ವೀಣಾಳ ಅಸ್ಥಿಪಂಜರ ಬಿಡಿಸಿದ ಕೊಲೆ ರಹಸ್ಯ

ಇದೊಂದು ಮಾಮೂಲಿ ಕಥೆಯಂತೆ ಮೇಲ್ನೋಟಕ್ಕೆ ಕಂಡುಬಂದರೂ ಅದರ ಒಳಗೆ ಭಯಾನಕ ಸತ್ಯಗಳಿವೆ. ಆ ಭಯಾನಕ ಸತ್ಯಗಳು ಆರಂಭವಾಗುವುದೇ ಒಂದು ಜಗಳದ ಮೂಲಕ. ಈ ಜಗಳ ಗಂಡ-ಹೆಂಡಿರಿಬ್ಬರು ಮಾಡಿಕೊಂಡ ಮಾಮೂಲು ಜಗಳವಲ್ಲ. ಇದರ ಹಿಂದೆ ಒಂದು ಏಡ್ಸ್‌ನ ಕಥೆಯಿದೆ.
2007ರ ಮೇ 14ರಂದು ತಮ್ಮ ಕರಿಬಸಪ್ಪನ ಮನೆಗೆ ಸಿಆರ್‌ಪಿಎಫ್ ಪೇದೆ ರಾಜಶೇಖರ್ ಮತ್ತು ಟಿ.ವೀಣಾ ಹೋಗುತ್ತಾರೆ. ಕರಿಬಸಪ್ಪನಿಗೆ ಮಗುವಾಗಿದ್ದೇ ಅದಕ್ಕೆ ಕಾರಣ. ಈ ಮಗುವನ್ನು ನೋಡಿಕೊಂಡು ವಾಪಸ್ ತನ್ನ ಊರಾದ ಹೊಳೆಹನಸವಾಡಿ ಗ್ರಾಮಕ್ಕೆ ಮರಳುವಾಗ ಪುಟ್ಟದೊಂದು ಜಗಳ ಆರಂಭವಾಗುತ್ತದೆ. ಕರಿಬಸಪ್ಪನಿಗೆ ಮಗು ಆಗಿದೆ. ಆದರೆ, ನಮಗೆ ಆಗಲಿದ್ದ ಮಗುವನ್ನು ಅಬಾರ್ಷನ್ ಮಾಡಿಸಿದ್ದಾಯಿತು. ಯಾರದೋ ಜೊತೆಗೂಡಿ ಏಡ್ಸ್ ಹಚ್ಚಿಕೊಂಡು ನನ್ನ ಮಗುವನ್ನು ಕೊಂದುಬಿಟ್ಟೆ... ಎಂದು ಟಿ.ವೀಣಾ ದಾರಿಯಲ್ಲಿ ರಂಪಾಟ ಆರಂಭಿಸಿದಳು. ಪದೇ ಪದೇ ಏಡ್ಸ್‌ನ ಕಾರಣದಿಂದ ಹೀಗೆ ವೀಣಾ ಮತ್ತು ರಾಜಶೇಖರ್ ಜಗಳವಾಡಿಕೊಳ್ಳುತ್ತಿದ್ದರು. ರಾಜಶೇಖರ್ ಕೋಪದಿಂದ ಹಿಂಸಿಸುತ್ತಿದ್ದ.
ಆದರೆ, ಈಗ ರಾಜಶೇಖರ್ ತನ್ನ ಮಿತಿಯನ್ನು ಮೀರಿಬಿಟ್ಟಿದ್ದ. ದಾರಿ ಮಧ್ಯದಲ್ಲಿ ಕೆಎ14,ಆರ್ 3075 ನಂಬರಿನ ಬೈಕ್‌ನ್ನು ಕೆಡವಿ ತನ್ನ ಹೆಂಡತಿ ವೀಣಾಳಿಗೆ ಹೊಡೆದ. ವೀಣಾ ಎಚ್ಚರ ತಪ್ಪಿ ಬಿದ್ದವಳು ಹಾಗೆಯೇ ಸಾವಿಗೆ ಶರಣಾದಳು. ವೀಣಾ ಸತ್ತಿದ್ದಾಳೆ ಎಂಬ ಅಂಶವನ್ನರಿತ ಸಿಆರ್‌ಪಿಎಫ್ ಪೇದೆ ಕೂಡಲೇ ಉಪಾಯ ಹೂಡಿದ. ತನ್ನ ತಮ್ಮ ಕರಿಬಸಪ್ಪನನ್ನು ಎಳೆದುತಂದ. ಅದೇ ಸ್ಥಳಕ್ಕೆ ಹೊಳೆಹನಸವಾಡಿಯ ವಾಸಿಯೇ ಆದ ಎಲ್‌ಐಸಿ ಏಜೆಂಟ್ ಲೋಕೇಶನೂ ಬಂದ. ಮೂವರೂ ಸೇರಿ ಹೊಳೆಹನಸವಾಡಿಯ ರಸ್ತೆ ಪಕ್ಕದಲ್ಲಿಯೇ ಗುಂಡಿ ತೋಡಿ ವೀಣಾಳ ಹೆಣವನ್ನು ಮುಚ್ಚಿ ಹಾಕಿದರು. ಆ ನಂತರದಲ್ಲಿ ಸೃಷ್ಟಿಯಾಗಿದ್ದೇ ಮತ್ತೊಂದು ಕಥೆ. ವೀಣಾ ಕಾಣೆಯಾಗಿದ್ದಾಳೆ!
ಕರಿಬಸಪ್ಪ ಮತ್ತು ಎಲ್‌ಐಸಿ ಏಜೆಂಟ್ ಲೋಕೇಶ್‌ನ ಸಹಕಾರದೊಂದಿಗೆ ಹೆಣವನ್ನು ಮುಚ್ಚಿಹಾಕಿದ ನಂತರದಲ್ಲಿ ಮೇ 16ರಂದು ಶಿವಮೊಗ್ಗದ ಜಯನಗರ ಪೊಲೀಸ್ ಸ್ಟೇಷನ್‌ಗೆ ರಾಜಶೇಖರ್ ಓಡೋಡಿ ಬರುತ್ತಾನೆ. ಆತನ ಕೈಯಲ್ಲೊಂದು ಪಾಸ್‌ಪೋರ್ಟ್ ಸೈಜಿನ ಫೋಟೋ ಇರುತ್ತದೆ. ಅದು ವೀಣಾಳದು. ಜಯನಗರ ಠಾಣೆಯಲ್ಲಿ ಮೇ 16, 2007ರಂದು ಶ್ರೀಮತಿ ಟಿ.ವೀಣಾ ಎಂಬ ಮಹಿಳೆ ಕಾಣೆಯಾಗಿದ್ದಾಳೆ ಎಂದು ಪ್ರಕರಣ ದಾಖಲಾಗುತ್ತದೆ (ಜಯನಗರ ಪಿಎಸ್‌ಸಿಆರ್ 45/07). ಪ್ರಕರಣ ದಾಖಲಾಗುತ್ತಿದ್ದಂತೆಯೇ ಕೊಲೆಗಾರ ರಾಜಶೇಖರ್ ನಿರುಮ್ಮಳನಾಗುತ್ತಾನೆ. ಆ ನಂತರದಲ್ಲಿ ರಾಜಶೇಖರ್ ಲಕ್ನೋ ದಿಕ್ಕಿನತ್ತ ಹೊರಡುತ್ತಾನೆ. ಹೀಗೆ, ಕೊಲೆಯಾದ ವೀಣಾ ನಾಪತ್ತೆಯಾಗಿದ್ದಾಳೆಂದು ಪ್ರಕರಣ ದಾಖಲಿಸುವ ಹೊಳೆಹನಸವಾಡಿಯ ರಾಜಶೇಖರ್ ಅಲ್ಲಿ ಮತ್ತೊಂದು ಕರಾಮತ್ತು ತೋರಿಸುತ್ತಾನೆ.
20 ಲಕ್ಷದ ಎಲ್‌ಐಸಿ ಪಾಲಿಸಿ : ಮೇ 14ರಂದು ರಾತ್ರಿ ವೀಣಾಳನ್ನು ಕೊಲೆ ಮಾಡಿದ ರಾಜಶೇಖರ್‌ನಿಗೆ ಆತನ ಸ್ನೇಹಿತನೇ ಆಗಿದ್ದ ಎಲ್‌ಐಸಿ ಏಜೆಂಟ್ ಲೋಕೇಶ್ ಮತ್ತೊಂದು ಐಡಿಯಾ ಕೊಡುತ್ತಾನೆ. ವೀಣಾಳ ಹೆಣವನ್ನು ಮಣ್ಣು ಮಾಡಿದ್ದೇವೆ. ಅದು ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣವನ್ನೂ ದಾಖಲಿಸಿದ್ದೇವೆ. ಈಗ ಕೊಲೆಯಾಗಿರುವ ವೀಣಾಳ ಹೆಸರಿನಲ್ಲಿ ಎಲ್‌ಐಸಿ ಪಾಲಿಸಿ ಮಾಡಿಸೋಣ ಎಂದು ರಾಜಶೇಖರನೊಂದಿಗೆ ಕುಳಿತು ಲೋಕೇಶ ಯೋಜನೆ ರೂಪಿಸುತ್ತಾನೆ. 625353593 ನಂಬರಿನ ಎಲ್‌ಐಸಿ ಪಾಲಿಸಿ ಯಾವುದೇ ಮೆಡಿಕಲ್ ಟೆಸ್ಟಿಲ್ಲದೇ 2007ರ ಜೂನ್ 7ರಂದು ಪ್ರತಿವರ್ಷದ ರೂ.11,265 ಕಂತಿನಲ್ಲಿ ಆರಂಭವಾಗುತ್ತದೆ.
ಏಡ್ಸ್‌ನ ಕಥೆ : ಸಿಆರ್‌ಪಿಎಫ್‌ನಲ್ಲಿ ಜವಾನನಾಗಿದ್ದ ರಾಜಶೇಖರ್‌ಗೆ ಮದುವೆಗೆ ಮುಂಚೆ ಒಂದು ಸಂಬಂಧವಿತ್ತು. ಹೊಳೆಬೆನವಳ್ಳಿಯ ವಾಸಿಯಾಗಿದ್ದ ಸುಧಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಸುಧಾಳನ್ನು ಹಾನಗಲ್‌ನ ಓರ್ವ ಲಾರಿ ಚಾಲಕನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಲಾರಿ ಚಾಲಕ ಏಡ್ಸ್ ರೋಗಕ್ಕೆ ತುತ್ತಾಗಿದ್ದ. ಆಗಾಗ್ಗೆ ತನ್ನೂರಿಗೆ ಬರುತ್ತಿದ್ದ ಸುಧಾಳನ್ನು ಹುಡುಕಿಕೊಂಡು ರಾಜಶೇಖರನೂ ಸಹ ರಜೆ ಹಾಕಿ ಊರಿಗೆ ಮರಳುತ್ತಿದ್ದ. ಅಲ್ಲಿ ಇಬ್ಬರು ಸಂಬಂಧ ಬೆಳೆಸಿಕೊಂಡಿದ್ದರು. ಲಾರಿ ಚಾಲಕನಿಂದ ಸುಧಾಳಿಗೆ ಅದಾಗಲೇ ಏಡ್ಸ್ ಬಂದಾಗಿತ್ತು. ಈಕೆಯ ಸಹವಾಸವನ್ನು ಮಾಡಿದ್ದ ರಾಜಶೇಖರನಿಗೂ ಏಡ್ಸ್ ಹಬ್ಬಿತ್ತು. ಹಾನಗಲ್ ಬಿಟ್ಟು ಬಂದಿದ್ದ ಸುಧಾ ಸಹ ಇದೇ ಏಡ್ಸ್‌ನಿಂದ ಭಯಾನಕ ಸಾವು ಕಂಡಿದ್ದಳು. ಸುಧಾ ಸಾವಿನ ನಂತರದಲ್ಲಿ ರಾಜಶೇಖರ್ ಹೊಳೆಹನಸವಾಡಿಯ ತಿಪ್ಪೇಸ್ವಾಮಿ ಎಂಬುವವರ ಇಬ್ಬರು ಮಕ್ಕಳಾದ ವೀಣಾ ಮತ್ತು ಶ್ವೇತಾರಲ್ಲಿ ವೀಣಾಳನ್ನು ಆಯ್ಕೆ ಮಾಡಿಕೊಂಡು 2005ರಲ್ಲಿ ಮದುವೆಯಾಗಿದ್ದ.
ಆರಂಭದಲ್ಲಿ ಸಂಸಾರ ಸುಖಮಯವಾಗಿತ್ತು. ರಾಜಶೇಖರ್‌ಗೆ ಸ್ವತಃ ಏಡ್ಸ್ ಇರುವುದು ಗೊತ್ತಿರಲಿಲ್ಲ. ಈ ಇಬ್ಬರು ದಂಪತಿಗಳಿಗೆ ಮಗುವೊಂದು ಆಗುವ ಲಕ್ಷಣಗಳು ಕಂಡುಬಂದವು. ಆಗ ವೀಣಾ ವೈದ್ಯರ ಬಳಿ ಪರೀಕ್ಷೆಗೆಂದು ಹೋದಾಗ, ಅಲ್ಲಿ ಹೊಟ್ಟೆಯಲ್ಲಿರುವ ಮಗುವಿಗೆ ಏಡ್ಸ್ ಇರುವುದು ಪತ್ತೆಯಾಯಿತು. ನಂತರ, ವೀಣಾಳ ರಕ್ತ ಪರೀಕ್ಷೆಯನ್ನು ಆಗ ಮಾಡಿಸಲಾಯಿತು. ಪರೀಕ್ಷೆಯಲ್ಲಿ ವೀಣಾಳಿಗೆ ಏಡ್ಸ್ ಇರುವುದು ಕಂಡುಬಂತು. ತಾಯಿ ಮಗುವಿನ ಆರೋಗ್ಯಕ್ಕೆ ಧಕ್ಕೆ ಎಂಬ ಕಾರಣದಿಂದಾಗಿ ವೈದ್ಯರ ಸಲಹೆಯ ಮೇರೆಗೆ ವೀಣಾಳ ಮನವೊಲಿಸಿ ಅಬಾರ್ಷನ್ ಮಾಡಿಸಲಾಯಿತು. ಇಲ್ಲಿಂದ ಆರಂಭವಾಯಿತು ದಂಪತಿಗಳಿಬ್ಬರ ಮಧ್ಯದ ಭಯಾನಕ ಕದನ.
ಇಡೀ ಕಥೆಯ ಎಳೆಬಿಡಿಸಿದಂತೆಲ್ಲಾ ರಾಜಶೇಖರ್‌ನ ಏಕೈಕ ತಪ್ಪಿನಿಂದಾಗಿ ತಾನೂ ಏಡ್ಸ್ ತರಿಸಿಕೊಂಡು ತನ್ನ ಹೆಂಡತಿ ಮಕ್ಕಳಿಗೂ ಹಬ್ಬಿಸಿದ. ಮೊದಲು ಮಗುವಿನ ಕೊಲೆಯಾಯಿತು. ಆ ನಂತರದಲ್ಲಿ ಹೆಂಡತಿ ವೀಣಾಳನ್ನು ಕೊಲ್ಲಲಾಯಿತು. ಹೀಗೆ, ಕೊಂದ ಆರೋಪದ ಮೇಲೆ ರಾಜಶೇಖರ್ ಜೈಲಿನಲ್ಲಿದ್ದಾನೆ. ಈತನ ಜೊತೆ ಹೆಣ ಹೂಳಲು ಕೈಜೋಡಿಸಿದ್ದ ತಮ್ಮ ಕರಿಬಸಪ್ಪ ಕೂಡ ಶಿಕ್ಷೆಗಾಗಿ ಕಾಯುತ್ತಿದ್ದಾನೆ. ಇಡೀ ಪ್ರಕರಣದ ಸೂತ್ರಧಾರಿ ಎಲ್‌ಐಸಿ ಏಜೆಂಟ್ ಲೋಕೇಶ್ ಮಾತ್ರತಲೆಮರೆಸಿಕೊಂಡಿದ್ದಾನೆ.
ಶ್ವೇತಾ ಬರೆದ ಪತ್ರ : ಅಕ್ಕ ಮತ್ತು ಭಾವ ಪದೇ ಪದೇ ಜಗಳವಾಡುತ್ತಿದ್ದರು. ಅಕ್ಕ ವೀಣಾ ಕಳೆದ 2007ರ ಮೇ ತಿಂಗಳಿನಿಂದ ಕಾಣೆಯಾಗಿದ್ದಾಳೆ. ಆಕೆಯನ್ನು ಕೊಲೆ ಮಾಡಿ ಎಲ್ಲೋ ಮುಚ್ಚಿಹಾಕಲಾಗಿದೆ. ಈ ಬಗ್ಗೆ ತನಿಖೆ ಮಾಡಿ ಎಂದು 2010ರ ಜ.28ರಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೊಂದು ಪತ್ರ ಬರುತ್ತದೆ. ಈ ಪತ್ರವನ್ನು ಬರೆದವಳು ಕೊಲೆಯಾದ ವೀಣಾಳ ತಂಗಿ ಶ್ವೇತಾ.
ಈ ಪತ್ರದ ಆಧಾರದ ಮೇಲೆ ತನಿಖೆ ಆರಂಭಿಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದಲಿಂಗಪ್ಪರವರ ಮಾರ್ಗದರ್ಶನದಲ್ಲಿ ಇಡೀ ಪ್ರಕರಣವನ್ನು ಭೇದಿಸುತ್ತಾರೆ. ರಾಜಶೇಖರ್ ಮತ್ತು ಕರಿಬಸಪ್ಪನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸಂಪೂರ್ಣ ವಿವರ ಬಹಿರಂಗವಾಗಿ ಮುಚ್ಚಿಹೋಗಿದ್ದ ವೀಣಾಳ ಶವವನ್ನು ಹೊರತೆಗೆಯಲಾಗುತ್ತದೆ. ಅಸ್ಥಿಪಂಜರವಾಗಿದ್ದ ವೀಣಾ ಆಗ ಹೇಳಿದ್ದು ತನ್ನದೇ ಕೊಲೆಯ ಕಥೆಯನ್ನು.
ಶಾಸಕರ ಪ್ರಭಾವ : ವೀಣಾ ಕೊಲೆ ಪ್ರಕರಣದ ಸೂತ್ರಧಾರಿಯಂತಿರುವ ಎಲ್‌ಐಸಿ ಏಜೆಂಟ್ ಲೋಕೇಶ್ ಈಗ ತಲೆಮರೆಸಿಕೊಂಡಿದ್ದಾನೆ. ಆತ ತಲೆಮರೆಸಿಕೊಳ್ಳಲು ಮಾರ್ಗದರ್ಶನ ನೀಡಿದ್ದು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಜಿ.ಕುಮಾರಸ್ವಾಮಿ ಎಂಬುದು ಚರ್ಚೆಗೊಳಗಾಗಿರುವ ವಿಚಾರ. ಲೋಕೇಶ್ ಶಾಸಕ ಕುಮಾರಸ್ವಾಮಿಯವರ ಬಲಗೈ ಬಂಟನೆಂದು ಹೇಳಲಾಗುತ್ತಿದ್ದು, ಆರೋಪಿ ಲೋಕೇಶ್ ಇದೇ ಶಾಸಕರ ಬಂದೋಬಸ್ತ್‌ನಲ್ಲಿದ್ದಾನೆ. ಈ ಲೋಕೇಶ್ ಸಿಕ್ಕರೆ ಇಡೀ ಕೊಲೆ ಪ್ರಕರಣದ ಒಳಸುಳಿವು ತಿಳಿದುಬರಲಿವೆ ಎಂದು ಹೇಳಲಾಗುತ್ತಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications