ಸ್ವಾಮೀಜಿಯಿಂದ ಮಹಿಳಾ ಭಕ್ತಳ ಕಿಡ್ನ್ಯಾಪ್

ಸ್ವಾಮೀಜಿಯ ಹೆಸರು ಅನೂಪ್ ಕುಮಾರ್ ಸಹಾಯ್ ಆಲಿಯಾಸ್ ಸ್ವಾಮಿ ಜಿ. ಯುವತಿಯ ಹೆಸರು ಪ್ರಿಯಾಂಕ ಶ್ರೀವಾತ್ಸವ ಆಲಿಯಾಸ್ ಡಾಲಿ. ಪ್ರಿಯಾಂಕ ಎಂಬಿಎ ವಿದ್ಯಾರ್ಥಿನಿ.
ಹಾಲು ತರುತ್ತೇನೆ ಎಂದು ಮನೆಯಿಂದ ಹೊರಗಡೆ ಹೋದ ತಮ್ಮ ಮಗಳು ಮತ್ತೆ ವಾಪಸಾಗಿಲ್ಲ ಎಂದು ಯುವತಿಯ ತಾಯಿ ಸುಧಾ ಶ್ರೀವಾತ್ಸವ ದೂರು ಕೊಟ್ಟಿದ್ದಾರೆ. ಅಪಹರಣ ರಾಜ್ ನಗರ್ ಸೆಕ್ಟರ್ 7ರಲ್ಲಿರುವ ಯುವತಿಯ ಮನೆಯಿಂದ ನಡೆದದ್ದು ಫೆ 15ರಂದು. ಸ್ವಾಮೀಜಿಯೇ ತಮ್ಮ ಮಗಳನ್ನು ಅಪಹರಿಸಿದ್ದಾನೆ ಎಂದು ಅವರ ತಾಯಿ ಹೇಳಿರುವುದಾಗಿ ಇನ್ಸ್ ಪೆಕ್ಟರ್ ರಾಜೇಶ್ ಚೌಧರಿ ತಿಳಿಸಿದ್ದಾರೆ.
ಪ್ರಿಯಾಂಕಳನ್ನು ಸ್ವಾಮೀಜಿ ಪ್ರೀತಿಸುತ್ತಿದ್ದನಂತೆ. ಅವಳನ್ನು ಮದುವೆ ಆಗುವುದಾಗಿಯೂ ದುಂಬಾಲು ಬಿದ್ದಿದ್ದನಂತೆ. ಮದುವೆ ಆಗದಿದ್ದರೆ ಕಿಡ್ನ್ಯಾಪ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಪ್ರಿಯಾಂಕಳ ತಾಯಿ ಸುಧಾ ಹೇಳಿದ್ದಾರೆ. ಬೇರೆಬೇರೆ ಸಂಖ್ಯೆಯ ಮೊಬೈಲ್ ಫೋನುಗಳಿಂದ ಅನೂಪ್ ಕುಮಾರ್ ಸಹಾಯ್ ಆಲಿಯಾಸ್ ಸ್ವಾಮಿ ಜಿ ಪ್ರಿಯಾಂಕಳಿಗೆ ಕರೆಮಾಡಿ ಪೀಡಿಸುತ್ತಿದ್ದ. ಇದರಿಂದ ತಮ್ಮ ಮಗಳು ರೋಸಿಹೋಗಿದ್ದಳು ಎಂದು ಸುಧಾ ಪೊಲೀಸರಿಗೆ ಹೇಳಿದರು. ತನ್ನನ್ನು ಮದುವೆ ಆದರೆ 50 ಲಕ್ಷದಿಂದ ಒಂದು ಕೋಟಿ ರೂಪಾಯಿವರೆಗೆ ಹಣ ಕೊಡುವುದಾಗಿಯೂ ಸ್ವಾಮಿ ಯುವತಿಗೆ ಆಫರ್ ಕೊಟ್ಟಿದ್ದ.
ಸುಧಾ ಶ್ರೀವಾತ್ಸವ ಅವರ ಪತಿ 2004ರಲ್ಲಿ ತೀರಿಕೊಂಡರು. ತಂದೆಯ ಸಾವಿನ ಘಟನೆಯಿಂದ ತತ್ತರಿಸಿದ್ದ ಮಗಳು ಪ್ರಿಯಾಂಕ ತೀವ್ರ ಡಿಪ್ರೆಷನ್ನಿಗೆ ಒಳಗಾಗಿದ್ದಳು. ಚಿಕಿತ್ಸೆಗೆ ಅನೇಕ ತಜ್ಞ ವೈದ್ಯರನ್ನು ಭೇಟಿಮಾಡಲಾಗಿತ್ತು. ಆದರೆ, ಯಾವ ಚಿಕಿತ್ಸೆಗಳೂ ಫಲಕಾರಿಯಾಗದ ಕಾರಣ ಆಧ್ಯಾತ್ಮ ಚಿಕಿತ್ಸೆ ಕೊಡಿಸಲು ತಾಯಿ ಮಗಳನ್ನು ಸ್ವಾಮಿಜಿ ಬಳಿಗೆ ಕರೆದೊಯ್ದಿದ್ದರು. ಹಾಗಾಗಿ ಸ್ವಾಮೀಜಿಗೆ ಅವರ ಕುಟುಂಬದ ಪರಿಚಯ ಏರ್ಪಟ್ಟಿತ್ತು.












Click it and Unblock the Notifications