ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ ಪರಿಚಯ
ಬೆಂಗಳೂರು, ಏ. 22 : 1978ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ರಾಜಕೀಯವಾಗಿ ಮರುಜನ್ಮ ನೀಡಿದ್ದ ಚಿಕ್ಕಮಗಳೂರು ಕ್ಷೇತ್ರ ಈಗ ಮರುವಿಂಗಡಣೆಯ ನಂತರ ಉಡುಪಿಯ ಜೊತೆಗೆ ಸೇರಿಕೊಂಡಿದೆ. ಹೀಗಾಗಿ ಉಡುಪಿ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಬ್ರಹ್ಮಾವರ ಮತ್ತು ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಬೀರೂರು ಮಾಯವಾಗಿದೆ. ಉಡುಪಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಮೂಲ್ಕಿ, ಮೂಡಬಿದಿರೆ ಕ್ಷೇತ್ರ ಈಗ ದಕ್ಷಿಣ ಕನ್ನಡ ಲೋಕಸಭಾ ವ್ಯಾಪ್ತಿಗೆ, ಉಡುಪಿ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಬೈಂದೂರು ಶಿವಮೊಗ್ಗಕ್ಕೆ, ಕಡೂರು ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿಕೊಂಡಿದೆ.
ಪಕ್ಷದಲ್ಲಿನ ಆಂತರಿಕ ಭಿನ್ನಮತದಿಂದ ನೆಲೆ ಅರಸಿ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಸುರಕ್ಷಿತ ಬಿಜೆಪಿ ಭದ್ರಕೋಟೆ ಉಡುಪಿ - ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಎಂಟು ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ಅಭ್ಯರ್ಥಿಯನ್ನ್ಯು ಹುಡುಕುವುದೇ ಕಷ್ಟವಾಗಿ ಕೊನೇ ಕ್ಷಣದಲ್ಲಿ ಅಭ್ಯರ್ಥಿ ಹೆಸರನ್ನು ಅಂತಿಮ ಗೊಳಿಸಿತ್ತು. ಇನ್ನು ಜನತಾದಳ ಈ ಕ್ಷೇತ್ರವನ್ನು ಎಡಪಕ್ಷಗಳಿಗೆ ಬಿಟ್ಟುಕೊಟ್ಟಿದೆ ಅನ್ನುವುದಕ್ಕಿಂತ ಆ ಪಕ್ಷಕ್ಕೆ ಈ ಕ್ಷೇತ್ರದಲ್ಲಿ ನೆಲೆಯಿಲ್ಲ ಎನ್ನುವುದು ಉಚಿತ.
ಕಡಲ ತಡಿ, ಮಲೆನಾಡು ಮತ್ತು ಬಯಲುಸೀಮೆ. ಉಭಯ ವೈದಿಕ ಮತಗಳ ನೆಲ. ಕಾಫಿ, ಕಂಪಿನ ಕೆಮ್ಮಣ್ಣುಗುಂಡಿ, ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ, ಜ್ಞಾನಪೀಠ ಪುರಸ್ಕೃತ ಡಾ ಶಿವರಾಮ ಕಾರಂತ, ಕವಿ ಗೋಪಾಲಕೃಷ್ಣ ಅಡಿಗ ಹುಟ್ಟಿದ ಊರು. ಆರೋಗ್ಯ, ಬ್ಯಾಂಕಿಂಗ್, ಶಿಕ್ಷಣ ಕ್ಷೇತ್ರದಲ್ಲಿ ಮ೦ಚೂಣಿಯಲ್ಲಿ.
ಇತಿಹಾಸ ಪ್ರಸಿದ್ದ ಉಡುಪಿ ಶ್ರೀಕೃಷ್ಣ, ಆನೆಗುಡ್ಡೆ ವಿನಾಯಕ, ಶೃಂಗೇರಿ ಶಾರದಾ೦ಬೆ, ಕಾರ್ಕಳ ಅನಂತಶಯನ ದೇವಾಲಯ, ಕೊಲ್ಲೂರು ಮೊಕಾ೦ಬಿಕೆ, ಹೊರನಾಡು ಅನ್ನಪೂರ್ಣೇಶ್ವರಿ, ಮತ್ತು ಕಾರ್ಕಳದಲ್ಲಿರುವ ಗೋಮಟೇಶ್ವರ ಕ್ಷೇತ್ರದ ವಿಶೇಷ. ಮಕರಸಂಕ್ರಾತಿಯ ದಿನ ಉಡುಪಿಯಲ್ಲಿ ನಡೆಯುವ ಮೂರೂ ತೇರು ಉತ್ಸವ, ದೀಪಾವಳಿ ಹಬ್ಬದ ನಂತರ ನಡೆಯುವ ಲಕ್ಷದೀಪೋತ್ಸವ, ಶೃಂಗೇರಿ, ಕೊಲ್ಲೂರು ಮತ್ತು ಹೊರನಾಡಿನಲ್ಲಿ ನಡೆಯುವ ನವರಾತ್ರಿ ಆಚರಣೆ ಮತ್ತು ವಾರ್ಷಿಕ ರಥೋತ್ಸವ ಉಡುಪಿ ಪಡುಬಿದ್ರೆಯಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಢಕ್ಕೆಬಲಿ ಸೇವೆ ಮುಂತಾದ ಸಾಂಪ್ರದಾಯಿಕ ಆಚರಣೆಗಳು ಇಲ್ಲಿನ ವೈಶಿಷ್ಟ. ನಯನ ಮನೋಹರ ಮರವಂತೆ ಮತ್ತು ಮಲ್ಪೆ ಕಡಲು ತೀರ, ಸೈಂಟ್ ಮೇರಿಸ್ ದ್ವೀಪ, ಉಡುಪಿ ಮೀನುಗಾರಿಕಾ ಬಂದರು ಕ್ಷೇತ್ರದ ಪ್ರೇಕ್ಷಣೀಯ ಸ್ಥಳಗಳು. ಮೀನುಗಾರಿಕೆ, ಅಡಿಕೆ, ಭತ್ತ ಮತ್ತು ತೆಂಗು ಇಲ್ಲಿನ ಪ್ರಮುಖ ಬೆಳೆಗಳು. ಯಕ್ಷಗಾನ, ಹುಲಿವೇಷ, ಕೋಲ ಮುಂತಾದ ಜನಪದ ಕಲೆಗಳ ತವರೂರು.
* ಕ್ಷೇತ್ರ - ಉಡುಪಿ - ಚಿಕ್ಕಮಗಳೂರು
* ಚುನಾವಣೆ ದಿನಾಂಕ - ಎಪ್ರಿಲ್ 30
ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು
* ತರೀಕೆರೆ
* ಕುಂದಾಪುರ
* ಉಡುಪಿ
* ಕಾಪು
* ಕಾರ್ಕಳ
* ಶೃಂಗೇರಿ
* ಮೂಡಿಗೆರೆ
* ಚಿಕ್ಕಮಗಳೂರು
ಅಭ್ಯರ್ಥಿಗಳು
* ಕಾಂಗ್ರೆಸ್ - ಕೆ ಜಯಪ್ರಕಾಶ್ ಹೆಗ್ಡೆ
* ಬಿಜೆಪಿ - ಡಿ ವಿ ಸದಾನಂದ ಗೌಡ
* ಬಿಎಸ್ಪಿ - ಸ್ಟೀವನ್ ಜಾನ್ ಮಿನೇಜಸ್
* ಸಿಪಿಐ - ರಾಧಾ ಸುಂದರೇಶ್ ( ಜನತಾದಳ ಈ ಕ್ಷೇತ್ರ ಎಡಪಕ್ಷಗಳಿಗೆ ಬಿಟ್ಟುಕೊಟ್ಟಿದೆ)
* ಒಟ್ಟು ಮತದಾರರು: 13.55 ಲಕ್ಷ
* ಪುರುಷರು 7.05 ಲಕ್ಷ
* ಮಹಿಳೆಯರು 6.49 ಲಕ್ಷ
ಜಾತಿವಾರು ಲೆಕ್ಕಾಚಾರ
* ಬಿಲ್ಲವ 1.8 ಲಕ್ಷ
* ಬಂಟ 1.78 ಲಕ್ಷ
* ಮೊಗವೀರ 98 ಸಾವಿರ
* ಮುಸ್ಲಿಂ 34 ಸಾವಿರ
* ಬ್ರಾಹ್ಮಣ 14 ಸಾವಿರ
* ಕ್ರೈಸ್ತ 14 ಸಾವಿರ
* ಗೌಡ ಸಾರಸ್ವತ ಬ್ರಾಹ್ಮಣ 14 ಸಾವಿರ
* ವಿಶ್ವಕರ್ಮ 11 ಸಾವಿರ
* ಇತರ 49 ಸಾವಿರ
ಕ್ಷೇತ್ರದ ಸಮಸ್ಯೆಗಳ ಕಿರು ಪರಿಚಯ
* ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆ ರೋಗ ಮತ್ತು ಕುಸಿದ ಕಾಫಿ ದರ.
* ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಜನರ ಒಕ್ಕಲೆಬ್ಬಿಸುವಿಕೆ.
* ಅರಣ್ಯ ಒತ್ತುವರಿ
* ನಕ್ಸಲರ ಸಮಸ್ಯೆ
* ಉಡುಪಿಯಲ್ಲಿ ಮೀನುಗಾರಿಕಾ ಬಂದರು ಅಭಿವ್ರದ್ದಿ
* ಕುಸಿಯುತ್ತಿರುವ ಭತ್ತದ ಕೃಷಿ ಸಮಸ್ಯೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications