ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡೀ ಗ್ರಾಮ ಒಗ್ಗೂಡಿಸಿದ್ದ ಗೋವಿಗೆ ಅಂತಿಮ ನಮನ

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Temple bullock cremated with all respect
ಚನ್ನಪಟ್ಟಣ, ಜು. 28 : ಪೂರ್ವಿಕರ ಕಾಲದಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ನಂಬಿಕೆ, ಸಂಪ್ರದಾಯ, ಆಚರಣೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಸಂಸ್ಕೃತಿಯ ಪ್ರತೀಕವಾಗಿರುವ ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಗೋವುಗಳನ್ನ ಹಳ್ಳಿಗಳಲ್ಲಿ ದೇವಾಲಯಗಳಿಗೆ ಬಸವ ಬಿಡುವ ವಾಡಿಕೆ ಇಂದಿಗೂ ಮುಂದುವರೆದುಕೊಂಡು ಬಂದಿವೆ.

ಹಳ್ಳಿಗಳಲ್ಲಿ ನಡೆಯುವ ಯಾವುದೇ ಶುಭಕಾರ್ಯಗಳಿಗಿಂತ ಮುಂಚೆ ಗೋವಿ(ಬಸವ)ಗೆ ಪೂಜೆ ಸಲ್ಲಿಸಿದ ನಂತರವಷ್ಟೆ ಶುಭಕಾರ್ಯಗಳಿಗೆ ಚಾಲನೆ ಸಿಗುತ್ತದೆ. ಇಷ್ಟೆಲ್ಲಾ ದೈವಿಕ ಭಾವನೆಯನ್ನ ಹೊಂದಿರುವ ಬಸವಗಳು ಗ್ರಾಮಗಳಲ್ಲಿ ಎಲ್ಲರ ಅಚ್ವುಮೆಚ್ಚಿನ ಪ್ರೀತಿಯ ಕುಟುಂಬದ ಸದಸ್ಯರಲ್ಲೊಂದಾಗಿರುತ್ತದೆ. ಗ್ರಾಮದ ಅಕ್ಕರೆಯ ಬಸವ ಆಕಸ್ಮಿಕವಾಗಿ ಸಾವನ್ನಪ್ಪಿದಾಗ ಹತ್ತೂರಿನ ಸಾವಿರಾರು ಮಂದಿ ಸೇರಿ ಸಂಪ್ರದಾಯಬದ್ದವಾಗಿ ಅಂತ್ಯಸಂಸ್ಕಾರ ನಡೆಸುವುದರ ಮೂಲಕ ಚನ್ನಪಟ್ಟಣ ತಾಲ್ಲೂಕಿನ ಗುಡಿಸರಗೂರಿನ ಬಸವನ ಸಾವಿಗೆ ಮಾನವೀಯತೆಯ ಸ್ಪರ್ಷ ನೀಡಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಗುಡಿಸರಗೂರಿನ ಬಸವೇಶ್ವರ ದೇವಾಲಯದಲ್ಲಿ ಕಳೆದ 10 ವರ್ಷಗಳಿಂದ ಬಸವನಾಗಿ ವಿಶೇಷ ಪೂಜೆ ಪಡೆದುಕೊಳ್ಳುತ್ತಿದ್ದ ಗೋವು ಜುಲೈ 25 ಭಾನುವಾರದಂದು ಅನಾರೋಗ್ಯದಿಂದ ಸಾವನ್ನಪ್ಪಿತು. ಸುತ್ತಮುತ್ತಲ ಹತ್ತೂರಿಗೆ ಜೀವಂತದೈವವಾಗಿದ್ದ ಬಸವನ ಅಕಾಲಿಕ ಮರಣದಿಂದ ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿತ್ತು.

ಪ್ರಪಂಚ ನಿರ್ಮಾಣವಾದ ನಂತರ ರೈತರ ಹಿತರಕ್ಷಣೆಗಾಗಿ ದೈವಾನುದೇವತೆಗಳು ಅಕ್ಷಯತೃತೀಯದಿನದಂದು ಗೋವುಗಳನ್ನ ಸೃಷ್ಟಿ ಮಾಡಿದರೆಂಬ ಪ್ರತೀತಿಯಿದೆ. ವಿಶ್ವದಲ್ಲಿ ಎಲ್ಲಿ ಗೋವುಗಳನ್ನ ಪೂಜಿಸಿ ಆರಾಧಿಸುತ್ತಾರೋ ಅಲ್ಲಿ ನೆಮ್ಮದಿ ಸುಖ ಶಾಂತಿ ನೆಲೆಸುತ್ತದೆಂಬ ನಂಬಿಕೆ ಗ್ರಾಮಸ್ಥರಲ್ಲಂತೂ ದೃಢವಾಗಿದೆ. ಇಂಥ ಪೂಜನೀಯ ಪ್ರಾಣಿ ಸಾವನ್ನಪ್ಪಿದಾಗ ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿದ್ದು ಸಹಜ. ಬಸವನ ಸಾವಿಗೆ ಹತ್ತೂರಿನ ಗ್ರಾಮಸ್ಥರು ಸೇರಿ ಮಂತ್ರಘೋಷಗಳೊಂದಿಗೆ ಮೆರವಣಿಗೆ ನಡೆಸಿ ಪೂಜಾಕೈಂಕರ್ಯಗಳನ್ನ ನೆರವೇರಿಸಿ ಸಂಪ್ರದಾಯಬದ್ದವಾಗಿ ಶವಸಂಸ್ಕಾರ ನಡೆಸಿದರು. ಮಾನವನಿಗೆ ಗೌರವ ಕೊಡುವ ರೀತಿಯಲ್ಲೇ ಮೂಕಪ್ರಾಣಿ ಬಸವನಿಗೂ ಅರ್ಥಗರ್ಬಿತವಾಗಿ ಗೌರವ ಸಲ್ಲಿಸುವ ಮೂಲಕ ಭಕ್ತಿಯ ನೆಪದಲ್ಲಿ ಮಾನವೀಯತೆ ಮೆರೆದರು. ಗೋವುಗಳನ್ನ ಕಟುಕರ ಪಾಲು ಮಾಡುವ ಮಂದಿಗೆ ಈ ಗ್ರಾಮದ ಮಂದಿಯ ಭಕ್ತಿ ಮಾದರಿಯಾಗಿದೆ ಎಂದು ಶಟ್ಬ್ರಹ್ಮ ಜಗದೀಶ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕಳೆದ 10 ವರ್ಷಗಳ ಹಿಂದೆ ಗುಡಿಸರಗೂರಿನ ಬಸವೇಶ್ವರ ದೇವಾಲಯ ಸ್ವಾಮಿಯ ಆರಾಧ್ಯದೈವವಾಗಿ ಒಂದು ಗೋವನ್ನ ಬಸವನನ್ನಾಗಿ ಸಂಪ್ರದಾಯಗಳೊಂದಿಗೆ ವಿವಿಧ ಮಠಾದೀಶರುಗಳ ಸಮಕ್ಷಮದಲ್ಲಿ ಪೂಜಾಕೈಂಕರ್ಯವನ್ನ ನೆರವೇರಿಸಿ ದೈವಸ್ಥಾನ ಕಲ್ಪಿಸಿದರು. ಅಂದಿನಿಂದ ಇಂದಿನವರೆಗೂ ನಿಜದೈವ ಬಸವನಿಗೆ ಗ್ರಾಮದ ಪ್ರತಿಕುಟುಂಬದ ಸದಸ್ಯರು ವಿಶೇಷ ಪೂಜೆಯನ್ನ ಸಲ್ಲಿಸುವ ಮೂಲಕ ವಿಶೇಷ ಅಕ್ಕರೆಯಿಟ್ಟಿದ್ದರು. ಗ್ರಾಮದಲ್ಲಿ ಏನೇ ಶುಭಕಾರ್ಯಗಳು ಮತ್ತು ದೇವತಾಕಾರ್ಯಗಳು ನಡೆಯಬೇಕಾದರೂ ಈ ಬಸವನಿಗೆ ಮೊದಲ ಪೂಜೆಸಲ್ಲುತ್ತಿತ್ತು.

ಬಸವನ ಪ್ರವೇಶದಿಂದ ಗ್ರಾಮದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿದ್ದು ಉತ್ಪ್ರೇಕ್ಷೆಯಲ್ಲ. ದೈವೀಭಾವನೆಯನ್ನ ಹೊಂದಿದ್ದ ಬಸವನ ಸಾವು ಗ್ರಾಮದಲ್ಲಿ ದುಃಖ ಮಡಗಟ್ಟುವಂತೆ ಮಾಡಿತ್ತು. ಭಕ್ತಿಯ ಪ್ರತೀಕವಾಗಿದ್ದ ಬಸವನ ಸಾವಿನ ನಂತರ ಮತ್ತೊಂದು ಗೋವನ್ನ ಗ್ರಾಮಸ್ಥರೆಲ್ಲರೂ ಸಲಹುವ ಮೂಲಕ ಸಾವಿಗೀಡಾದ ಅಕ್ಕರೆಯ ಬಸವನನ್ನ ಕಾಣುವುದಾಗಿ ಗ್ರಾಮಸ್ಥರೆಲ್ಲರು ಭಾವುಕರಾಗಿ ಹೇಳುತ್ತಾರೆ.

ಗುಡಿಸರಗೂರಿನ ಬಸವನ ಅಂತ್ಯಸಂಸ್ಕಾರ ಕ್ರಿಯೆ ಸುಮಾರು 5 ಗಂಟೆಗಳ ಕಾಲ ಸಾವಿರಾರು ಮಂದಿ ಭಕ್ತಸಮುದಾಯದ ಸಮ್ಮುಖದಲ್ಲಿ ನೆರವೇರಿತು. ಮಠಾದೀಶರುಗಳು ಮಂತ್ರೋಪದೇಶ ವಿಶೇಷ ಪೂಜೆ ನಡೆಸಿ ಸಂಪ್ರದಾಯದಂತೆ ಬಸವನಿಗೆ ವಿಶೇಷಗೌರವ ಸಲ್ಲಿಸಿದರು. ಸುಮಾರು 8 ಅಡಿ ಆಳ ಮತ್ತು 6 ಅಡಿ ಅಗಲದ ಗುಂಡಿ ತೆಗೆದು ಹೂವು ಅರಿಶಿನ ಕುಂಕುಮ ಮತ್ತು ವಿಭೂತಿಗಟ್ಟಿಗಳಿಂದ ಅಲಂಕೃತಗೊಳಿಸಿದ ಗುಂಡಿಯಲ್ಲಿ ಬಸವನ ದೇಹವನ್ನ ಇಟ್ಟು ಸಂಸ್ಕಾರ ನಡೆಸಲಾಯಿತು. ಮಾನವನಂತೆ ಮೂಕ ಪ್ರಾಣಿಗಳನ್ನ ಕಾಣಬೇಕೆಂಬ ಸಂದೇಶವನ್ನು ಸರಗೂರಿನ ಗ್ರಾಮಸ್ಥರು ಇಡೀ ಜಗತ್ತಿಗೆ ಸಾರಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X