ನೆರೆ ಪರಿಹಾರ ಹೆಚ್ಚಿಸಲು ಕೇಂದ್ರ ತಂಡ ಶಿಫಾರಸು

ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಯಲಬುರ್ಗಾ ತಾಲೂಕು ಬಾನಾಪುರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿ ಈ ವಿಷಯ ತಿಳಿಸಿದರು.
ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ, ರಸ್ತೆ-ಸೇತುವೆ, ಪ್ರಾಣ ಹಾನಿ, ಬೆಳೆಹಾನಿ ಆಗಿರುವ ಬಗ್ಗೆ ಮನವರಿಕೆಯಾಗಿದೆ. ಈ ಕುರಿತ ಎಲ್ಲ ವಿವರಗಳನ್ನು ದಾಖಲಿಸಿ, ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿಯನ್ನು ಶೀಘ್ರ ಸಲ್ಲಿಸಲಾಗುವುದು. ನೈಸರ್ಗಿಕ ವಿಕೋಪದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಸರ್ಕಾರದಿಂದ ನೀಡಲಾಗುವ ಪರಿಹಾರಧನದ ಮೊತ್ತವನ್ನು ಹೆಚ್ಚಿಸುವ ಕುರಿತು, ಮುಂಬರುವ ಹಣಕಾಸು ಆಯೋಗ ತೀರ್ಮಾನ ಕೈಗೊಳ್ಳಲಿದೆ. ಪರಿಹಾರದ ಮೊತ್ತವನ್ನು ಹಣಕಾಸು ಆಯೋಗದ ಶಿಫಾರಸಿನನ್ವಯ, ಕೇಂದ್ರ ಸರ್ಕಾರ ಪರಿಷ್ಕರಿಸಲಿದೆ ಎಂದು ಅವರು ತಿಳಿಸಿದರು.
ಆಯಾ ರಾಜ್ಯಗಳು ಕಳೆದ 5 ವರ್ಷಗಳಲ್ಲಿ ನೈಸರ್ಗಿಕ ವಿಕೋಪ ನಿಧಿಯನ್ನು ಬಳಸಿಕೊಂಡ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಪರಿಹಾರಧನದ ಮೊತ್ತವನ್ನು ನಿರ್ಧರಿಸಲಾಗುವುದು. ಅತಿವೃಷ್ಠಿಯಿಂದಾದ ಹಾನಿಯ ಪರಿಹಾರಧನದ ಮೊತ್ತವನ್ನು ಹೆಚ್ಚಿಸುವಂತೆ ಸಂತ್ರಸ್ತರು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪರಿಹಾರ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಅವರು ನುಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಠಿಯಿಂದಾದ ಹಾನಿಯ ಅಂದಾಜು ಮಾಡಲು ಕೇಂದ್ರ ಸರ್ಕಾರ ಮೂರು ತಂಡಗಳನ್ನು ರಚಿಸಿ ಕಳುಹಿಸಿದೆ. ಮೂರು ತಂಡಗಳು ಅ. 23ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹಾಗೂ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಗ್ರ ವರದಿಯನ್ನು ತಯಾರಿಸಲಿದೆ. ಆ ವರದಿಯ ವಿವರಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕೇಂದ್ರ ಅಧ್ಯಯನ ತಂಡದ ನೇತೃತ್ವ ವಹಿಸಿರುವ ಒ. ರವಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಅಧ್ಯಯನ ತಂಡದ ಇತರೆ ಸದಸ್ಯರುಗಳಾದ ಕೇಂದ್ರ ಹಣಕಾಸು ಮಂತ್ರಾಲಯದ ಸಹಾಯಕ ನಿರ್ದೇಶಕ ಮೇವಾರಾಂ ಹಾಗೂ ಗೃಹ ಮಂತ್ರಾಲಯದ ಅಧಿಕಾರಿ ವಿ.ಪಿ. ಪಸ್ರಿಜ ಅವರು ಉಪಸ್ಥಿತರಿದ್ದರು.
ಕೇಂದ್ರ ಅಧ್ಯಯನ ತಂಡ ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಮಾಡಿ ನೆರೆಯಿಂದಾಗಿರುವ ಹಾನಿಯನ್ನು ಅಧ್ಯಯನ ಮಾಡಿದೆ. ಬಳ್ಳಾರಿ ಜಿಲ್ಲೆಯಲ್ಲಾಗಿರುವ ಹಾನಿಯ ಬಗ್ಗೆ ಕೂಡ ಕೇಂದ್ರ ತಂಡಕ್ಕೆ ಮಾಹಿತಿ ನೀಡಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications