ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸಗೊಬ್ಬರ ಅಭಾವ ದಾವಣಗೆರೆ ಉದ್ವಿಗ್ನ

By Staff
|
Google Oneindia Kannada News

Ravindranatha SA
ದಾವಣಗೆರೆ, ಜು. 17 : ರಸಗೊಬ್ಬರ ಅಭಾವ ಖಂಡಿಸಿ ರೈತರು ರಸಗೊಬ್ಬರ ವಿತರಣೆ ಅಂಗಡಿಗಳ ಮೇಲೆ ದಾಳಿ ನಡೆಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚುವ ವಿಫಲ ಯತ್ನ ನಡೆಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಪೊಲೀಸ್ ಲಘು ಲಾಠಿ ಪ್ರಹಾರ ನಡೆಸಿದ್ದು, ತಕ್ಕ ಮಟ್ಟಿಗೆ ಶಾಂತ ವಾತಾವರಣ ಉಂಟಾಗಿದೆ.

ಈ ಮಧ್ಯೆ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಎಸ್ ಎ ರವೀಂದ್ರನಾಥ್, ದಾವಣಗೆರೆಯಲ್ಲಿ 2000 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ, ಪ್ರತಿ ರೈತರಿಗೂ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ವಿತರಣೆ ಮಾಡುತ್ತೇವೆ. ರೈತರು ಸಮಾಧಾನವಾಗಿರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಕಳೆದ 15 ದಿನಗಳಿಂದ ದಾವಣಗೆರೆಯಲ್ಲಿ ರಸಗೊಬ್ಬರ ಅಭಾವ ಎದುರಾಗಿ ರೈತರು ಪರದಾಡುವಂತಾಗಿದೆ. ರಸಗೊಬ್ಬರ ಅಂಗಡಿಯವರು ತಮಗೆ ಬೇಕಿರುವ ವ್ಯಕ್ತಿಗಳಿಗೆ ಮಾತ್ರ ರಸಗೊಬ್ಬರ ನೀಡುತ್ತಾರೆ. ಅಲ್ಲದೆ ಜಾಸ್ತಿ ಹಣವನ್ನು ತೆಗೆದುಕೊಳ್ಳುತ್ತಾರೆ ಎನ್ನುವುದು ರೈತರ ಅಳಲಾಗಿದೆ.

ಇಂದು ಆಕ್ರೋಶಗೊಂಡ ರೈತರು ನಗರದ ಜಗಳೂರು ರಸ್ತೆಯಲ್ಲಿರುವ ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಅಂಗಡಿಗಳಲ್ಲಿ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ರೈತರ ಮನವೂಸಲು ಯತ್ನಿಸಿದ್ದಾರೆ. ರೊಚ್ಚಿಗೆದ್ದ ರೈತರು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಇದರಿಂದಾಗಿ ಪೊಲೀಸ್ ಲಘುಲಾಠಿ ಪ್ರಹಾರ ಮಾಡಿ ಗುಂಪು ಚೆದುರಿಸಿದ್ದಾರೆ. ಘಟನೆಯಲ್ಲಿ ಒಬ್ಬ ಪೇದೆ ಮತ್ತು ಒಬ್ಬ ರೈತನಿಗೆ ಗಾಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್ ವರಿಷ್ಠ ಸಂದೀಪ್ ಪಾಟೀಲ್ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಪರಿಶೀಲನೆ ನಡೆಸಿದ್ದಾರೆ. ರೈತರ ಮನವೂಲಿಕೆ ಮುಂದಾಗಿರುವ ಅವರು, ಖಾಸಗಿ ರಸಗೊಬ್ಬರ ಅಂಗಡಿಗಳಿಗೆ ಭೇಟಿ ರಸಗೊಬ್ಬರ ದಾಸ್ತಾನಿನ ಬಗ್ಗೆ ತನಿಖೆ ನಡೆಸಿದ್ದಾರೆ. ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ. ಹೆಚ್ಚುವರಿ ಪೊಲೀಸ್ ಪಡೆಯನ್ನು ಘಟನಾ ಸ್ಥಳಕ್ಕೆ ಕರೆಸಲಾಗಿದೆ. ಕಳೆದ ವರ್ಷ ಹಾವೇರಿಯಲ್ಲಿ ಉದ್ಭವಿಸಿದ್ದ ರಸಗೊಬ್ಬರ ಗಲಾಟೆ ನಂತರ ಇಂದು ಪಕ್ಕದಲ್ಲಿರುವ ದಾವಣಗೆರೆಯಲ್ಲಿ ರಸಗೊಬ್ಬರ ಆಭಾವ ಉಂಟಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X