ಮತ್ತೆ ಕೃಷ್ಣಯ್ಯಶೆಟ್ಟಿ ಕೈ ಸೇರಿದ ಮುಜರಾಯಿ
ಬೆಂಗಳೂರು, ಜೂ. 28: ವಸತಿ ಹಾಗೂ ಮುಜರಾಯಿ ಇಲಾಖೆ ಮಾಜಿ ಸಚಿವ ಎಸ್ ಎನ್ ಕೃಷ್ಣಯ್ಯಶೆಟ್ಟಿ ಅವರಿಗೆ ಮತ್ತೆ ದೇವಾಲಯ ಅಭಿವೃದ್ಧಿ ಕೈಂಕರ್ಯದಲ್ಲಿ ತೊಡಗಿಕೊಳ್ಳುವ ಯೋಗ ಒದಗಿದೆ. ಹೊಸದಾಗಿ ರಚಿಸಲಾಗಿರುವ ಕರ್ನಾಟಕ ಮುಜರಾಯಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನಾಗಿ ನೇಮಕ ಮಾಡಲಾಗಿದೆ. ಕ್ಯಾಬಿನೆಟ್ ದರ್ಜೆಯ ಎಲ್ಲಾ ಮಾನ್ಯತೆ, ಸೌಲಭ್ಯಗಳು ಶೆಟ್ಟಿ ಅವರಿಗೆ ಸಿಗಲಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಅಧ್ಯಕ್ಷರಾಗಿ ಕೃಷ್ಣಯ್ಯ ಶೆಟ್ಟಿ ಜೂ. 20 ರಂದು ಅಧಿಕಾರ ವಹಿಸಿಕೊಂಡಿದ್ದರು.ಈಗ ಹೆಚ್ಚುವರಿಯಾಗಿ ಮುಜರಾಯಿ ಅಭಿವೃದ್ಧಿ ಮಂಡಳಿಯ ನಿರ್ವಹಣೆಯ ಹೊಣೆ ನೀಡಲಾಗಿದೆ.
ಇತ್ತೀಚೆಗೆ ತಿರುಪತಿಗೆ ತೆರಳಿದ್ದ ಶೆಟ್ಟಿ, ರಾಜ್ಯ ಸಚಿವ ಸಂಪುಟಕ್ಕೆ ಜೂ. 17 ರಂದು ರಾಜೀನಾಮೆ ನೀಡಿದ್ದರು. ಅವರು ನಿರ್ವಹಿಸುತ್ತಿದ್ದ ವಸತಿ ಮತ್ತು ಮುಜರಾಯಿ ಖಾತೆಯನ್ನು ಹೊಸದಾಗಿ ಸಂಪುಟಕ್ಕೆ ಸೇರಿದ ವಿ ಸೋಮಣ್ಣ ಅವರಿಗೆ ಯಡಿಯೂರಪ್ಪ ನೀಡಿದ್ದರು. ಕೃಷ್ಣಯ್ಯ ಶೆಟ್ಟಿ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದನ್ನು ವಿರೋಧಿಸಿ ಅವರ ಬೆಂಬಲಿಗರು ಪ್ರತಿಭಟನೆ ಮಾಡಿದ್ದರು. ಯಡಿಯೂರಪ್ಪ ಅವರು ಶೆಟ್ಟಿ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದರು. ಅದರಂತೆ ಈಗ ಕ್ಯಾಬಿನೆಟ್ ದರ್ಜೆಯುಳ್ಳ ಸ್ಥಾನವನ್ನು ಶೆಟ್ಟಿ ಅವರಿಗೆ ನೀಡಲಾಗಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications