇಲಿಯಾದಿಂದ ಅಮೆರಿಕಾದವರೆಗೆ ಮತ್ತು ಇತರ 90 ದೇಶಗಳ 900 ನಗರಗಳಲ್ಲಿ ನಡೆಯುತ್ತದೆ.

ಈ ಕಾರ್ಯಕ್ರಮದ ಹೆಸರು ಅರ್ಥ್ ಅವರ್.

ಅರ್ಥ್ ಅವರ್ ಕಾರ್ಯಕ್ರಮವನ್ನು ಪಾಲಿಸಲು ಅನೇಕ ಸಂಸ್ಥೆಗಳು, ಕಚೇರಿಗಳು ಸಜ್ಜಾಗಿವೆ. ನಿಮ್ಮ ಕಚೇರಿ ಅಥವಾ ಮನೆಯಲ್ಲೂ ಈ ಬಗೆಯ ಆಚರಣೆಯನ್ನು ಹಮ್ಮಿಕೊಳ್ಳಬೇಕೆಂದು ದಟ್ಸ್ ಕನ್ನಡ ಸಲಹೆ ಮಾಡುತ್ತೇವೆ. ಉದಾಹರಣೆಗೆ ಜಾಗತಿಕ ಮಟ್ಟದಲ್ಲಿ ವ್ಯವಹರಿಸುವ ಐಸಿಐಸಿಐ ಬ್ಯಾಂಕ್, ಅರ್ಥ್ ಅವರ್ ಚಳವಳಿಯನ್ನು ಆಚರಿಸುತ್ತಿರುವ ಪರಿ ಹೀಗಿದೆ.

ಶನಿವಾರ ಸಾಯಂಕಾಲ ಬ್ಯಾಂಕಿನ ಎಲ್ಲ ಶಾಖೆ, ಕಚೇರಿಗಳಲ್ಲಿ ದೀಪಗಳು ಉರಿಯುವುದಿಲ್ಲ. ಸಂಜೆ 8.30ರಿಂದ 9.30ರವರೆಗೆ ತನ್ನ ಎಲ್ಲಾ ಕಚೇರಿಗಳಲ್ಲಿ ವಿದ್ಯುತ್ ಸಂಪರ್ಕವನ್ನು ಮೊಟಕುಗೊಳಿಸಿ ಬ್ಯಾಂಕಿನ ನೌಕರರು ಹವಾಮಾನ ವೈಪರೀತ್ಯಗಳ ಬಗೆಗೆ ಸಾರ್ವಜನಿಕರ ಗಮನ ಸೆಳೆಯುತ್ತಾರೆ. ಆ ವೇಳೆ ಬ್ಯಾಂಕಿನಲ್ಲಿ ಯಾವುದೇ ವ್ಯಾವಹಾರಿಕ ಚಟುವುವಟಿಕೆಗಳು ನಡೆಯುವುದಿಲ್ಲ. ಅಗತ್ಯ ಬಿದ್ದರೆ ರಕ್ಷಣೆ ನಿಮಿತ್ತ ತುರ್ತು ದೀಪಗಳನ್ನು ಸಜ್ಜಾಗಿಡಲಾಗಿರುತ್ತದೆ. ಅಂತೆಯೇ, ಬ್ಯಾಂಕಿನ ಗ್ರಾಹಕರಿಗೆ ತೊಂದರೆ ಉಂಟಾಗಬಾರದೆಂಬ ಉದ್ದೇಶದಿಂದ ಎಟಿಎಂಗಳನ್ನು ಅರ್ಥ ಅವರ್ ಕಾರ್ಯಕ್ರಮದ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ.

ದಟ್ಸ್ ಕನ್ನಡ ಡಾಟ್.ಕಾಂ ಅರ್ಥ್ ಅವರ್ ಚಳವಳಿಯಲ್ಲಿ ಭಾಗವಹಿಸುತ್ತಿದೆ. ಶನಿವಾರ ಸಾಯಂಕಾಲ 9ರಿಂದ 10 ಗಂಟೆಯವರೆಗೆ ನಮ್ಮ ಕಚೇರಿಯ ಎಲ್ಲಾ ದೀಪ, ಎಸಿ, ಕಂಪ್ಯೂಟರ್ ಮುಂತಾದ ವಿದ್ಯುತ್ ಚಾಲಿತ ಉಪಕರಣಗಳನ್ನು ತಟಸ್ಥಗೊಳಿಸಲಾಗುತ್ತದೆ. ಹೊಸ ಸುದ್ದಿ ಚಿತ್ರಗಳನ್ನು ಆ ಅವಧಿಯಲ್ಲಿ ಪ್ರಕಟಿಸುವುದಿಲ್ಲ. ಆದರೆ, ದಟ್ಸ್ ಕನ್ನಡ ಓದುವ ವರ್ಗಕ್ಕೆ ಅನಾನುಕೂಲ ಆಗಬಾರದೆಂಬ ಉದ್ದೇಶದಿಂದ ನಮ್ಮ ಸರ್ವರ್ ಗಳು ಎಂದಿನಂತೆ ಕ್ರಿಯಾಶೀಲವಾಗಿರುತ್ತವೆ. ದಟ್ಸ್ ಕನ್ನಡದ ಪುಟಗಳು ಎಂದಿನಂತೆ ನಿಮ್ಮ ಕಂಪ್ಯೂಟರ್ ಗಳಿಗೆ ಲಭ್ಯವಿರುತ್ತವೆ.

ಅರ್ಥ್ ಅವರ್ ಬಗೆಗೆ ಹೆಚ್ಚು ತಿಳಿಯುವ ಅಸಕ್ತಿ ಮತ್ತು ತಾವೂ ಪಾಲ್ಗೊಳ್ಳಬೇಕೆಂಬ ಅಭಿಲಾಷೆ ಉಳ್ಳವರು ಈ ಕೊಂಡಿಯನ್ನು ಕ್ಲಿಕ್ಕಿಸಿ ವಿಹರಿಸಬಹುದು.

ಅರ್ಥ್ ಅವರ್ 2009

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X