ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಸಮರಕ್ಕೊಂದು ಮುನ್ನುಡಿ

By Staff
|
Google Oneindia Kannada News

Lok Sabha Election 2009, a wake up call
ಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.

* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರು

ಮತ್ತೊಂದು ಮಹಾಸಮರಕ್ಕೆ ಅಖಾಡ ಸಜ್ಜಾಗುತ್ತಿದೆ. ಈ ದೇಶವನ್ನು ಯಾರು ಮುನ್ನಡೆಸಬೇಕು ಎನ್ನುವ ನಿರ್ಧಾರವನ್ನು ಕೈಗೊಳ್ಳುವ ಸದವಕಾಶ ಜನರಪಾಲಿಗೆ ಒದಗಿದೆ. ರಾಜಕೀಯಕ್ಕೂ ತನಗೂ ಯಾವುದೇ ಸಂಬಂಧವಿಲ್ಲ, ಆದ್ದರಿಂದ ಯಾರು ಚುನಾವಣೆಯಲ್ಲಿ ಆರಿಸಿ ಬಂದರೇನಂತೆ? ಯಾರು ಬಂದರೂ ಇದಕ್ಕಿಂತ ಸ್ಥಿತಿ ಭಿನ್ನವಾಗಿರಲು ಸಾಧ್ಯವಿಲ್ಲ ಎಂಬ ನಿರ್ಲಿಪ್ತತೆ ಬರುವುದು ಸಹಜ. ಆದರೆ ಇಂತಹ ವೈರಾಗ್ಯ ಅಥವಾ ನಿಲಿಪ್ತತೆಯೇ ಈಗಿನ ಎಲ್ಲ ಅವಾಂತರಗಳಿಗೆ ಕಾರಣ ಎನ್ನುವುದನ್ನು ಮರೆಯಬಾರದು.

ಚುನಾವಣೆಯಿಂದ ಚುನಾವಣೆಗೆ ಮತದಾನದಲ್ಲಿ ಭಾಗವಹಿಸುವವರ ಪ್ರಮಾಣ ಇಳಿಮುಖವಾಗುತ್ತಿದೆ. ಶೇ.55ರಿಂದ 60ರಷ್ಟು ಮಾತ್ರ ಮತದಾನವಾದರೆ ಉಳಿದ ಶೇ.40ರಿಂದ 45ರಷ್ಟು ಮಂದಿಯ ನಿಲುವು ಚುನಾವಣೆಯೇ ಬೇಡವೆಂದೋ ಅಥವಾ ಕಣದಲ್ಲಿದ್ದವರು ಸಮರ್ಥರಲ್ಲ ಎನ್ನುವ ಅಭಿಪ್ರಾಯ. ಆದರೆ ಇದರಿಂದ ಆದ ಸಾಧನೆ ಏನು? ಮತದಾನ ಮಾಡದೇ ಸುಮ್ಮನಿದ್ದ ಮಾತ್ರಕ್ಕೆ ಅತ್ಯುತ್ತಮರು ಆರಿಸಿ ಬಂದರೇ? ನೀವು ಮತ ಹಾಕದ ಕಾರಣಕ್ಕೆ ಕೆಟ್ಟವರು ಅಧಿಕಾರದ ಕುರ್ಚಿ ಏರಿದಂತೆ ಆಗಲಿಲ್ಲವೇ? ತುಸು ಯೋಚಿಸಿ.

ಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಈಗ ಕಾಣುತ್ತಿದ್ದೇವಲ್ಲ ಇದೇ ಸಾಕ್ಷಿ.

ತಮ್ಮ ಬದುಕಿನ ಬಹುಪಾಲು ದಿನಗಳನ್ನು ಸಂಸತ್‌ನಲ್ಲೇ ಕಳೆದಿರುವ ಸ್ಪೀಕರ್ ಸೋಮನಾಥ ಚಟರ್ಜಿ ಹೇಳಿದ ಮಾತು "ಸಂಸತ್‌ನಲ್ಲಿ ನೋಟಿನ ಕಂತೆಗಳನ್ನು ಕಂಡದ್ದು ಜೀವಮಾನದ ಅತ್ಯಂತ ಕಹಿ ಘಟನೆ" ಕೂಡ ಪ್ರಜಾಪ್ರಭುತ್ವದ ಬಹುಮುಖ್ಯ ಪ್ರಕ್ರಿಯೆ ಚುನಾವಣೆಯಲ್ಲಿ ಬುದ್ದಿವಂತರು ಮತ ಹಾಕದೆ ಸುಮ್ಮನಿರುವುದರ ಪರಿಣಾಮ.

ಚುನಾವಣೆ ಅಥವಾ ರಾಜಕೀಯ ಪಕ್ಷಗಳ ಒಲವು-ನಿಲುವುಗಳ ಬಗ್ಗೆ ವೈಯಕ್ತಿಕವಾದ ಅಭಿಪ್ರಾಯಗಳಿರುತ್ತವೆ. ಪಕ್ಷ ಮುಖ್ಯ ಎನ್ನುವವರ ಕುರಿತು ಯಾರೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಪಕ್ಷಕ್ಕಿಂತಲೂ ಕಣಕ್ಕಿಳಿಯುವ ವ್ಯಕ್ತಿಯ ನಿಲುವು, ಅವನಿಗಿರುವ ಸಾಮರ್ಥ್ಯ, ಆತನಿಗಿರುವ ಕಾಳಜಿ ಬುದ್ದಿವಂತ ಮತದಾರನಿಗಿರಬೇಕಾದ ಕಾಳಜಿ ಕೂಡಾ.

ಈದೇಶದಲ್ಲಿ ಏಕಪಕ್ಷದ ಆಡಳಿತ ಬರುವುದು ಸಾಧ್ಯವೇ ಇಲ್ಲ ಎನ್ನುವುದನ್ನು ಪ್ರತಿಯೊಂದು ರಾಜ್ಯಗಳ ಕಳೆದ ಒಂದೂವರೆ ದಶಕದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರ್ಥವಾಗಿಬಿಡುತ್ತೆ. ಪ್ರಾದೇಶಿಕ ಪಕ್ಷಗಳು ಬಲಿಷ್ಠವಾದಷ್ಟೂ ರಾಷ್ಟ್ರೀಯ ಪಕ್ಷಗಳು ನೆಲೆಕಳೆದುಕೊಳ್ಳುತ್ತಿವೆ.

ಎಂಬತ್ತರ ದಶಕದಲ್ಲಿ ಕರ್ನಾಟಕದಲ್ಲಿ ಹುಟ್ಟಿಕೊಂಡ ಸಮ್ಮಿಶ್ರ ಪಕ್ಷಗಳ ಆಡಳಿತ ವ್ಯವಸ್ಥೆ ಅದೆಷ್ಟು ಬಲಿಷ್ಠವಾಗಿದೆ ಅಂದರೆ ಈಗ ದೇಶದಲ್ಲಿ ಎನ್‌ಡಿಎ ಅಥವಾ ಯುಪಿಎ ಮಾತ್ರ ಕೇಂದ್ರದಲ್ಲಿ ಅಧಿಕಾರ ಮಾಡಲು ಸಾಧ್ಯ. ಈ ಸತ್ಯ ಕಾಂಗ್ರೆಸ್ ಪಕ್ಷಕ್ಕೂ ಗೊತ್ತು, ಬಿಜೆಪಿಗೂ ಚೆನ್ನಾಗಿಯೇ ಅರಿವಿದೆ. ತಮ್ಮ ಅಂಗಪಕ್ಷಗಳನ್ನು ಮರೆತು ಬಿಡುವ ಸಾಮರ್ಥ್ಯ ಎರಡೂ ರಾಷ್ಟ್ರೀಯ ಪಕ್ಷಗಳಿಗಿಲ್ಲ. ಇದಕ್ಕೆ ಬಹುಮುಖ್ಯ ಕಾರಣವೆಂದರೆ ಪ್ರಾದೇಶಿಕವಾಗಿ ತಲೆಯೆತ್ತುತ್ತಿರುವ ಸಮಸ್ಯೆಗಳು.

ಅಸ್ಸಾಂನಂಥ ರಾಜ್ಯದಲ್ಲಿ ವಿದ್ಯಾರ್ಥಿಗಳು ಸರ್ಕಾರ ಕಟ್ಟಿದ ಇತಿಹಾಸ ಕಣ್ಣಮುಂದಿದೆ. ಉತ್ತರಪ್ರದೇಶ, ಬಿಹಾರದ ರಾಜಕೀಯ ಬೆಳವಣಿಗೆಯ ಚಿತ್ರಣವೂ ಗೊತ್ತು, ಆದ್ದರಿಂದಲೇ ಮತದಾರ ರಾಜಕಾರಣಿಗಿಂತಲೂ ಪ್ರಬುದ್ದನಾಗುವ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಆಯ್ಕೆ ಯಾವುದಾರೂ ಸರಿ, ಆದರೆ ತುಲನೆಮಾಡಿ ನಿರ್ಧಾರಕ್ಕೆ ಬರುವುದು ಮುಖ್ಯ. ಇಂಥ ಮನಸ್ಸುಗಳು ಈಸಲದ ಮಹಾಸಮರಕ್ಕೆ ಮುನ್ನುಡಿಯಾಗಲಿ ಎನ್ನುವುದೇ ಆಶಯ.

ಪೂರಕ ಓದಿಗೆ
ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X