ಬಳ್ಳಾರಿ, ಎಎಸ್ಪಿ ಸೇರಿ ಐವರು ವರ್ಗಾವಣೆ
ಬೆಂಗಳೂರು, ಮಾ. 26 : ದಿಢೀರ್ ಬೆಳವಣಿಗೆಯೊಂದರಲ್ಲಿ ಬಳ್ಳಾರಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಪಾಲಿಕೆಯ ಆಯುಕ್ತ ಸೇರಿದಂತೆ ಐವರನ್ನು ಕೇಂದ್ರ ಚುನಾವಣಾ ಆಯೋಗ ವರ್ಗಾವಣೆ ಮಾಡಿದೆ. ಆಡಳಿತರೂಢ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆಂಬ ಪ್ರತಿಪಕ್ಷಗಳ ದೂರನ್ನು ಪರಿಗಣಿಸಿದ ಆಯೋಗ ಈ ಕ್ರಮಕ್ಕೆ ಮುಂದಾಗಿದೆ.
ಬಳ್ಳಾರಿ ಜಿಲ್ಲೆಯ ಹೆಚ್ಚುವರಿ ಎಸ್ಪಿ ಆಶೋಕ್ ಕರಿಯಾ ಅವರ ಜಾಗಕ್ಕೆ ಡಿ ಎಂ ಕೃಷ್ಣನ್ ರಾಜು ಅವರನ್ನು ನಿಯೋಜಿಸಲಾಗಿದೆ. ಬಳ್ಳಾರಿ ಪಾಲಿಕೆ ಆಯುಕ್ತ ಶಿವರಾಜ್ ಅವರನ್ನು ಎತ್ತಂಗಡಿ ಮಾಡಲಾಗಿದೆ. ಇವರ ಜಾಗಕ್ಕೆ ಗುರುಲಿಂಗಪ್ಪ ಅವರನ್ನು ನೇಮಕ ಮಾಡಲಾಗಿದೆ. ಕೂಡ್ಲಗಿ ಡಿವೈಎಸ್ಪಿ ಎಚ್ ವೈ ತುರಾಯಿ ಜಾಗಕ್ಕೆ ಎಂ ಎಲ್ ಮದುರವೀಣಾ ಅವರನ್ನು ನಿಯೋಜಿಸಲಾಗಿದೆ. ಬಳ್ಳಾರಿ ಕೌಲ್ ಬಜಾರ್ ಪೊಲೀಸ್ ಇನ್ಸ್ ಪೆಕ್ಟರ್ ವಿದ್ಯಾಧರ್ ದತ್ತಾರಾಮ್ ಬೈಕೇರಿಕರ್ ಅವರ ಸ್ಥಾನಕ್ಕೆ ಆರ್ ನಾಗರಾಜ್ ಹಾಗೂ ಸಂಡೂರು ವೃತ್ತ ಇನ್ಸ್ ಪೆಕ್ಟರ್ ರಮಾಕಾಂತ್ ಯಲ್ಲಪ್ಪ ಕುಲ್ಲಾರ್ ಅವರ ಜಾಗಕ್ಕೆ ಶಮೀದ್ ಪಾಷಾ ಅವರನ್ನು ನಿಯೋಜಿಸಲಾಗಿದೆ ಎಂದು ರಾಜ್ಯ ಚುನಾವಣೆ ಆಯೋಗದ ಮುಖ್ಯಸ್ಥ ಎಂ ಎನ್ ವಿದ್ಯಾಶಂಕರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications