ಅಪೊಲೊ ಆಸ್ಪತ್ರೆಯಲ್ಲಿ ಮಹಿಳೆ ದಾರುಣ ಕೊಲೆ
ಬೆಂಗಳೂರು, ಮೇ.30: ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೊ ಆಸ್ಪತ್ರೆಯ ಪ್ರಯೋಗಾಲಯ ತಂತ್ರಜ್ಞೆ, ಕೇರಳ ಮೂಲದ ಜಿತಿನ್ ಜಾರ್ಜ್ (26) ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ದಾರುಣ ಘಟನೆ ಶುಕ್ರವಾರ ನಸುಕಿನಲ್ಲಿ ನಡೆದಿದೆ. ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಮೈಕ್ರೊಬಯಾಲಜಿ ಪ್ರಯೋಗಾಲಯದಲ್ಲಿ ಜಿತಿನ್ ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುತ್ತಿದ್ದರು.
ಆಸ್ಪತ್ರೆಯಲ್ಲಿ ಪ್ರಯೋಗಾಲಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಪಳನಿ (24)ಎಂಬುವರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಜಿತಿನ್ ಅವರನ್ನು ಮದುವೆಯಾಗುವಂತೆ ಪಳನಿ ಎಂಬಾತ ಪೀಡಿಸುತ್ತಿದ್ದ ಎನ್ನಲಾಗಿದೆ.
ಬೆಳಗಿನ ಪಾಳಿ ಕೆಲಸ ಮುಗಿಸಿ ಮತ್ತೆ ರಾತ್ರಿ ಪಾಳಿ ಕೆಲಸಕ್ಕೆ ಪಳನಿ ಬಂದಿದ್ದ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಜಿತಿನ್ ಜತೆ ಆತ ಮಾತನಾಡುತ್ತಿದ್ದನ್ನು ಆಸ್ಪತ್ರೆಯ ಕೆಲವು ಸಿಬ್ಬಂದಿ ನೋಡಿದ್ದಾರೆ. ಬೆಳಗ್ಗೆ ಆಸ್ಪತ್ರೆಗೆ ಬಂದ ಸಿಬ್ಬಂದಿ ಜಿತಿನ್ ಕೆಳಗೆ ಬಿದ್ದಿರುವುದನ್ನು ನೋಡಿ ಮಾತನಾಡಿಸಲು ಯತ್ನಿಸಿದ್ದಾರೆ. ಆಗ ಕೊಲೆಯಾಗಿದ್ದಾರೆ ಎಂದು ತಿಳಿದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸೂಕ್ಷ್ಮ ಜೀವ ವಿಜ್ಞಾನದಲ್ಲಿ ಜಿತಿನ್ ಎಂಎಸ್ಸಿ ಮುಗಿಸಿದ್ದರು. ಕಾಲೇಜಿನಲ್ಲಿ ಓದುತ್ತ್ತಿರುವಾಗಲೇ ಅವರಿಗೆ ಪಳನಿಯ ಪರಿಚಯವಾಗಿತ್ತು. ಒಂದೂವರೆ ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ ಜಿತಿನ್ ನಾರಾಯನ ಹೃದಯಾಲಯದಲ್ಲಿ ಕೆಲಸಕ್ಕೆ ಸೇರಿದ್ದರು.
ಪಳನಿ ಸಹ ಅಲ್ಲೇ ಕೆಲಸ ಮಾಡುತ್ತಿದ್ದ.ಜಿತಿನ್ ರನ್ನು ಮದುವೆಯಾಗುವಂತೆ ಪಳನಿ ಬಹಳಷ್ಟು ಪೀಡಿಸುತ್ತಿದ್ದ ಆದರೆ ಜಿತಿನ್ ಗೆ ಪಳನಿಯನ್ನು ಮದುವೆಯಾಗಲು ಇಷ್ಟವಿರಲಿಲ್ಲ.ಕೊನೆಗೆ ಇದು ಕೊಲೆಯಲ್ಲಿ ಪರಿಸಮಾಪ್ತಿಯಾಗಿದೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications