ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಯಿಂದಾಗಿ ಶಿಲಾಯುಗಕ್ಕೆ ಮರಳಿದ ಚನ್ನಪಟ್ಟಣ

By Staff
|
Google Oneindia Kannada News

ಚನ್ನಪಟ್ಟಣ, ಸೆ. 24 : ಕೊಂಚ ತಡವಾಗಿ ಆಗಮಿಸಿ ಭರ್ಜರಿ ಮಳೆಯೊಂದಿಗೆ ಇಳೆಯನ್ನು ತಣಿಸಿದ ವರುಣ ರಾಯನ ಆರ್ಭಟಕ್ಕೆ ತಾಲೂಕಿನ ಬಹುತೇಕ ರಸ್ತೆಗಳು ನಲುಗಿಹೋಗಿದ್ದು, ತಾಲೂಕಿನ ಕೆಲವೆಡೆ ಇತ್ತೀಚೆಗೆ ಡಾಂಬರೀಕರಣಗೊಂಡ ರಸ್ತೆಗಳ ಯೋಗ್ಯತೆ ಬಟಾ ಬಯಲಾಗಿದೆ.

ಕಳೆದ ಐದಾರು ವರ್ಷಗಳಿಂದ ತನ್ನ ರೌದ್ರತೆಯನ್ನು ಮರೆತಿದ್ದ ಮಳೆರಾಯ, ಈ ಬಾರಿ ತಡವಾಗಿ ಆಗಮಿಸಿ ತನ್ನ ಶಕ್ತಿಯನ್ನು ಪ್ರದರ್ಶಿಸಿದ್ದು, ಈ ಶಕ್ತಿ ಪ್ರದರ್ಶನಕ್ಕೆ ನಮ್ಮ ಹಳ್ಳಿಗಾಡಿನ ಬಹುತೇಕ ರಸ್ತೆಗಳು ಬಲಿಯಾಗಿವೆ. ಮೊದಲೇ ಶಿಲಾಯುಗದ ರಸ್ತೆಗಳಾಗಿದ್ದ ಗ್ರಾಮಾಂತರ ಪ್ರದೇಶಗಳ ರಸ್ತೆಗಳು ಕಳೆದ ವಾರದಿಂದೀಚಿಗೆ ಸುರಿದ ಭಾರೀ ಮಳೆಯಿಂದಾಗಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ್ದು, ನಾಗರೀಕರು ರಸ್ತೆ ಎಲ್ಲಿದೆ ಎಂದು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲವೆಡೆ ರಸ್ತೆಗೆ ಹಾಕಿದ್ದ ದಪ್ಪ ಜಲ್ಲಿಕಲ್ಲುಗಳು ಡಾಂಬರಿನಿಂದಾಚೆ ಬಂದು ಪಾದಚಾರಿಗಳ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ರಸ್ತೆಯಲ್ಲಿ ಸವಾಲಾಗಿ ಪರಿಣಮಿಸಿದ್ದು, ಸ್ವಲ್ಪ ಯಾಮಾರಿದರೆ ನೆಲಕಚ್ಚಿಸುವ ಕಾಯಕದಲ್ಲಿ ನಿರತವಾಗಿವೆ. ಹಾಗೆಯೇ ರಸ್ತೆ ಮಧ್ಯೆ ವರುಣನ ಕೃಪೆಯಿಂದ ಹೊಸದಾಗಿ ನಿರ್ಮಾಣವಾಗಿರುವ ಗುಂಡಿಗಳು ರಾತ್ರಿ ವೇಳೆ ಪ್ರಯಾಣಿಕರಿಗೆ ದುಃಸ್ವಪ್ನವಾಗಿ ಕಾಡುತ್ತಿವೆ. ಇನ್ನು ಕಳೆದ ಮೂರ್‍ನಾಲ್ಕು ವರ್ಷಗಳಿಂದೀಚೆಗೆ ಹೊಸದಾಗಿ ನಿರ್ಮಾಣ, ಡಾಂಬರೀಕರಣವಾಗಿರುವ ರಸ್ತೆಗಳಂತೂ ಮಳೆರಾಯನಿಂದಾಗಿ ತಮ್ಮ ಜೇಷ್ಟತೆಯನ್ನು ನಾಗರೀಕರಿಗೆ ತೋರಿಸಿದ್ದು, ಹೊಸರಸ್ತೆ ಬಂತೆಂದು ಬೀಗಿದ್ದ ಪ್ರಯಾಣಿಕರಿಗೆ ಕೆಲವೇ ದಿನಗಳಲ್ಲಿ ನಿರಾಸೆ ಮೂಡಿಸಿವೆ.

ನಾಗರೀಕರ ಆಕ್ರೋಶ : ತಾಲೂಕಿನಿಂದ ಕೆಸ್ತೂರು ಮಾರ್ಗವಾಗಿ ಹೋಗುವ ರಸ್ತೆ ಡಾಂಬರೀಕರಣಗೊಳಿಸಿದ ಎರಡೇ ವರ್ಷಗಳಲ್ಲಿ ಜಲ್ಲಿಕಲ್ಲು, ಗುಂಡಿಮಯವಾಗಿದೆ. ಈ ಭಾಗದ ಜನತೆ ಸಂಬಂಧಿಸಿದ ಇಲಾಖೆ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಕಳಪೆ ಕಾಮಗಾರಿಯಿಂದಾಗಿ ಈ ರಸ್ತೆಗೆ ಈ ಸ್ಥಿತಿ ಬಂದಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಎಚ್ಚೆತ್ತ ಸಂಬಂಧಿಸಿದವರು ಗುಂಡಿ ಬಿದ್ದಿರುವ ಕಡೆಗಳಲ್ಲಿ ಜಲ್ಲಿಕಲ್ಲು, ಮಣ್ಣು ತುಂಬಿದ್ದಾರೆಯೇ ವಿನಃ ಡಾಂಬರೀಕರಣ ಮಾಡಿಲ್ಲ. ಇದರಿಂದಾಗಿ ಮಳೆಯಿಲ್ಲದಿದ್ದಾಗ ಧೂಳಿನಿಂದಾಗಿ ಪರಿತಪಿಸುವಂತಾಗಿದೆ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯ 5 ಕಿ.ಮೀ. ವ್ಯಾಪ್ತಿಗೆ ಕಳೆದ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಕೇಂದ್ರೀಯ ರಸ್ತೆ ಅಭಿವೃದ್ದಿ ಯೋಜನೆಯಡಿಯಲ್ಲಿ 100 ಲಕ್ಷರೂ.ಗಳು ಮಂಜೂರಾಗಿದ್ದು, ಇಕ್ಕೆಲಗಳಲ್ಲಿ ಎರಡು ಅಡಿ ರಸ್ತೆ ವಿಸ್ತರಿಸಲಾಗಿದೆ. ಈ ವಿಸ್ತರಿಸಿದ ರಸ್ತೆ ಕಳಪೆ ಕಾಮಗಾರಿಯಿಂದಾಗಿ ಕೆಲವೇ ದಿನಗಳಲ್ಲಿ ಮಾಯವಾಗಿದ್ದು, ಮತ್ತೆ ಯಥಾಸ್ಥಿತಿ ತಲುಪಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇಲಾಖೆ ವಿಫಲ : ಕಳಪೆ ಕಾಮಗಾರಿಗಳನ್ನು ತಡೆಯಲು ಸಂಬಂಧಿಸಿದ ಇಲಾಖೆ ವಿಫಲವಾಗಿದ್ದು, ಈ ಬಗ್ಗೆ ಹಲವಾರು ಬಾರಿ ಇಲಾಖೆಗೆ ದೂರು ನೀಡಿದ್ದರೂ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ನಾಗರೀಕರು ದೂರುತ್ತಾರೆ. ಗುಂಡಿಬಿದ್ದ ರಸ್ತೆಯಲ್ಲಿ ರಾತ್ರಿವೇಳೆ ಸಂಚಾರ ಸಾಹಸಮಯವಾಗಿದ್ದು, ಮಳೆಬಂದಾಗಲಂತೂ ಈ ಗುಂಡಿಗಳು ಎಲ್ಲಿವೆ ಎಂಬುದೇ ತಿಳಿಯದೆ ಪಾದಚಾರಿಗಳು, ವಾಹನ ಸವಾರರು ಪರದಾಡುತ್ತಿದ್ದು, ರಸ್ತೆ ತುಂಬ ನೀರು ನಿಂತಿರುವ ಸಂದರ್ಭಗಳಲ್ಲಿ ಕೆಲವೊಮ್ಮೆ ವಾಹನ ಸವಾರರು ಚರಂಡಿ ಮಾರ್ಗ ಹಿಡಿದಿರುವ ಘಟನೆಗಳೂ ಸಹ ನಡೆದಿವೆ. ಸಂಬಂಧಿಸಿದ ಇಲಾಖೆ ಈ ರಸ್ತೆಗಳಿಗೆ ಕೂಡಲೇ ಕಾಯಕಲ್ಪ ಕಲ್ಪಿಸಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.

ಒಟ್ಟಾರೆ ಸಂಬಂಧಿಸಿದ ಇಲಾಖೆ ಮಳೆಯಿಂದಾಗಿ ಗುಂಡಿಬಿದ್ದ ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸಿ ನಾಗರೀಕರ ಆಕ್ರೋಶವನ್ನು ತಣಿಸಬೇಕಾಗಿದ್ದು, ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತಗಳನ್ನು ತಪ್ಪಿಸುವತ್ತ ಮುನ್ನಡೆಯಬೇಕಾಗಿದೆ. ಮಳೆಗಾಲವಾಗಿರುವುದರಿಂದ ಮುಂದಿನ ದಿನಗಳಲ್ಲಿ ಮಳೆರಾಯನ ಆರ್ಭಟ ಮತ್ತಷ್ಟು ಹೆಚ್ಚಾದರೆ ಈ ರಸ್ತೆಗಳನ್ನು ಭಗವಂತನೇ ಕಾಪಾಡಬೇಕಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X