ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಗಣಮನ ಅಧಿನಾಯಕ ಜಯಹೇ

By Prasad
|
Google Oneindia Kannada News

Shankar Bidari, Bangalore Police Commissioner
ಬೆಂಗಳೂರು, ಜ. 25 : ಭಯೋತ್ಪಾದಕರ ದಾಳಿ ಬೆದರಿಕೆಯ ಕಾರಣ ಹಿಂದೆಂದೂ ಕಾಣದಂಥ ಬಿಗಿ ಭದ್ರತೆಯಲ್ಲಿ ಭಾರತದ ಐಟಿ ಕಾರ್ಯಚಟುವಟಿಕೆಯ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಜನವರಿ 26ರಂದು 61ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಪೊಲೀಸರ ಹದ್ದಿನ ಕಣ್ಣುಗಳು ನಗರದಾದ್ಯಂತ ನಾಳೆ ನೆಟ್ಟಿರುತ್ತವೆ.

ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅತ್ಯಂತ ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಸುದ್ದಿಗಾರರಿಗೆ ಸೋಮವಾರ ವಿವರಿಸಿದರು.

ಉತ್ಸವದ ಕೇಂದ್ರ ಬಿಂದುವಾಗಿರುವ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ವಿಶೇಷ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 15 ತುಕುಡಿ, ರ‌್ಯಾಪಿಡ್ ರೆಸ್ಪಾನ್ಸ್ ಟೀಮ್ ಮತ್ತು ಸಿಟಿ ಆರ್ಮಡ್ ರಿಸರ್ವ್ ನ ಮೂರು ತುಕುಡಿಗಳು ಪರೇಡ್ ಮೈದಾನದಲ್ಲಿ ಭದ್ರತೆಯ ಜವಾಬ್ದಾರಿ ಹೊತ್ತಿವೆ. ನಾಳೆ ಬೆಳಗ್ಗೆ ರಾಜ್ಯಪಾಲ ಎಚ್ಆರ್ ಭಾರದ್ವಾಜ್ ಅವರು ತ್ರಿವರ್ಣ ಧ್ವಜ ಹಾರಿಸಿ ಗಾರ್ಡ್ ಆಪ್ ಆನರ್ ಗೌರವ ಸ್ವೀಕರಿಸಲಿದ್ದಾರೆ.

ಪರೇಡ್ ವೀಕ್ಷಿಸಲು ವಿಐಪಿಗಳು, ಮತ್ತಿತರ ಗಣ್ಯರು ಮತ್ತು ಸಾವಿರಾರು ನಾಗರಿಕರು ಆಗಮಿಸುತ್ತಿರುವುದರಿಂದ ಮೈದಾನದ ಸುತ್ತಮುತ್ತ 16 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 2,600 ಶಾಲಾ ಮಕ್ಕಳು ನಾನಾ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ರಂಜಿಸಲಿದ್ದಾರೆ. ಸ್ಕೌಟ್ಸ್, ಎನ್ ಸಿಸಿ ಕೆಡೆಟ್ಸ್, ಸೇವಾದಳದ ಕಾರ್ಯಕರ್ತರು ಪರೇಡಿನಲ್ಲಿ ಭಾಗವಹಿಸುತ್ತಿದ್ದಾರೆ.

ಹ್ಯಾಂಡ್ ಬ್ಯಾಗ್, ಕ್ಯಾಮೆರಾ, ಮೊಬೈಲ್ ಮತ್ತು ಛತ್ರಿಗಳನ್ನು ಸುರಕ್ಷತೆಯ ಕಾರಣ ಮೈದಾನದಲ್ಲಿ ತರುವುದನ್ನು ನಿಷೇದಿಸಲಾಗಿದೆ. ಯಾವುದೇ ನಿಷೇಧಿತ ಸಲಕರಣೆಗಳನ್ನು ತರದಂತೆ ಲೋಹ ಶೋಧಕಗಳಿಂದ ಪ್ರತಿಯೊಬ್ಬರನ್ನು ಶೋಧಿಸಿ ಮೈದಾನದ ಒಳಗೆ ಬಿಡಲಾಗುವುದು ಎಂದು ಬಿದರಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಬಿಗಿಭದ್ರತೆ : ವಿವಾದದ ಕೇಂದ್ರಬಿಂದುವಾಗಿರುವ ಈದ್ಗಾ ಮೈದಾನದಲ್ಲಿ ಹುಬ್ಬಳ್ಳಿ-ಧಾರವಾಡ ಕಾರ್ಪೋರೇಷನ್ ಕಮಿಷನರ್ ಅವರು ಧ್ವಜ ಹಾರಿಸುವ ಕಾರ್ಯಕ್ರಮವಿರುವುದರಿಂದ ಬಿಗಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಸಾಧಕರಿಗೆ ಸನ್ಮಾನ : ಗಣರಾಜ್ಯೋತ್ಸವ ದಿನಾಚರಣೆಯ ಶುಭ ಸಂದರ್ಭದಲ್ಲಿ ಘನತೆವೆತ್ತ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಜನವರಿ 26ರಂದು ಸಂಜೆ 4 ಗಂಟೆಗೆ ರಾಜ ಭವನದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಿದ್ದಾರೆ. ಸಂಜೆ 5 ಗಂಟೆಗೆ ರಾಜ ಭವನದಲ್ಲಿ ಬೆಂಗಳೂರಿನ ಗಣ್ಯ ವ್ಯಕ್ತಿಗಳಿಗೆ ಲಘು ಉಪಹಾರ ಕೂಟ ಏರ್ಪಡಿಸಿದ್ದಾರೆ.

ಸಂಜೆ 6.30 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯಪಾಲ ಭಾರದ್ವಾಜ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರುಗಳು ಉಪಸ್ಥಿತರಿರುವರು.

ಸಾಂಸ್ಕೃತಿಕ ಕಾರ್ಯಕ್ರಮಗಳು : ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿ.ಇ.ಎಲ್. ಜಾಲಹಳ್ಳಿ, ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಉದ್ಯಾನವನ, ಕೋಲ್ಸ್‌ಪಾರ್ಕ್, ರಾಮಮಂದಿರ ಆಟದ ಮೈದಾನ ರಾಜಾಜಿನಗರ, ಉದಯಭಾನು ಕಲಾ ಸಂಘ, ಕೆಂಪೇಗೌಡನಗರ, ಎಂಸಿಹೆಚ್‌ಎಸ್ ಪಾರ್ಕ್ ಬಿ.ಟಿ.ಎಂ. 2ನೇ ಹಂತ, ಗಾಯತ್ರಿ ದೇವಸ್ಥಾನ, ಯಶವಂತಪುರ, ಮಲ್ಟಿಪರ್‍ಪಸ್ ಹಾಲ್ ಕೇಂದ್ರೀಯ ಸದನ, ಕನ್ನಡ ಸಂಘ, ಸಿಪಿಡಬ್ಲ್ಯೂಡಿ ಕ್ವಾರ್ಟಸ್, ಹೆಚ್.ಎಸ್.ಆರ್. ಲೇಔಟ್, ಸರ್ಕಾರಿ ಮಾಧ್ಯಮಿಕ ಶಾಲೆ ಆವರಣ, ಪೀಣ್ಯ ದಾಸರಹಳ್ಳಿ, ತುಮಕೂರು ರಸ್ತೆ ಇಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X