ಯಡಿಯೂರಪ್ಪ, ಈಶ್ವರಪ್ಪ ಅಕ್ರಮ ಆಸ್ತಿ ತನಿಖೆಯಾಗಲಿ

ಬುಧವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಲೋಕಸಭಾ ಚುನಾವಣೆ ಆರಂಭವಾದಾಗಿನಿಂದಲೂ ಪದೇ ಪದೇ ಚುನಾವಣಾ ಆಯೋಗಕ್ಕೆ ಹೆಂಡ ಮತ್ತು ಹಣದ ಹೊಳೆ ಹರಿಯುತ್ತಿರುವ ಬಗ್ಗೆ ಲಿಖಿತ ದೂರುಗಳನ್ನು ನೀಡಿದ್ದೆವು. ಚುನಾವಣಾ ನೀತಿ ಸಂಹಿತೆಯನ್ನು ಗಾಳಿಗೆ ತೂರಿ, ಜಿಲ್ಲಾಡಳಿತವನ್ನು ದುರಪಯೋಗಪಡಿಸಿಕೊಂಡು ತಮ್ಮ ಮಗ ಗೆಲ್ಲಲೇಬೇಕೆಂಬ ಹಠದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗದಲ್ಲಿ ಅತೀ ಹೆಚ್ಚು ಹೆಂಡ ಸರಬರಾಜು ಮಾಡಿಸಿದರು. ಈ ಬಗ್ಗೆ ಚುನಾವಣಾ ಆಯೋಗ ಮೌನ ವಹಿಸಿತ್ತು. ಈಗ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪರವರೇ ನೇರವಾಗಿ ಆರೋಪ ಮಾಡಿರುವುದರಿಂದ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಚಿವ ಈಶ್ವರಪ್ಪ ಹಣ, ಹೆಂಡ, ಜಾತಿ ಲಾಬಿಯಿಂದ ಬಿಜೆಪಿಗೆ ಕಡಿಮೆ ಮತಗಳು ಬಂದಿವೆ, ಇದು ಸರಿಯಲ್ಲ ಎಂದು ಆರೋಪಿಸಿದ್ದಾರೆ. ಇಡೀ ರಾಜ್ಯದಲ್ಲಿ 19 ಸ್ಥಾನಗಳನ್ನು ಬಿಜೆಪಿ ಪಡೆದಿರುವುದು ಹಣ, ಹೆಂಡವನ್ನು ಹಂಚಿ ಎಂಬುದು ಸಾಬೀತಾಗಿದೆ. ಮುಖ್ಯಮಂತ್ರಿಗಳ ಮಗ ಗೆಲ್ಲಬೇಕೆಂಬ ಹಿನ್ನೆಲೆಯಲ್ಲಿ ಯಡಿಯೂರಪ್ಪ ಎಲ್ಲದನ್ನೂ ಮಾಡಿದರು. ಶಿವಮೊಗ್ಗದಲ್ಲಿ ಪದೇ ಪದೇ ಕಾಣಿಸಿಕೊಂಡರು. ಆದರೆ, ಜಿಲ್ಲಾ ಚುನಾವಣಾಧಿಕಾರಿಗೆ 6 ಬಾರಿ ಮಾತ್ರ ಶಿವಮೊಗ್ಗಕ್ಕೆ ಬಂದಿದ್ದೇನೆ ಎಂದು ಲಿಖಿತವಾಗಿ ವಿವರಿಸಿದ್ದಾರೆ. ಈಶ್ವರಪ್ಪ ಧೈರ್ಯ ಮಾಡಿ ಅಪರೂಪಕ್ಕೆ ಚುನಾವಣೆಯನ್ನು ವಿಶ್ಲೇಷಿಸಿದ್ದಾರೆ. ತನಿಖೆಗೆ ಒತ್ತಾಯಿಸಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷ ಮನೆಗೇ ಹೋಗಿ ಅಭಿನಂದಿಸಲು ಬಯಸಿತ್ತು. ಆದರೆ, ಅವರು ದೆಹಲಿಯಲ್ಲಿರುವುದರಿಂದ ಆ ಕೆಲಸವಾಗಲಿಲ್ಲ. ಅವರು ತಮ್ಮ ಮನೆಗೆ ಬಂದ ಕೂಡಲೇ ಕಾಂಗ್ರೆಸ್ ಅಭಿನಂದಿಸುವ ಕೆಲಸ ಮಾಡಲಿದೆ ಎಂದು ಪ್ರಸನ್ನಕುಮಾರ್ ವ್ಯಂಗ್ಯವಾಗಿ ಹೇಳಿದರು.
ಇಡೀ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ 19 ಜನ ಬಿಜೆಪಿಯ ಸದಸ್ಯರು ಮತದಾರರಿಗೆ ಹಣ, ಹೆಂಡ ಹಂಚುವ ಮೂಲಕ ಬಹಿರಂಗ ಅವಮಾನ ಮಾಡಿದ್ದಾರೆ. ಈಶ್ವರಪ್ಪ ಈ ಬಗ್ಗೆ ನೇರವಾಗಿ ಹೇಳದಿದ್ದರೂ ಸಹ ತಮ್ಮ ಆತಂಕವನ್ನು ತೋರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಚುನಾವಣಾ ನೀತಿ ಸಂಹಿತೆಗಳನ್ನು ಗಾಳಿಗೆ ತೂರಿ ಗೆದ್ದಿರುವ ಬಿ.ವೈ.ರಾಘವೇಂದ್ರ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು. ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಸೇರಿದಂತೆ 19 ಜನ ಬಿಜೆಪಿಯ ಸಂಸತ್ ಸದಸ್ಯರನ್ನು ಅನರ್ಹಗೊಳಿಸಬೇಕು. ಈ ಬಗ್ಗೆ ಮತ್ತೆ ಚುನಾವಣಾ ಆಯೋಗಕ್ಕೆ ಲಿಖಿತ ದೂರು ನೀಡಲು ನಿರ್ಧರಿಸಿದ್ದೇವೆ. ಚುನಾವಣಾ ಆಯೋಗ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ದೊಡ್ಡ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಸನ್ನಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಎಸ್.ಪಿ.ದಿನೇಶ್, ರುದ್ರೇಶ್, ಅಡ್ಡು, ಉಮಾಪತಿ, ಎಸ್.ಟಿ.ಹಾಲಪ್ಪ, ಎ.ಬಿ.ಮಾರ್ಟೀಸ್, ರಾಮೇಗೌಡ, ಶಕುಂತಲಾ ಚಂದ್ರಶೇಖರ್, ಸತ್ಯನಾರಾಯಣ್, ವಿಜಯ್ ಕುಮಾರ್, ರಮೇಶ್ ಹೆಗ್ಡೆ, ಜಮೀಲಾ ಖಾನಂ ಮತ್ತಿತರರು ಹಾಜರಿದ್ದರು.












Click it and Unblock the Notifications