ಪೂನಂ ಮಹಾಜನ್ ಗೆ ಟಿಕೆಟ್ ನಿರಾಕರಿಸಿದ ಬಿಜೆಪಿ

ಮಹಾರಾಷ್ಟ್ರ ಮಾಜಿ ಉಪಮುಖ್ಯಮಂತ್ರಿ ಗೋಪಿನಾಥ ಮುಂಡೆ ಹಾಗೂ ದಿವಂಗತ ಪ್ರಮೋದ್ ಮಹಾಜನ್ ಹತ್ತಿರ ಸಂಬಂಧಿಗಳು. ಮಹಾಜನ್ ಮಗಳು ಹಾಗೂ ತಮ್ಮ ಸೊಸೆಯಾಗಿರುವ ಪೂನಂ ಅವರಿಗೆ ಟಿಕೆಟ್ ಕೊಡಿಸಲು ಮುಂಡೆ ಭಾರಿ ಪ್ರಯತ್ನಪಟ್ಟಿದ್ದರು. ಆದರೆ, ಪಕ್ಷದ ಹೈಕಮಾಂಡ್ ಮುಂಡೆ ಅವರ ಬೇಡಿಕೆಯನ್ನು ಸಾರಾಸಗಟಾಗಿ ನಿರಾಕರಿಸಿದ್ದು, ಮಾಜಿ ಸಂಸದೆ ಕಿರಿತಿ ಸೋಮಯ್ಯ ಅವರಿಗೆ ಟಿಕೆಟ್ ನೀಡಿದೆ. ಇದು ಮಹಾಜನ್ ಅಭಿಮಾನಿಗಳಿಗೆ ತೀವ್ರ ಬೇಸರದ ಸಂಗತಿಯಾಗಿದೆ.
ಕಳೆದ ವರ್ಷ ಪ್ರಮೋದ್ ಮಹಾಜನ್ ಪತ್ನಿ ರೇಖಾ ಮಹಾಜನ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿಸಲು ಬಿಜೆಪಿ ಮುಖಂಡರು ನಿರಾಕರಿಸಿದ್ದರು. ಪೂನಂ ಅವರ ಆಯ್ಕೆ ಮುಂಬೈ ದಕ್ಷಿಣ ಲೋಕಸಭೆ ಕ್ಷೇತ್ರ ಆಗಿತ್ತು. ಆದರೆ, ಈ ಕ್ಷೇತ್ರ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಶಿವಸೇನೆಗೆ ಕ್ಷೇತ್ರವನ್ನು ಬಿಟ್ಟುಕೊಡಬೇಕಾಯಿತು. ಅನಿವಾರ್ಯವಾಗಿ ಮುಂಬೈ ಈಶಾನ್ಯದ ಮೇಲೆ ಪೂನಂ ಕಣ್ಣು ಹಾಕಿದ್ದರು. ಆದರೆ, ಅಲ್ಲಿ ಮಾಜಿ ಸಂಸದೆ ಕಿರಿತಿ ಸೋಮಯ್ಯ ಅವರಿಗೆ ನೀಡಬೇಕು ಎಂದು ಹೈಕಮಾಂಡ್ ಮೊದಲೇ ನಿರ್ಧರಿಸಿತ್ತು. ಸೋಮಯ್ಯ ಅವರು ಸುಮಾರು 20 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications