ಸ್ಯಾನ್ ಫ್ರಾನ್ಸಿಸ್ಕೊದೊಂದಿಗೆ ಸಿಸ್ಟರ್ ಸಿಟಿ ಒಪ್ಪಂದ

2008 ರ ಅಕ್ಟೋಬರ್ 20ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸ್ಯಾನ್‌ಫ್ರಾನ್ಸಿಸ್ಕೊ ಮೇಯರ್ ಗ್ಯಾವಿನ್ ನ್ಯೂಸಮ್ಸ್ ವಿಡಿಯೊ ಕಾನ್ಫೆರೆನ್ಸ್ ನಡೆಸಿ, ಸಿಸ್ಟರ್ ಸಿಟಿ' ಬಗ್ಗೆ ಚರ್ಚಿಸಿದ್ದರು. ಇದೀಗ ಈ ಯೋಜನೆಗೆ ಅಂತಿಮ ರೂಪ ನೀಡಲು, ಆಯಾ ಇಲಾಖೆ ಹಾಗೂ ಉದ್ಯಮಗಳೊಂದಿಗೆ ನಿರ್ದಿಷ್ಟ ಒಡಂಬಡಿಕೆಗೆ ಸಹಿ ಹಾಕಲು ನಿಯೋಗ ಆಗಮಿಸುತ್ತಿದೆ.
ಡಿಸೆಂಬರ್ 3 ರವರೆಗೆ ತಂಡ ಇಲ್ಲೇ ಉಳಿಯಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಜರಾತಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ. ಇದಾದ ಮೇಲೆ, ಬೆಲರಸ್‌ನ ಮಿನ್ಸ್ಕ್ ಸಿಟಿ ಹಾಗೂ ಅಮೆರಿಕದ ನೆವಡಾದ ಸಿಟಿ ಆಫ್ ರೆನೊ ನಗರಗಳ ನಂತರದ ಮೂರನೇ ನಗರವಾಗಿ ಸಿಸ್ಟರ್ ಸಿಟಿ' ಆಗಲಿದೆ.
ಏನು, ಯಾರ ನಡುವೆ ಒಪ್ಪಂದ ?
ನೀರು, ಒಳಚರಂಡಿ, ಘನತ್ಯಾಜ್ಯ ನಿರ್ವಹಣೆ, ಉದ್ಯಾನ, ಪರಿಸರ, ಆರೋಗ್ಯ ಮತ್ತು ಶಿಕ್ಷಣ ಕುರಿತಂತೆ ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸ್ಯಾನ್
ಫ್ರಾನ್ಸಿಸ್ಕೊದೊಂದಿಗೆ ಜಲಮಂಡಳಿ ಹಾಗೂ ಬಿಬಿಎಂಪಿ ಒಡಂಬಡಿಕೆ ಮಾಡಿಕೊಳ್ಳಲಿವೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ಉಪಕ್ರಮ, ವ್ಯವಹಾರಕ್ಕೆ ಸಹಿ ಹಾಕಲಿದೆ. ರಂಗ ಭೂಮಿ ಅಭಿವೃದ್ಧಿಗೆ ರಂಗಶಂಕರ ಹಾಗೂ ಕ್ಯಾಲಿಫೋರ್ನಿಯಾ ಶೇಕ್ಸ್‌ಪಿಯರ್ ಥಿಯೇಟರ್ ನಡುವೆ ಒಪ್ಪಂದ, ಸಂಶೋಧನೆಗಾಗಿ ಬಯೋಕಾನ್ ಮತ್ತು ಕ್ಯಾಲಿಫೋರ್ನಿಯಾ ವಿವಿ ಯೊಂದಿಗೆ ಒಡಂಬಡಿಕೆ, ಆರೋಗ್ಯ, ಪ್ರವಾಸ, ಕ್ರೀಡೆ, ಸಂಸ್ಕೃತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಒಪ್ಪಂದಕ್ಕೆ ಸಹಿ ಹಾಕಲಿದೆ.
ಸಿಸ್ಟರ್ ಸಿಟಿ ಎಂದರೇನು?
ಸಿಸ್ಟರ್ ಸಿಟಿ ಎಂದರೆ ಎರಡು ದೇಶಗಳ ನಡುವಿನ ಒಪ್ಪಂದವಾಗಿದ್ದು, ಸಂಸ್ಕೃತಿ ಮತ್ತು ವಾಣಿಜ್ಯ ಮೈತ್ರಿಗಳು ಇದರಲ್ಲಿರುತ್ತವೆ. ಯೋಜನೆಗಳು, ಜನರು ಮತ್ತು ಸಂಸ್ಕೃತಿ, ಶಿಕ್ಷಣ, ಕ್ರೀಡೆ, ಮುನಿಸಿಪಲ್, ವೃತ್ತಿ ಮತ್ತು ತಾಂತ್ರಿಕ ಯೋಜನೆಗಳ ವಿನಿಮಯ. ಸಿಸ್ಟರ್ ಸಿಟಿಯ ಅನನ್ಯವೆಂದರೆ, ಎರಡೂ ಬದಿಯವರು ಕೊಟ್ಟು-ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿರುತ್ತಾರೆ. ಈವೆರಡೂ ನಗರಗಳು ಐಟಿ ಹಬ್‌ಗಳಾಗಿದ್ದು, ಐಟಿ ಮತ್ತು ಬಯೊಟೆಕ್ನಾಲಜಿ ಕಂಪನಿಗಳು, ಸಮೃದ್ಧ ಕಲಾ ಇತಿಹಾಸ, ವಿಜ್ಞಾನ, ಸಂಸ್ಕೃತಿಯನ್ನು ವಿನಿಮಯ ಮಾಡಿಕೊಳ್ಳಲಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications