ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ : ರೈತರ ಪರ ನಿಂತ ಕೈಪಡೆ

By Staff
|
Google Oneindia Kannada News

Pranab Mukharjee
ನವದೆಹಲಿ, ಜು. 6 : ಎರಡನೇ ಅವಧಿಗೆ ಅಧಿಕಾರದ ಗದ್ದುಗೆ ಏರಿರುವ ಯುಪಿಎ ಸರಕಾರದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ 2009-10 ನೇ ಸಾಲಿನ ಪ್ರಗತಿಪರ ಮತ್ತು ಅಭಿವೃದ್ಧಿಪರವಾಗಿರುವ ಆಯವ್ಯಯ ಮಂಡಿಸಿದ್ದಾರೆ. ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಕೃಷಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ನೂತನ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ಅಳವಡಿಸಿದ್ದಾರೆ. ಕೆಲ ವಲಯಗಳನ್ನು ಹೊರತುಪಡಿಸಿ ನಾಲ್ಕನೇ ಬಾರಿಗೆ ಬಜೆಟ್ ಮಂಡಿಸಿದ ಪ್ರಣಬ್ ಮುಖರ್ಜಿ ಅವರ ಬಜೆಟ್ ಜನಪರ ಬಜೆಟ್ ಎಂಬ ಮಾತು ವ್ಯಕ್ತವಾಗತೊಡಗಿದೆ.

ಮುಖ್ಯವಾಗಿ ಕೃಷಿಯಲ್ಲಿ ಶೇ 4 ರಷ್ಟು ಅಭಿವೃದ್ಧಿ ಗುರಿ. ಪ್ರತಿ ವರ್ಷ 1.20 ಕೋಟಿ ರ ಉದ್ಯೋಗ ಸೃಷ್ಟಿ. ಶೇ. 9 ರಷ್ಟು ಅಭಿವೃದ್ಧಿ ಸಾಧಿಸುವುದಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಜಾರಿ ( ತಿಂಗಳಿಗೆ 3 ರು ಕೆಜಿ 25 ಕೆಜಿ ಅಕ್ಕಿ ಅಥವಾ ಗೋಧಿ). ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸರಕಾರದಿಂದ ಸ್ಕಾಲರ್ ಶಿಷ್ ಯೋಜನೆ. ಕಳೆದ ವರ್ಷ ಜಾರಿಗೆ ತಂದಿದ್ದ ಉದ್ಯೋಗ ಖಾತ್ರಿ ಯೋಜನೆಗೆ ಈ ಬಜೆಟ್ ದಾಖಲೆಯ ಮೊತ್ತ (39,100 ಕೋಟಿ ರುಪಾಯಿ) ನೀಡಿರುವುದು ಈ ಬಾರಿಯ ವಿಶೇಷ.

ತೆರಿಗೆ

ಕಾರ್ಪೋರೆಟ್ ತೆರಿಗೆಯಲ್ಲಿ ಬದಲಾವಣೆ ಮಾಡದಿರುವುದನ್ನು ಬಿಟ್ಟರೆ ಬೆಂಗಳೂರಿನಲ್ಲಿ ಕೇಂದ್ರೀಯ ತೆರಿಗೆ ಕೇಂದ್ರ ಸ್ಥಾಪನೆ. ಹಿರಿಯ ನಾಗರಿಕರ ಆದಾಯ ಮಿತಿ 2.25 ರಿಂದ 2.4 ಲಕ್ಷ ರುಪಾಯ ಏರಿಕೆ. ಮಹಿಳೆಯರ ಆದಾಯ ಮಿತಿ 1.8 ರಿಂದ 1.9 ಲಕ್ಷ ರುಪಾಯಿಗೆ ಹೆಚ್ಚಳ. ಆದಾಯ ತೆರಿಗೆ ಮಿತಿ 1.6 ಲಕ್ಷ ಹೆಚ್ಚಳ. 45 ದಿನಗಳಲ್ಲಿ ನೂತನ ತೆರಿಗೆ ನೀತಿ ಜಾರಿ. ನೇರ ತೆರಿಗೆ ಸರ್ ಚಾರ್ಜ್ ರದ್ದು, ಕಮಾಡಿಟಿ ಟ್ರಾನ್ಜಾಕ್ಷನ್ ತೆರಿಗೆ ರದ್ದು. ಮುಖ್ಯವಾಗಿ ಫ್ರಿಂಜ್ ಬೆನಿಫಿಟ್ ತೆರಿಗೆ ರದ್ದು ಮಾಡಿರುವುದು ಉತ್ತಮ ಬೆಳವಣಿಗೆ ಎನ್ನುವ ಮಾತು ಎಲ್ಲೆಡೆ ಕೇಳಿ ಬಂದಿದೆ. ಅಲ್ಲದೇ ಸೆಟ್ ಟಾಪ್ ಬಾಕ್ಸ್ ಗಳ ತೆರಿಗೆಯಲ್ಲಿ ಶೇ.5 ರಷ್ಟು ಕಡಿತ. ಎಲ್ ಸಿಡಿ ಟಿವಿಗಳ ಇನ್ನಷ್ಟು ಅಗ್ಗ. ಪಾದರಕ್ಷೆ, ಜವಳಿ ವಸ್ತುಗಳ ಮೇಲಿನ ತೆರಿಗೆ ಇಳಿಕೆಯಾಗಿದೆ.

ಸದ್ಯದ ಆರ್ಥಿಕತೆ ಶೇ. 6.7ರಷ್ಟಿದೆ. ಈ ಆರ್ಥಿಕತೆಯನ್ನು ಜಿಡಿಪಿಯ ಶೇ. 9 ರ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಸರಕಾರದ ಮುಖ್ಯ ಉದ್ದೇಶ ಮತ್ತು ಪ್ರಯತ್ನ. ವಿಶೇಷವಾಗಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿ ಕುಡಿಯುವ ನೀರು, ರಸ್ತೆ ಮತ್ತು ಮೂಲಭೂತ ಸೌಲಭ್ಯಗಳ ಗಮನ ಕೊಟ್ಟಿರುವ ಸಚಿವರು ಕೋಟ್ಯಂತರ ರುಪಾಯಿಗಳನ್ನು ಬಿಡುಗಡೆಗೊಳಿಸಿರುವುದು ಆಶಾದಾಯಕ ಎನ್ನಬಹುದು.

ಕೃಷಿ

ಕೃಷಿಗೆ ಬಂಪರ್ ಕೊಡುಗೆ ನೀಡಿರುವ ಯುಪಿಎ ಸರಕಾರ, 2008-09ರ ಸಾಲಿನಲ್ಲಿ 2,87,000 ಕೋಟಿ ರುಪಾಯಿ ಇದ್ದ ಅನುದಾನ, 2009-10ರ ಸಾಲಿನಲ್ಲಿ 3,25,000 ಕೋಟಿ ರುಪಾಯಿ ಹೆಚ್ಚಿಸಲಾಗಿದೆ. 3 ಲಕ್ಷ ರೈತರಿಗೆ ಶೇ. 7 ಬಡ್ಡಿದರದಲ್ಲಿ ಸಾಲ ಮತ್ತು ಅದರ ಮರುಪಾವತಿಗೆ ಆರು ಕಾಲಾವಕಾಶ ನೀಡಿರುವುದು ರೈತರು ಪ್ರಯೋಜನವಾಗಲಿದೆ.

ಉದ್ಯೋಗ ಖಾತ್ರಿ ಯೋಜನೆ

ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಖಾತ್ರಿ ಯೋಜನೆ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ 39,100 ಕೋಟಿ ರುಪಾಯಿಗಳನ್ನು ಮೀಸಲಿರಿಸಲಾಗಿದೆ. ಮುಖ್ಯವಾಗಿ ಅರಣ್ಯ, ಕುಡಿಯುವ ನೀರಿನ ಯೋಜನೆ, ರಸ್ತೆಗಳ ನಿರ್ಮಾಣ ಮತ್ತಿತರ ಕ್ಷೇತ್ರಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದ್ದು, ಪ್ರಯೋಗಿಕವಾಗಿ ದೇಶದ 115 ಜಿಲ್ಲೆಗಳಲ್ಲಿ ಯೋಜನೆ ಜಾರಿಗೊಳಿಸಲಾಗುವುದು. ಉದ್ಯೋಗ ಖಾತ್ರಿ ಯೋಜನೆಯಿಂದ ಉಲ್ಲಾಸಿತವಾಗಿರುವ ಯುಪಿಎ ಸರಕಾರ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯನ್ನು ಜಾರಿಗೊಳಿಸಿರುವುದು ವಿಶೇಷವಾಗಿದೆ. ಈ ಯೋಜನೆ ಅಡಿಯಲ್ಲಿ ತಿಂಗಳಿಗೆ 3 ರುಪಾಯಿಯಂತೆ 25 ಕೆಜಿ ಅಕ್ಕಿ ಇಲ್ಲವೇ ಗೋಧಿ ನೀಡಲಾಗುವುದು ಎಂದಿದ್ದಾರೆ.

ಶಿಕ್ಷಣ

ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಅಧ್ಯತೆ ನೀಡಿರುವ ಮುಖರ್ಜಿ, ನೂತನ ಐಐಟಿ ಮತ್ತು ಎನ್ಐಐಟಿ ಗಳ ಸ್ಥಾಪನೆಗೆ 2,113 ಕೋಟಿ ರುಪಾಯಿಗಳ ಮೀಸಲು. ಉನ್ನತ ಶಿಕ್ಷಣಕ್ಕೆ 2000 ಕೋಟಿ ರುಪಾಯಿ ನೀಡಿಕೆ. ಚಂಡೀಗಢ್ ವಿಶ್ವವಿದ್ಯಾಲಯದ ಅಭಿವೃದ್ಧಿಗೆ 50 ಕೋಟಿ ರುಪಾಯಿ. ಮಿಷನ್ ಎಜುಕೇಷನ್ ಇನ್ನಷ್ಟು ಪರಿಣಾಮಕಾರಿಯಾಗಿಸಲು ಕ್ರಮ. ಪ್ರತಿ ವರ್ಷ 1.20 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನೀಡಿರುವ ಭರವಸೆ ಸ್ವಾಗತಾರ್ಹವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X