ಪ್ರಮೋದ್ ಮುತಾಲಿಕ್ ಮುಖಕ್ಕೆ ಮಸಿ

ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ 'ಪ್ರೇಮಯುದ್ಧ' ಎಂಬ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದ ಹಿಂದಿನ ಸಂಸ ಬಯಲು ಮಂದಿರದಲ್ಲಿ ಸುವರ್ಣ ನ್ಯೂಸ್ ಚಾನಲ್ ಆಯೋಜಿಸಿತ್ತು. ಪ್ರೇಮಿಗಳ ದಿನವನ್ನು ವಿರೋಧಿಸಿದ್ದ ಪ್ರಮೋದ್ ಮುತಾಲಿಕ್, ಪ್ರೇಮಿಗಳ ಪರ ವಹಿಸಿಕೊಂಡಿರುವ 'ಅಗ್ನಿ' ಶ್ರೀಧರ್ ಅವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಚರ್ಚೆ ಪರ ಮತ್ತು ವಿರೋಧದಿಂದಾಗಿ ತಾರಕಕ್ಕೇರಿದ ಸಂದರ್ಭದಲ್ಲಿ ಏಕಾಏಕಿ ವೇದಿಕೆಗೆ ಧಾವಿಸಿದ ಮಂಜುನಾಥ್ ಮತ್ತು ಚೇತನ್ ಎಂಬಿಬ್ಬರು ಪ್ರಮೋದ್ ಮುತಾಲಿಕ್ ಮುಖಕ್ಕೆ ಮಸಿ ಬಳಿದಿದ್ದಾರೆ. ಕೂಡಲೆ ಶ್ರೀರಾಮ ಸೇನೆ ಕಾರ್ಯಕರ್ತರು ಮಸಿ ಬಳಿದವರ ಹಲ್ಲೆಗೆ ಯತ್ನಿಸಿದ್ದಾರೆ. ಶ್ರೀರಾಮಸೇನೆ ಕಾರ್ಯಕರ್ತೆ ಭವಾನಿ ಶಂಕರ್ ಅವರು ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಸಮಾಜ ಸೇವಕಿ ವಿಮಲಾ ಎಂಬುವವರು ಆರೋಪಿಸಿದ್ದಾರೆ. ಭವಾನಿ ಅವರನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಿರುಗಿದಾಗ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ದಾರೆ. ಆಗ ಪ್ರೇಕ್ಷಕರು ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದ್ದಾರೆ. ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದ ಸುವರ್ಣ ನ್ಯೂಸ್ ಚಾನಲ್ಲಿನ ಪಾಲಿಟಿಕಲ್ ಎಡಿಟರ್ ರಂಗನಾಥ್ ಭಾರದ್ವಾಜ್ ಅವರ ಮೇಲೆ ಕೂಡ ಹಲ್ಲೆಗೆ ಯತ್ನ ಮಾಡಲಾಗಿದೆ. ಇದೇ ಕಾರ್ಯಕ್ರಮದಲ್ಲಿ ಕೆಲ ಟಿವಿ ಚಾನಲ್ಲುಗಳು ನೇರ ಪ್ರಸಾರ ಮಾಡಲು ಯತ್ನಿಸಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಮೋದ್ ಮುತಾಲಿಕ್, ಇದೊಂದು ಪೂರ್ವನಿಯೋಜಿತ ಕೃತ್ಯ. ಮಸಿ ಬಳಿಯಲು ಯತ್ನಿಸಿದವರು ಯಾರೆಂದು ನಮಗೆ ತಿಳಿದುಬಂದಿದೆ. ಹಿಂದೂ ಸಮಾಜ ಇಂಥವರಿಗೆ ತಕ್ಕ ಉತ್ತರ ಕೊಡುತ್ತದೆ. ಇದು ಪ್ರಜಾಪ್ರಭುತ್ವಕ್ಕೇ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications