ಪರಿಹಾರ : ಕೊನೆಗೂ ಕೇಂದ್ರದ ಸಮ್ಮತಿ
ನವದೆಹಲಿ, ಅ. 9 : ನೆರೆ ಸಂತ್ರಸ್ಥರಿಗೆ ಕೇಂದ್ರ ಸರಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕೇಂದ್ರದ ಕಾನೂನು ಖಾತೆ ಸಚಿವ ಎಂ ವೀರಪ್ಪ ಮೊಯ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ಪ್ರವಾಹದ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ನೆರೆ ಸಂಕಷ್ಟ ಸಂಬಂಧ ರಾಜ್ಯದ ಬೇಡಿಕೆಗೆ ಕೇಂದ್ರ ಸರಕಾರ ಕೊನೆಗೂ ಸ್ಪಂದಿಸಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಹಣ ಬಳಿಸಿಕೊಳ್ಳುವಂತೆ ರಾಜ್ಯಕ್ಕೆ ಕೇಂದ್ರ ನಿರ್ದೇಶನ ನೀಡಿದೆ ಎಂದು ವಿ ಎಸ್ ಆಚಾರ್ಯ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರವಾಹ ಸಂತ್ರಸ್ಥರಿಗೆ ಪರಿಹಾರ ಮತ್ತು ಪುನರ್ ವಸತಿ ಕಲ್ಪಿಸುವ ವಿಷಯದಲ್ಲೂ ಮುಖ್ಯಮಂತ್ರಿ ರಾಜಕೀಯ ಮಾಡುತ್ತಿದ್ದಾರೆ ಅದನ್ನು ಮೊದಲು ನಿಲ್ಲಿಸಲಿ ಎಂದರು. ಮನೆ ಮಠ ಕಳೆದುಕೊಂಡು ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ಮುಖ್ಯಮಂತ್ರಿಗಳು ಬೀದಿಗೆ ಬಂದಿದ್ದಾರೆ. ಇಷ್ಟಾದರೂ ಕೇಂದ್ರ ಸರಕಾರ ಸ್ಪಂದಿಸಿಲ್ಲ ಎನ್ನುವ ಆರೋಪಕ್ಕೆ ಮೊಯ್ಲಿ ಕೆರಳಿ ಕೆಂಡವಾದರು. ಮೊದಲು ಕೇಂದ್ರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ನೀಡಿರುವ ಹಣವನ್ನು ಮೊದಲು ಬಳಿಸಲಿ, ಸಾಲದಿದ್ದರೆ ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸಿದ್ಧವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇನ್ನೊಂದಡೆ ಮಾತನಾಡಿದ ಸಚಿವ ಆಚಾರ್ಯ, ಕೇಂದ್ರ ಸರಕಾರ ರಾಜ್ಯದ ಮನವಿಯನ್ನು ಪುರಸ್ಕರಿಸಿದ್ದು, ತುರ್ತಾಗಿ 3,000 ಕೋಟಿ ರುಪಾಯಿ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. 20,000 ಲೀಟರ್ ಸೀಮೆಎಣ್ಣೆ, 35,000 ಮೆಟ್ರಿಕ್ ಟನ್ ಅಕ್ಕಿ ಬಿಡುಗಡೆ ಮಾಡುವಂತೆ ಮಾಡಿದ ಮನವಿಗೆ ಕೇಂದ್ರ ಸಹಮತ ಸೂಚಿಸಿದೆ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications