ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಕಡೆಗಣಿಸಿದ ಬಿಜೆಪಿ ಧೂಳಿಪಟ : ಎಚ್ಡಿಕೆ

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

HDK in Ramnagar on his birthday
ರಾಮನಗರ, ಡಿ. 17 : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಮನಗರ ಜಿಲ್ಲೆಯನ್ನು ಕಡೆಗಣಿಸಿ ಅಭಿವೃದ್ದಿಯನ್ನ ಕುಂಠಿತಗೊಳಿಸಿದ್ದಾರೆ. ಬಿಜೆಪಿಯ ದುರಾಡಳಿತದಿಂದ ಅದರ ಪಾಪದ ಕೊಡ ತುಂಬಿದೆ, ಆದ್ದರಿಂದ ಶೀಘ್ರದಲ್ಲಿ ಬಿಜೆಪಿ ಸರ್ಕಾರಕ್ಕೆ ತಕ್ಕ ಶಾಸ್ತಿಯಾಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಕುಮಾರಸ್ವಾಮಿಯವರ ರಾಜಕೀಯ ಕರ್ಮಭೂಮಿ ರಾಮನಗರದಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ತಮ್ಮ 51ನೇ ಜನುಮದಿನದ ಆಚರಣೆಯಲ್ಲಿ ಭಾಗವಹಿಸಿದ ನಂತರ ಅವರು ಮಾತನಾಡಿದರು. ಇದಕ್ಕೂ ಮೊದಲು ರಾಮನಗರದ ಪುರಾಣಪ್ರಸಿದ್ದ ಚಾಮುಂಡೇಶ್ವರಿ ದೇವಾಲಯ, ಚರ್ಚ್ ಮತ್ತು ಮಸೀದಿಗಳಲ್ಲಿ ನಡೆಸಲಾದ ವಿಶೇಷ ಪೂಜೆ ಮತ್ತು ಪ್ರಾರ್ಥನೆಗಳಲ್ಲಿ ಕುಮಾರಸ್ವಾಮಿಯವರು ಭಾಗವಹಿಸಿದರು.

ನಮ್ಮ ಕುಟುಂಬದ ಮೇಲೆ ರಾಮನಗರ ಜನತೆ ಇಟ್ಟಿರುವ ವಿಶ್ವಾಸ ಪ್ರೀತಿಗೆ ನಾವು ಋಣಿಯಾಗಿರುತ್ತೇವೆ. ರಾಜಕೀಯವಾಗಿ ನಮ್ಮ ಕುಟುಂಬಕ್ಕೆ ಪುನರ್ಜನ್ಮ ನೀಡಿ ರಾಜಕೀಯದ ಉನ್ನತ ಸ್ಥಾನಕ್ಕೇರಿಸಿ ರಾಜ್ಯ ಮತ್ತು ದೇಶದ ಸೇವೆ ಮಾಡಲು ಅನುವು ಮಾಡಿಕೊಟ್ಟ ರಾಮನಗರ ಜನತೆಯ ವಿಶ್ವಾಸಕ್ಕೆ ನಾನು ಋಣಿಯಾಗಿರುತ್ತೇನೆ. ಕೊನೆಯ ಉಸಿರು ಇರುವವರೆಗೂ ನನ್ನ ದೇಹ ಭೂಮಿಗೆ ಹೋಗುವವರೆಗೂ ಕ್ಷೇತ್ರದ ಋಣ ತೀರಿಸಲು ಪ್ರಾಮಾಣಿಕವಾಗಿ ನಮ್ಮ ಕುಟುಂಬ ಶ್ರಮಿಸುತ್ತದೆಂದು ಕುಮಾರಸ್ವಾಮಿ ಭಾವುಕರಾಗಿ ನುಡಿದರು.

ರಾಮನಗರದ ಭೂಮಿ ಒಂದು ರೀತಿ ಅದೃಷ್ಟದ ಭೂಮಿಯಾಗಿರುವುದರಿಂದ, ರಾಮನಗರದ ಒಂದು ಭಾಗ ಮಾಗಡಿ ಕ್ಷೇತ್ರಕ್ಕೆ ಸೇರಿದೆ. ಆದ್ದರಿಂದ ರಾಮನಗರದ ಪುಣ್ಯಭೂಮಿಯನ್ನ ಮೆಟ್ಟಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಸಹೋದರ ಸಮಾನರಾದ ಮಾಗಡಿ ಶಾಸಕ ಬಾಲಕೃಷ್ಣ ಮಂತ್ರಿಯಾಗಲಿದ್ದಾರೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ಕೆಲ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಚಾಮರಾಜನಗರ ಮತ್ತು ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಯೇ ಲಾಠಿ ಹಿಡಿದು ಕಾನ್ಸ್‌ಟೇಬಲ್ ರೀತಿ ವರ್ತಿಸಿ ರೈತರ ಮೇಲೆ ಲಾಠಿ ಚಾರ್ಜ್ ನಡೆಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರಂತರವಾಗಿ ರೈತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಾ ರೈತರ ಹಿತಾಸಕ್ತಿಯನ್ನ ಬಲಿಕೊಡುತ್ತಿದ್ದಾರೆ. ಯಡಿಯೂರಪ್ಪನವರು ಆರ್.ಎಸ್.ಎಸ್ ಸಮವಸ್ತ್ರ ಧರಿಸಿದ ರೀತಿಯಲ್ಲಿ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮುಂದುವರೆದರೆ ಸರ್ಕಾರಿ ಅಧಿಕಾರಿಗಳಿಗೇ ಚಡ್ಡಿಯನ್ನು ತೊಡಿಸುವ ಕೆಲಸ ಮಾಡುತ್ತಾರೆಂದು ವ್ಯಂಗ್ಯವಾಡಿದರು.

ರೈತರನ್ನು ಕಡೆಗಣಿಸಿ ರೈತರ ಕಣ್ಣಿನಲ್ಲಿ ನೀರು ಬರಿಸಿದ ಸರ್ಕಾರಗಳು ಉಳಿಯಲು ಸಾಧ್ಯವೇ ಇಲ್ಲ, ಧೂಳಿ ಪಟವಾಗುತ್ತವೆ. ಆದ್ದರಿಂದ ತಾತ್ಕಾಲಿಕವಾಗಿ ದರ್ಬಾರು ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಉಳಿಗಾಲವಿಲ್ಲವೆಂದು ಎಚ್.ಡಿ.ಕೆ. ಹೇಳಿದರು.

ಇದೇ ಸಂದರ್ಭದಲ್ಲಿ, ಸಂಸದರ ನಿಧಿಯಡಿಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ 8 ಲಕ್ಷವೆಚ್ಚದ ನೂತನ ಜನರೇಟರ್ ವ್ಯವಸ್ಥೆಗೆ ಕುಮಾರಸ್ವಾಮಿಯವರು ಚಾಲನೆ ನೀಡಿದರು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಅಭಿಮಾನಿಗಳು ಮತ್ತು ಕಾರ್ಯಕರ್ತರುಗಳು ಕುಮಾರಸ್ವಾಮಿಯವರಿಗೆ ಶುಭ ಹಾರೈಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X