ಗುಬ್ಬಿ ರೈತರ ಮೇಲೆ ಅಕ್ರಮ ಗಣಿಗಾರಿಕೆ ಬ್ರಹ್ಮಾಸ್ತ್ರ

Illegal mining in Gubbi
ಬೇಲಿಯೇ ಎದ್ದು ಹೊಲ ಮೇಯ್ದ ಗಾದೆಗೆ ಪ್ರತ್ಯಕ್ಷ ಸಾಕ್ಷಿಯಂತಿದೆ ಗುಬ್ಬಿ ತಾಲೂಕಿನಲ್ಲಿ ಅಕ್ರಮವಾಗಿ ಗಣಿಗಾರಿಕೆಗೆ ಅನುಮತಿ ನೀಡಿದ ಪ್ರಕರಣ. ಗಣಿಧಣಿ ಮತ್ತು ಸರಕಾರಿ ಅಧಿಕಾರಿಗಳ ಅನೈತಿಕ ಮೈತ್ರಿಯನ್ನು ಈ ಪ್ರಕರಣ ಬೆತ್ತಲು ಮಾಡಿದೆ. ಇಷ್ಟು ಸಾಲದೆಂಬಂತೆ ಉಚ್ಚ ನ್ಯಾಯಾಲಯಕ್ಕೆ ಕೂಡ ತಪ್ಪು ಮಾಹಿತಿ ನೀಡಲಾಗಿದೆ. ಈ ಪ್ರಕರಣದ ತನಿಖೆ ಮಾಡಬೇಕೆಂದು ರೈತರು ದುಂಬಾಲು ಬಿದ್ದಿದ್ದಾರೆ. ರೈತರಿಗೆ ನ್ಯಾಯ ಸಿಗುವುದೆ?

* ಬಿದರೆಪ್ರಕಾಶ್, ಗುಬ್ಬಿ

ಗುಬ್ಬಿ ತಾಲೂಕಿನ ಮೂಡಲ ಪಾಳ್ಯ ಹಾಗೂ ಶಿವಸಂದ್ರ ಗ್ರಾಮಗಳಲ್ಲಿ ನೀಡಲಾಗಿರುವ ಗಣಿ ಗುತ್ತಿಗೆ ಹೊಸ ವಿವಾದವನ್ನು ಸೃಷ್ಟಿ ಮಾಡಿದೆ. ಶಿವಸಂದ್ರ ಗ್ರಾಮದ ಸ ನಂ 44 ಮತ್ತು 45 ಮತ್ತು ಮೂಡಲಪಾಳ್ಯ ಗ್ರ್ರಾಮದ ಸನಂ 9ರಲ್ಲಿನ 509 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಗುತ್ತಿಗೆಯನ್ನು ನೀಡಲಾಗಿದೆ. ಏಪ್ರಿಲ್ 15ರಂದು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದರಿಂದ ಹಲವು ಸಂಶಯಗಳು ಉದ್ಭವವಾಗಲು ಕಾರಣವಾಗಿದೆ.

ವಿಸ್ತೀರ್ಣ ಗೊಂದಲ : ಮೊಟ್ಟಮೊದಲನೆಯದಾಗಿ ಈಗ ಗುತ್ತಿಗೆ ನೀಡಲಾಗಿರುವ ಪ್ರದೇಶದ ವ್ಯಾಪ್ತಿಯನ್ನು ಏಪ್ರಿಲ್ 16ರಂದು ಮೊದಲು 509 ಎಕರೆಗೆ ನಿಗದಿ ಪಡಿಸಲಾಗಿತ್ತು. ಆದರೆ ಗಣಿ ಗುತ್ತಿಗೆ ನೀಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು ಸರಕಾರದ ಗಮನಕ್ಕೆ ತರದೆ ಇದರ ವ್ಯಾಪ್ತಿಯನ್ನು 330 ಎಕರೆಗೆ ನಿಗದಿಪಡಿಸಿದ್ದಾರೆ. ಆದರೆ ನಿಯಮಾವಳಿಗಳ ಪ್ರಕಾರ ಸರಕಾರ ನಿಗದಿಪಡಿಸಿದ ವ್ಯಾಪ್ತಿಯನ್ನು ಹೆಚ್ಚಿಸುವ ಅಥವಾ ಕಡಿಮೆಗೊಳಿಸುವ ಅಧಿಕಾರ ನಿರ್ದೇಶಕರ ವ್ಯಾಪ್ತಿಗೆ ಬರುವುದಿಲ್ಲ. ಒಂದು ವೇಳೆ ಪ್ರದೇಶದ ವ್ಯಾಪ್ತಿಯನ್ನು ಬದಲಾಯಿಸಬೇಕಾದಲ್ಲಿ ಸರಕಾರದ ಅನುಮತಿ ಅವಶ್ಯಕವೆಂಬ ನಿಯಮವನ್ನು ಇಲ್ಲಿ ಗಾಳಿಗೆ ತೂರಲಾಗಿದೆ.

ಪ್ರಕ್ರಿಯೆಗೆ ಎಂಟೇ ದಿನ : ಇದಲ್ಲದೆ ಈ ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯೆಗಳು ಕೇವಲ ಎಂಟು ದಿನದಲ್ಲಿ ಪೂರ್ಣಗೊಂಡಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಚನ್ನಕೇಶವರೆಡ್ಡಿಯವರ ಅರ್ಜಿಗೆ ಸಂಬಂಧಿಸಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು ಸಂಬಂಧಿಸಿದ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಕೇವಲ 2-3 ದಿನದಲ್ಲಿ ಸರ್ವೇ ಕಾರ್ಯ ಮಾಡಿ ಮುಗಿಸಲು ಸೂಚಿಸಿದ್ದರು. ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ಮುಳುಗಿ ಹೋಗಿದ್ದರೂ ಈ ಎರಡು ದಿನದಲ್ಲಿಯೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ್ದಾರೆ. ಈ ರೀತಿ ಸರ್ವೆ ಮಾಡಿದ ಮಹಜರಿಗೆ ಸಾರ್ವಜನಿಕರಾರೂ ಸಹಿ ಮಾಡದಿರುವುದು ಸರ್ವೆ ಕಾರ್ಯ ನ್ಯಾಯ ಸಮ್ಮತವಾಗಿ ನಡೆದಿಲ್ಲವೆಂಬ ಆರೋಪಗಳಿಗೂ ಸ್ಪಷ್ಟ ಸಾಕ್ಷಿಯಾಗಿದೆ.

ತಾಲೂಕಿನ ರೈತರ ಒಂದು ಎಕರೆ ಜಮೀನಿನ ಸರ್ವೆ ಕಾರ್ಯಕ್ಕೆ ತಿಂಗಳುಗಟ್ಟಲೆ ಅಲೆಸಿಕೊಳ್ಳುವ ಕಂದಾಯ ಇಲಾಖೆಯ ಅಧಿಕಾರಿಗಳು ಚುನಾವಣಾ ಕಾರ್ಯವಿದ್ದರೂ 509 ಎಕರೆ ಪ್ರದೇಶದ ಸರ್ವೆ ಕಾರ್ಯವನ್ನು ಒಂದೇ ದಿನದಲ್ಲಿ ಮಾಡಿ ಮುಗಿಸಿದ್ದಾದರೂ ಹೇಗೆ? ಸರ್ವೆ ಮಾಡುವ ಬಗ್ಗೆ ಈ ಸರ್ವೆ ನಂಬರಲ್ಲಿ ಸಾಗುವಳಿ ಮಾಡುವ ರೈತರುಗಳಿಗಾಗಲೀ, ಅಕ್ಕಪಕ್ಕದ ರೈತರುಗಳಿಗಾಗಲೀ ಯಾವುದೇ ರೀತಿಯ ನೋಟೀಸ್ ನೀಡದಿರುವುದು ಸರ್ವೆ ಕಾರ್ಯ ನಿಷ್ಪಕ್ಷಪಾತವಾಗಿ ನಡೆದಿಲ್ಲವೆಂಬ ವಾದಕ್ಕೆ ಪುಷ್ಟಿ ನೀಡುತ್ತದೆ.

ತಾವು ಅಧಿಕಾರ ವಹಿಸಿಕೊಂಡ ಮೇಲೆ ಯಾವುದೇ ಗಣಿಗಾರಿಕೆಗೆ ಗುತ್ತಿಗೆ ನೀಡಿಲ್ಲವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೇಳಿಕೆ ಕೊಟ್ಟಿದ್ದಾರೆ. ಆದರೆ ಈ ಪ್ರಕರಣದಲ್ಲಿ ಚುನಾವಣಾ ಸಮಯದಲ್ಲಿಯೇ ನಿಯಮಾವಳಿಗಳನ್ನು ಮೀರಿ ಗಣಿ ಗುತ್ತಿಗೆಯನ್ನು ನೀಡಿದ್ದಾರೆ. ಈ ಜಮೀನಿಲ್ಲಿಯೇ ಅನೇಕ ರೈತರಿಗೆ ಸಾಗುವಳಿ ಚೀಟಿಯನ್ನೂ ನೀಡಲಾಗಿದೆ. ಆದರೆ ರೈತರು ಸಾಗುವಳಿ ಮಾಡುತ್ತಿರುವ ಜಮೀನಿನ ಬಗ್ಗೆ ಸರಿಯಾದ ರೀತಿಯಲ್ಲಿ ಜಂಟಿ ಸರ್ವೆ ಕಾರ್ಯ ನಡೆಸಬೇಕೆಂಬ ಸಾರ್ವಜನಿಕರ ಬೇಡಿಕೆಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು ಕಡೆಗಣಿಸಿದ್ದಾರೆಂಬ ಆರೋಪವೂ ರೈತರದ್ದಾಗಿದೆ. ತರಾತುರಿಯಲ್ಲಿ ಗಣಿಮಾಲೀಕರ ಪರವಾಗಿ ನಿರ್ಧಾರ ತೆಗೆದುಕೊಂಡ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರ ಆದೇಶವನ್ನು ಹಿಂತೆಗೆದುಕೊಳ್ಳುವ ಇಚ್ಛಾಶಕ್ತಿಯನ್ನು ಸರಕಾರ ತೋರಬೇಕಾಗಿದೆ. ತಾವು ಅಧಿಕಾರ ವಹಿಸಿಕೊಂಡ ಕೂಡಲೇ ಅಕ್ರಮ ಗಣಿಗಾರಿಕೆ ನಿಯಂತ್ರಿಸುವಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್, ತಮ್ಮ ನೆರಳಿನಲ್ಲಿಯೇ ನಡೆದಿರುವ ಅಕ್ರಮ ಗಣಿಗುತ್ತಿಗೆಯನ್ನು ರದ್ದುಗೊಳಿಸುವ ದಿಟ್ಟ ನಿರ್ಧಾರವನ್ನು ಕೈಗೊಳ್ಳುವರೇ ಕಾದು ನೋಡಬೇಕಾಗಿದೆ.

ಹಲವು ಅಧಿಕಾರಿಗಳ ಶಾಮೀಲಿನಿಂದ ನಡೆಯುತ್ತಿರುವ ಗಣಿ ಗುತ್ತಿಗೆ ಪ್ರಕರಣ ಹಲವು ವರ್ಷಗಳಿಂದ ಅಧಿಕಾರಿಗಳ ಮತ್ತು ಗಣಿ ಮಾಲೀಕರ ಅನೈತಿರಿಕ ಮೈತ್ರಿಗೆ ಸ್ಪಷ್ಟ ಸಾಕ್ಷಿಯಾಗಿದೆ. ಈ ಗಣಿ ಗುತ್ತಿಗೆಯ ದಾಖಲೆಗಳ ಸರಕಾರಿ ವಕೀಲರೇ ನ್ಯಾಯಾಲಯಕ್ಕೆ ನಿಜಸಂಗತಿಗಳನ್ನು ಮರೆಮಾಚಿ ಗಣಿ ಮಾಲೀಕರ ಪರವಾಗಿ ಕಾರ್ಯವೆಸಗಿರುವುದು ಸ್ಪಷ್ಠವಾಗಿ ಗೋಚರಿಸುತ್ತದೆ. ಬೇಲಿಯೇ ಎದ್ದು ಹೊಲ ಮೇಯ್ದ ಗಾದೆಗೆ ಈ ಪ್ರಕರಣ ಪ್ರತ್ಯಕ್ಷ ಸಾಕ್ಷಿಯಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+