ಜನಾರ್ದನರೆಡ್ಡಿ-ಎಚ್ಡಿಕೆ ನಡುವೆ ಜಂಗೀಕುಸ್ತಿ

ಇಂದು ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕುಮಾರಸ್ವಾಮಿ ವಿರುದ್ಧ ತೀವ್ರವಾಗಿ ಹರಿಹಾಯ್ದ ರೆಡ್ಡಿ, ವಿವಾದಿತ ಎಂಎಸ್ ಪಿಎಸ್ ಕಂಪನಿಗೆ ಭೇಟಿ ನೀಡಿರುವ ಕುಮಾರಸ್ವಾಮಿ ಅವರ ಕ್ರಮ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಶೀಘ್ರದಲ್ಲಿ ಜೈಲಿನ ಕಂಬಿ ಎಣಿಸುವುದು ಗ್ಯಾರಂಟಿ ಎಂದು ರೆಡ್ಡಿ ಕಟುಕಿದರು.
ಕಳ್ಳನ ಹಾಗೆ ಯಾರಿಗೋ ಹೇಳದೆ ಕೇಳದೆ ಎಂಎಸ್ ಪಿಎಲ್ ಕಂಪನಿಯ ಮಾಲೀಕರಿಗೆ ಭೇಟಿ ಮಾಡಿರುವ ಹಿಂದಿನ ರಹಸ್ಯವಾದರೂ ಏನು ಪ್ರಶ್ನಿಸಿರುವ ರೆಡ್ಡಿ, ಗಡಿ ಉಲ್ಲಂಘನೆಗೆ ಸಂಬಂಧಿಸಿದಂತೆ ಆ ಕಂಪನಿ ವಿರುದ್ದ 30 ಕ್ಕೂ ಅಧಿಕ ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ. ಇಂತಹ ವಿವಾದಿತ ಪ್ರದೇಶಕ್ಕೆ ಕುಮಾರಸ್ವಾಮಿ ಭೇಟಿ ನೀಡಿರುವುದು ಕಾನೂನು ಬಾಹಿರ ಎಂದು ಕಿಡಿಕಾರಿದ್ದಾರೆ.
ಗರಂ ಆದ ಕುಮಾರಣ್ಣ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಶೀಘ್ರದಲ್ಲಿ ಕುಮಾರಸ್ವಾಮಿ ಜೈಲಿನ ಕಂಬಿ ಎಣಿಸಲಿದ್ದಾರೆ ಎನ್ನುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಿವಾದಿತ ಎಂಎಸ್ ಪಿಎಲ್ ಕಂಪನಿಯ ಪ್ರಕರಣ ನ್ಯಾಯಾಲದಲ್ಲಿದ್ದರೂ ರೆಡ್ಡಿ ಮತ್ತವರ ಪಟಾಲಂ ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಗಣಿಗಾರಿಕೆಯನ್ನು ಮುಂದುವರೆಸಿದೆ ಎಂದು ಆರೋಪಿಸಿದ ಅವರು, ಈ ಅಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಅಲ್ಲಿಗೆ ತೆರಳಿದ್ದೆ ಎಂದು ಸ್ಪಷ್ಟೀಕರಣ ನೀಡಿದರು.
ಕಾನೂನು ಬಾಹಿರ ಗಣಿಗಾರಿಕೆ ನಡೆಸುವುದಲ್ಲದೆ, ಅಧಿಕಾರ ದುರ್ಬಳಿಕೆ ಮಾಡಿಕೊಂಡು ಅಲ್ಲಿನ ಪೊಲೀಸ್ ಅಧಿಕಾರಿಗಳನ್ನು ತಮ್ಮ ಅಕ್ರಮ ಗಣಿಗಾರಿಕೆಯ ಕಾವಲಿಗೆ ನೇಮಿಸಿಕೊಂಡಿದ್ದಾರೆ ಎಂದು ಟೀಕಿಸಿದರು. ಜೈಲಿನ ಹೋಗುವವನು ನಾನಲ್ಲ. ಮುಂದಿನ ದಿನಗಳಲ್ಲಿ ರೆಡ್ಡಿ ಪರಿಸ್ಥಿತಿ ಏನಾಗಲಿದೆ ಎನ್ನುವುದನ್ನು ರಾಜ್ಯದ ಜನ ಕಣ್ಣಾರೆ ಕಾಣುತ್ತಾರೆ. ಹಗಲು ದರೋಡೆ ಮಾಡುತ್ತಿರುವ ರೆಡ್ಡಿ, ಕೋರ್ಟ್ ತೀರ್ಪು ಬಂದ ನಂತರ ಜೈಲಿಗೆ ಹೋಗುವುದು ಶತಸಿದ್ಧ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
ಗಡಿ ಸಮಸ್ಯೆ
ಗಡಿ ಉಲ್ಲಂಘನೆಗೆ ಸಂಬಂಧಿಸಿದಂತೆ ರಾಹುಲ್ ಬುಲ್ಡೋಟಾ ಮಾಲೀಕತ್ವದ ಎಂಎಸ್ ಪಿಎಲ್ ಹಾಗೂ ವಿ ನಾಗ್ ನೇತೃತ್ವದ ವಿಎನ್ನಾರ್ ಕಂಪನಿ ನಡುವೆ ಕಾನೂನು ಸಮಸ್ಯೆ ಉಂಟಾಗಿದೆ. ಎಂಎಸ್ ಪಿಎಲ್ ಕಂಪನಿಯೂ ಗಡಿ ಉಲ್ಲಂಘನೆ ಮಾಡಿದೆ ಎಂದು ವಿಎನ್ನಾರ್ ಕಂಪನಿಯೂ ಕೋರ್ಟ್ ಮೆಟ್ಟಿಲೇರಿದೆ. ಈ ವಿಷಯ ರಾಜಕೀಯ ಪಕ್ಷಗಳ ದಾಳವಾಗಿ ಪರಿಣಮಿಸಿದೆ. ಎಂಎಸ್ ಪಿಎಲ್ ಕಂಪನಿಯ ವಿರುದ್ ಸುಮಾರು 30 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
(ದಟ್ಸ್ ಕನ್ನಡ ವಾರ್ತೆ)
ಯಡಿಯೂರಪ್ಪ ಕುರಿಗಳು ಹೇಳಿಕೆಗೆ ದೇವೇಗೌಡ ಕಿಡಿ











Click it and Unblock the Notifications