ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಕೋಮುಗಲಭೆ : ಮೂರು ಸಾವು

By Staff
|
Google Oneindia Kannada News

ಮೈಸೂರು, ಜು. 2 : ಒಂದು ಕೋಮಿಗೆ ಸೇರಿದ ಧಾರ್ಮಿಕ ಶಾಲೆಯೊಂದನ್ನು ನೆಲ ಸಮಗೊಳಿಸಿದ ಹಿನ್ನೆಲೆಯಲ್ಲಿ ಉದ್ಭವಿಸಿದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕೋಮುಗಲಭೆಗೆ ಕಾರಣವಾಗಿದೆ. ಈ ದುರ್ಘಟನೆಯಲ್ಲಿ ಮೂರು ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಜನರು ಗಾಯಗೊಂಡಿರುವ ಘಟನೆ ನಗರದ ಕ್ಯಾತಮಾರನಹಳ್ಳಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಗುಂಪು ಚೆದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಗಲಭೆ ನಡೆದ ಪ್ರದೇಶವಾದ ಗಾಯಿತ್ರಿಪುರಂನಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇನ್ನು ಕೆಲ ಪ್ರದೇಶಗಳಾದ ಗೌಸಿಯಾ ನಗರ, ಶಾಂತಿ ನಗರ, ಉದಯಗಿರಿ ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆಕ್ರೋಶಗೊಂಡ ಪ್ರತಿಭಟನಾಕಾರರು ನಾಲ್ಕು ಅಟೋ, ಒಂದು ಪೊಲೀಸ್ ಜೀಪು ಮತ್ತು 9 ದ್ವಿಚಕ್ರ ವಾಹನಗಳನ್ನು ಸುಟ್ಟು ಭಸ್ಮ ಮಾಡಿದ್ದಾರೆ. ಮೈಸೂರು ನಗರ ಕೋಮುಗಲಭೆಯಿಂದ ನರಳತೊಡಗಿದ್ದು, ಬೂದಿ ಮುಚ್ಚಿದ ಕೆಂಡದಂತಾಗಿದೆ.

ಘಟನೆಯ ವಿವರ

ಗಾಯಿತ್ರಿಪುರಂನಲ್ಲಿರುವ ಒಂದು ಸಮುದಾಯಕ್ಕೆ ಸೇರಿದ ಧಾರ್ಮಿಕ ಶಾಲೆಯನ್ನು ಕೆಲವರು ನೆಲಸಮಗೊಳಿಸಿದ್ದು ಇನ್ನೊಂದು ಸಮುದಾಯದ ಆಕ್ರೋಶಕ್ಕೆ ಕಾರಣವಾಯಿತು. ಧಾರ್ಮಿಕ ಶಾಲೆ ನೆಲಸಮಗೊಳಿಸಿರುವ ಸುದ್ದಿ ಹಬ್ಬುತ್ತಿದ್ದಂತೆಯೇ ಒಂದು ಕೋಮಿನ ಜನ ನೂರಾರು ಮಂದಿ ಒಂದೆಡೆ ಸೇರಿ ಪ್ರತಿಭಟನೆ ಆರಂಭಿಸಿದರು. ಈ ಸಂದರ್ಭದಲ್ಲಿ ಉದ್ರಿಕ್ತರ ಗುಂಪು ಕೈಗೆ ಸಿಕ್ಕ ಜನರನ್ನು ಥಳಿಸತೊಡಗಿದರು.

ಘಟನೆ ನಡೆದ ಸ್ಲಲ್ಪ ಹೊತ್ತಿನಲ್ಲಿ ಕ್ಯಾತಮಾರನಹಳ್ಳಿ ವೃತ್ತದಲ್ಲಿ ಗುಂಪು ಪ್ರತಿಭಟನಾಕಾರರು ಆಗ ಸಿಕ್ಕಿದ 25 ವರ್ಷದ ವ್ಯಕ್ತಿಯೊಬ್ಬನನ್ನು ಮನಬಂದಂತೆ ಥಳಿಸಿದ್ದಾರೆ. ತೀವ್ರವಾಗಿ ಹಲ್ಲೆಗೊಳಗಾದ ವ್ಯಕ್ತಿ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾನೆ. ಇನ್ನೊಬ್ಬ ವ್ಯಕ್ತಿ ಪತ್ನಿ ಜೊತೆಗೆ ತೆರಳುತ್ತಿದ್ದ ಸಮಯದಲ್ಲಿ ಆತನನ್ನು ತಡೆದ ಉದ್ರಿಕ್ತ ಗುಂಪು ಆತನನ್ನು ಕೂಡಾ ಹಿಗ್ಗಾಮುಗ್ಗಾ ಥಳಿಸಿದೆ. ತಕ್ಷಣ ಕೆ ಆರ್ ಆಸ್ಪತ್ರೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ಆತ ಕೂಡಾ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮೂರನೇ ವ್ಯಕ್ತಿ ಕೂಡಾ ಇದೇ ರೀತಿ ಹಲ್ಲೆಗೊಳಗಾಗಿ ಸಾವಿಗೀಡಾಗಿದ್ದಾನೆ.

ಘಟನೆ ತಿಳಿದ ತಕ್ಷಣ ಘಟನೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪಿ ಮಣಿವಣ್ಣನ್ ಮತ್ತು ಪೊಲೀಸ್ ಆಯುಕ್ತ ಸುನೀಲ್ ಅಗರವಾಲ್ ಪರಿಸ್ಥಿತಿ ನಿಯಂತ್ರಿಸುವಲ್ಲಿ ಭಾರಿ ಹರಸಾಹಸ ನಡೆಸುತ್ತಿದ್ದಾರೆ. ಗಾಯಿತ್ರಿಪುರಂನಲ್ಲಿ ಕರ್ಫ್ಯೂ ಹೇರಲಾಗಿದೆ. ಕ್ಯಾತಮಾರನಹಳ್ಳಿ, ಉದಯಗಿರಿ, ಶಾಂತಿನಗರ, ಗೌಸಿಯಾ ನಗರಗಳಲ್ಲಿ ವಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆರ್ ಪಿಎಎಫ್, ಕೆಎಸ್ಆರ್ ಪಿ ಪಡೆಯನ್ನು ನಿಯೋಜಿಸಲಾಗಿದೆ ಎಂದು ಮಣಿವಣ್ಣನ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X