ಸೂರ್ಯಗ್ರಹಣ : ಉಡುಪಿಯಲ್ಲಿ ವಿಶೇಷ ಪೂಜೆ

ಉಡುಪಿ : ಪರ್ಯಾಯ ಮಹೋತ್ಸವದ ಭರದ ಸಿದ್ದತೆಯಲ್ಲಿರುವ ಉಡುಪಿಯಲ್ಲಿ ಜನಸಂಚಾರ ಹೆಚ್ಚುಕಮ್ಮಿ ಸ್ಥಬ್ದ. ಮೋಡ ಕವಿದ ವಾತಾವರಣ. ನಗರದ ಮತ್ತು ಜಿಲ್ಲೆಯ ಪ್ರಸಿದ್ದ ಶ್ರೀ ಕೃಷ್ಣಮಠ, ಅನಂತೇಶ್ವರ, ಕಡಿಯಾಳಿ, ಕುಂಜಾರು, ಆನೆಗುಡ್ಡೆ, ಕೊಲ್ಲೂರು, ಮಂದರ್ತಿ, ಮುಂಡ್ಕೂರು, ಎಲ್ಲೂರು ಮುಂತಾದ ದೇವಾಲಯಗಳಲ್ಲಿ ವಿಶೇಷ ಪೂಜೆ. ಮಲ್ಪೆ ಕಡಲ ತೀರದಲ್ಲಿ ಜನಸಾಗರ. ವಡಭಾಂಡೇಶ್ವರನ ಸನ್ನಿಧಾನದಲ್ಲಿ ಹೋಮ ಹವನ. ರಥಬೀದಿಯಲ್ಲಿ ಗ್ರಹಣ ಪ್ರಯುಕ್ತ ಬೇಗನೆ ಸಂಪನ್ನಗೊಂಡ ಚುರ್ಣೋತ್ಸವ. ವರದಿ : ಸತ್ಯಬೋಧ, ಪಣಿಯಾಡಿ
ಮಂಗಳೂರು : ಸೂರ್ಯನ ಕಣ್ಣುಮುಚ್ಚಾಲೆ ಮಧ್ಯೆ ಮಹಾನಗರದ ದೈನಂದಿನ ಚಟುವಟಿಕೆ ಏರುಪೇರು. ಮನೆಯಿಂದ ಹೊರಗೆ ಬರದ ಜನ. ಶರವು, ಕದ್ರಿ, ಗೋಕರ್ಣನಾಥೇಶ್ವರ, ಮಂಗಳಾದೇವಿ, ಧರ್ಮಸ್ಥಳ, ಕುಕ್ಕೆ, ಕಟೀಲು, ಬಪ್ಪನಾಡು ದೇವಾಲಯಗಳಲ್ಲಿ ವಿಶೇಷ ಪೂಜೆ. ನೇತ್ರಾವತಿ ನದಿಯಲ್ಲಿ ಪುಣ್ಯ ಸ್ನಾನ. ಮಾಹಿತಿ : ಶೃತಿ, ವಿದ್ಯಾರ್ಥಿ, ಕುಲಶೇಖರ
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಸಂಕ್ರಾಂತಿಯಂದು ಗಿಜಿಗುಡುತ್ತಿದ್ದ ದಾಜಿಬಾನ್ ಪೇಟ್, ಬಂಡಿವಾಡ ಅಗಸಿ ಬಸ್ ನಿಲ್ದಾಣಗಳು ಕಂಕಣ ಸೂರ್ಯಗ್ರಹಣ ನಿಮಿತ್ತ ಭಣಗುಡುತ್ತಿದ್ದವು. ಅನೇಕ ಓಣಿಗಳಲ್ಲಿ ಗ್ರಹಣದ ಸಮಯದಲ್ಲಿ ಜನ ಹೊರಬರದೇ ಮನೆಯಲ್ಲಿಯೇ ಉಳಿದರು. ಆದರೆ, ನೃಪತುಂಗ ಬೆಟ್ಟದಲ್ಲಿ ಮನೆಯಿಂದ ಹೊರಬಿದ್ದ ಅನೇಕ ಆಸಕ್ತರು ಸೂರ್ಯ ಕನ್ನಡಕ ಬಳಸಿ ಸೂರ್ಯನನ್ನು ಚಂದ್ರ ಭಾಗಶಃ ನುಂಗಿದ್ದನ್ನು ವೀಕ್ಷಿಸಿ ವಿಸ್ಮಿತರಾದರು. ಮಾಹಿತಿ : ಗೋಪಾಲ ಕುಲಕರ್ಣಿ, ಹುಬ್ಬಳ್ಳಿ.
ಕೊಳ್ಳೇಗಾಲ : ಚಾಮರಾಜಾನಗರ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಇಂದು ಬೆಳಗ್ಗೆ ಒಳ್ಳೆಯ ಬಿಸಿಲು. ಆಕಾಶ ಶುಭ್ರನೀಲಿಯಾಗಿರುವುದರಿಂದ ಗ್ರಹಣ ವೀಕ್ಷಕರಿಗೆ ಆನಂದವೋ ಆನಂದ. ಬರಿಗಣ್ಣಿನಿಂದ ಗ್ರಹಣ ನೋಡಬೇಡಿ ಎಂದು ಮಕ್ಕಳಿಗೆ ತಿಳಿಯಹೇಳುವುದೇ ಕೊಳ್ಳೇಗಾಲದಲ್ಲಿ ಹಿರಿಯರಿಗೆ ದೊಡ್ಡ ಕೆಲಸವಾಗಿದೆ ಎಂದು ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿರುವ ಗೊಬ್ಬರದ ಅಂಗಡಿ ಮಾಲೀಕ ಜ್ಞಾನೇಶ್ ತಿಳಿಸಿದ್ದಾರೆ. ಸೌರ ಕನ್ನಡಕ ಇಲ್ಲಿ ಹೆಚ್ಚಾಗಿ ಸಿಗುವುದಿಲ್ಲ ಆದ್ದರಿಂದ ಮಕ್ಕಳಿಗೆ ನಿರಾಶೆ. ಕೆಲವರು ಮೈಸೂರಿನಿಂದ ಕನ್ನಡಕ ತಂದಿದ್ದಾರೆ. ಒಂದೇ ಕನ್ನಡಕ ಬಳಸಿ ಸರತಿಯಲ್ಲಿ ಆಕಾಶ ನೋಡುವ ಸಂಭ್ರಮ ಮಕ್ಕಳಿಗೆ.
ವಿಡಿಯೋ : ನಭೋಮಂಡಲದಲ್ಲಿ ಬಂಗಾರದ ಬಳೆ












Click it and Unblock the Notifications