ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತೂ ಬಂತು ಶಿವಮೊಗ್ಗಕ್ಕೆ ಇಂಟರ್‌ಸಿಟಿ ರೈಲು

By * ಕೆಆರ್ ಸೋಮನಾಥ್, ಶಿವಮೊಗ್ಗ
|
Google Oneindia Kannada News

Bengaluru-Shivamogga intercity train
ಮಲೆನಾಡಿನ ಭಾಗದ ಜನರ ಬಹು ದಿನಗಳ ಕನಸು ಇದೀಗ ನನಸಾಗಿದೆ. ಹಲವು ದಶಕಗಳ ಹೋರಾಟ ಮತ್ತು ಒತ್ತಾಯದ ಫಲಶೃತಿಯಿಂದಾಗಿ ಶಿವಮೊಗ್ಗಕ್ಕೆ ಅಂತು ಬಂದಿತು ಇಂಟರ್‌ಸಿಟಿ ರೈಲು, ಜಿಲ್ಲೆಯ ಜನತೆಗೆ ನೆಮ್ಮದಿಯ ತಂದಿತು. ಮಲೆನಾಡು ಭಾಗದ ಜನರು ಕೆಲಸ ಕಾರ್ಯಗಳ ನಿಮಿತ್ತ ರಾಜಧಾನಿ ಬೆಂಗಳೂರಿಗೆ ಹೋಗಿ ಬರುವುದೆಂದರೆ ತುಂಬಾ ತ್ರಾಸದಾಯಕ. ಬಸ್ಸಾಗಲೀ, ರೈಲಾಗಲೀ 7 ಗಂಟೆ ಪ್ರಯಾಣ ಮಾಡಲೇಬೇಕು. ಸಣ್ಣ - ಪುಟ್ಟ ಕೆಲಸಗಳಾಗಬೇಕೆಂದರೂ 2 ದಿನ ಬೆಂಗಳೂರಿನಲ್ಲಿ ತಂಗಲೇಬೇಕು. ದುಬಾರಿ ಖರ್ಚು - ವೆಚ್ಚಗಳು ಶ್ರೀಸಾಮಾನ್ಯರಿಗಂತೂ ಭರಿಸಲಾರದ ಹೊರೆ. ಇದಕ್ಕೆಲ್ಲಾ ಪರಿಹಾರವಾಗಿ ಶಿವಮೊಗ್ಗ - ಬೆಂಗಳೂರು ಮಧ್ಯ ಇಂಟರ್‌ಸಿಟಿ ರೈಲು ಸೌಲಭ್ಯ ಕಲ್ಪಿಸಬೇಕೆಂದು ಹಲವು ದಶಕಗಳಿಂದ ಜಿಲ್ಲೆಯ ಮುಖಂಡರ ಒತ್ತಾಯವಾಗಿತ್ತು.

ಆದರೆ ಸಂಸದರಾಗಿ ಪ್ರಥಮ ಬಾರಿಗೆ ಆಯ್ಕೆಯಾದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಜನರ ಬಹು ನಿರೀಕ್ಷಿತ ಇಂಟರ್‌ಸಿಟಿ ರೈಲನ್ನು ಆರಂಭಿಸಲು ಕೇಂದ್ರ ರೈಲ್ವೆ ಸಚಿವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹತ್ತಾರು ಬಾರಿ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿಯವರನ್ನು, ನಮ್ಮ ರಾಜ್ಯದವರೆ ಆದ ಕೇಂದ್ರ ರೈಲ್ವೆ ರಾಜ್ಯ ಸಚಿವ ಕೆ.ಹೆಚ್. ಮುನಿಯಪ್ಪ ಅವರನ್ನು ಭೇಟಿಮಾಡಿ ಮಲೆನಾಡಿನ ಜನರ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟು ಒಪ್ಪಿಗೆ ಪಡೆಯುವಲ್ಲಿ ಸಫಲರಾಗಿದ್ದಾರೆ.

ಇಂಟರ್‌ಸಿಟಿ ರೈಲು ಆರಂಭದಿಂದಾಗಿ ಜಿಲ್ಲೆಯ ಜನರು ಅತ್ಯಂತ ಕಡಿಮೆ ಸಮಯ ಹಾಗೂ ಕಡಿಮೆ ಖರ್ಚಿನಲ್ಲಿ ಬೆಂಗಳೂರಿಗೆ ಹೋಗಿ ಕೆಲಸಕಾರ್ಯ ಮುಗಿಸಿಕೊಂಡು ಅಂದೇ ವಾಪಸ್ ಬರಬಹುದಾಗಿದೆ. ಪ್ರತಿದಿನ ಬೆಳಿಗ್ಗೆ 6.20ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಡುವ ಇಂಟರ್‌ಸಿಟಿ ರೈಲು 11.20ಕ್ಕೆ ಬೆಂಗಳೂರು ತಲುಪಲಿದೆ. ಅದೇರೀತಿ ಸಂಜೆ 4.30ಕ್ಕೆ ಬೆಂಗಳೂರು ರೈಲ್ವೆ ನಿಲ್ದಾಣ ಬಿಟ್ಟು ರಾತ್ರಿ 9.55ಕ್ಕೆ ಶಿವಮೊಗ್ಗ ತಲುಪಲಿದೆ. ಇದರಿಂದಾಗಿ ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ತಾಲ್ಲೂಕು ಕೇಂದ್ರಗಳ ಜನರು ರೈಲಿನ ಸೌಲಭ್ಯವನ್ನು ಬಳಸಿಕೊಳ್ಳಲು ತುಂಬ ಸಹಕಾರಿಯಾಗಲಿದೆ.

ಇಂಟರ್‌ಸಿಟಿ ರೈಲಿನ ಟಿಕೇಟ್ ದರ ಹವಾನಿಯಂತ್ರಿತ 300 ರೂ., ದ್ವಿತೀಯ ದರ್ಜೆ ಆಸನ 69 ರೂ. ಹಾಗೂ ಕಾದಿರಿಸುವ ದ್ವಿತೀಯದರ್ಜೆ ಟಿಕೇಟಿಗೆ ಹೆಚ್ಚುವರಿ 15ರೂ ನಿಗದಿಯಾಗಿದೆ. ಈ ರೈಲಿನಲ್ಲಿ 21 ಬೋಗಿಗಳಿದ್ದು, ಒಂದು ಎ.ಸಿ. ಛೇರ್‌ಕಾರ್, ಒಂದು ಕ್ವಾಟರಿಂಗ್, ಎರಡು ಲೇಡಿಸ್ ಕಂಪಾರ್ಟ್‌ಮೆಂಟ್, 5 ದ್ವಿತೀಯ ದರ್ಜೆ ಕಾದಿರಿಸುವ ಬೋಗಿಗಳು, 12 ದ್ವಿತೀಯದರ್ಜೆ ಬೋಗಿಗಳಿರುತ್ತವೆ. ಇದರಿಂದಾಗಿ ಶ್ರೀಮಂತರು, ಶ್ರೀಸಾಮಾನ್ಯರು ಈ ರೈಲಿನ ಸೌಲಭ್ಯವನ್ನು ಬಳಸಿಕೊಳ್ಳಲು ಎಲ್ಲ ರೀತಿಯಲ್ಲೂ ಅನುಕೂಲಕರವಾಗಿದೆ.

ಬಸ್ಸುಗಳಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುವುದೆಂದರೆ ತುಂಬ ತ್ರಾಸದಾಯಕ. ಕನಿಷ್ಠ 7 ಗಂಟೆ ಪ್ರಯಾಣ ಜೊತೆಗೆ ದುಬಾರಿ. ಸಾಮಾನ್ಯ ಬಸ್ಸಿನಲ್ಲಿ 179 ರೂ., ಶೀಥಲ್ ಬಸ್ಸ್‌ನಲ್ಲಿ 200 ರೂ, ರಾಜಹಂಸ 270 ರೂ., ಐರಾವತ 385 ರೂ. ತೆರಬೇಕಾಗಿದೆ. ಈ ದುಬಾರಿ ವೆಚ್ಚವನ್ನು ಇಂಟರ್‌ಸಿಟಿ ರೈಲು ನಿವಾರಿಸಿ ಜನರಲ್ಲಿ ಉಲ್ಲಾಸ ಮತ್ತು ಹರ್ಷವನ್ನು ತಂದಿದೆ. ಇದಲ್ಲದೆ, ಇಂಟರ್‌ಸಿಟಿ ರೈಲು ಆರಂಭದ ನಂತರವೂ ಬೆಳಿಗ್ಗೆ 5 ಗಂಟೆಗೆ ಹೊರಡುತ್ತಿದ್ದ ಪ್ಯಾಸೆಂಜರ್ ರೈಲು ಸಂಚಾರ ಮುಂದುವರೆದಿರುವುದು ಬಡವರ್ಗದ ಜನರಿಗೆ ಮತ್ತಷ್ಟು ಖುಷಿ ತಂದಿದೆ.

ಡಿಸೆಂಬರ್ 9ರಂದು ಬೆಳಿಗ್ಗೆ 6 ಗಂಟೆಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಕೇಂದ್ರ ರೈಲ್ವೆ ರಾಜ್ಯ ಸಚಿವ ಕೆ.ಹೆಚ್. ಮುನಿಯಪ್ಪ, ಇಂಧನ ಸಚಿವ ಕೆ. ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಡಿ.ಹೆಚ್. ಶಂಕರಮೂರ್ತಿ ಸೇರಿದಂತೆ ಹಲವಾರು ಗಣ್ಯರು ಇಂಟರ್‌ಸಿಟಿ ರೈಲು ಚಾಲನೆಗೆ ಹಸಿರು ನಿಶಾನೆ ತೋರಿದರು. ಬೆಳಗಿನ ಚಳಿಯನ್ನು ಲೆಕ್ಕಿಸದೆ ನಗರದ ಸಾವಿರಾರು ನಾಗರೀಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತೋಷ ವ್ಯಕ್ತಪಡಿಸಿದರು.

ರೈಲ್ವೆ ಇಲಾಖೆಯಿಂದ ಪಡೆಯಬೇಕಿದ್ದ ಮಂಜೂರಾತಿ, ಶಿವಮೊಗ್ಗ ಹರಿಹರ ಹೊಸ ರೈಲು ಮಾರ್ಗ ನಿರ್ಮಾಣದ ಬೇಡಿಕೆ, ಹೊಳೆಹೊನ್ನೂರು ಮಾರ್ಗದಲ್ಲಿರುವ ರೈಲ್ವೆ ಗೇಟ್ ಸ್ಥಳಾಂತರ, ರಿಂಗ್‌ರೋಡ್ ನಿರ್ಮಾಣಕ್ಕೆ ರೈಲ್ವೆ ಇಲಾಖೆಗೆ ಸೇರಿದ ಸ್ಥಳ ಬಿಟ್ಟು ಕೊಡುವ ಸಮ್ಮತಿ, ಶಿವಮೊಗ್ಗ ತಾಳಗುಪ್ಪ ಗೇಜ್ ಪರಿವರ್ತನೆಯನ್ನು ತುರ್ತಾಗಿ ಪೂರ್ಣಗೊಳಿಸುವುದು, ಇನ್ನು ಮುಂತಾದ ಬೇಡಿಕೆಗಳಿಗೆ ಕೇಂದ್ರ ಅಸ್ತು ಎಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X