ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಚಿತ ವರ್ತನೆ : ಕ್ಯಾಥೋಲಿಕ್ ಬ್ಯಾಂಕ್ ಗೆ ದಂಡ

By Staff
|
Google Oneindia Kannada News

ಮೈಸೂರು, ಫೆ. 25 : ಕ್ಯಾಥೊಲಿಕ್ ಸಿರಿಯನ್ ಬ್ಯಾಂಕ್‌ನಲ್ಲಿ 227.7 ಗ್ರಾಂ ಚಿನ್ನದ ಆಭರಣಗಳನ್ನು ಗಿರಿವಿಯಾಗಿ ದಿನಾಂಕ 08.05.09 ರಂದು ಇಟ್ಟು ಮೈಸೂರಿನ ವಿಜಯನಗರದ ವಾಸಿ ಮಹೇಶ್ ಅವರು 1,17,000 ರೂ.ಗಳನ್ನು ಸಾಲವಾಗಿ ಪಡೆದುಕೊಂಡಿದ್ದರು. ಅವುಗಳನ್ನು ಬಿಡಿಸಿಕೊಳ್ಳುವ ಸಲುವಾಗಿ ಸೆಪ್ಟೆಂಬರ್ 2008ರಲ್ಲಿ ಕ್ಯಾಥೊಲಿಕ್ ಸಿರಿಯನ್ ಬ್ಯಾಂಕ್‌ನ್ನು ಸಂಪರ್ಕಿಸಿದಾಗ ಆಭರಣಗಳನ್ನು 15.09.08ರಂದು ಬಹಿರಂಗ ಹರಾಜಿನಲ್ಲಿ 1,88,000 ರೂ.ಗಳಿಗೆ ಮಾರಾಟ ಮಾಡಿ ಅದರಲ್ಲಿ 1,33,900 ರೂ. ತಮ್ಮ ಸಾಲದ ಬಾಬ್ತನ್ನು ಕಡಿತಗೊಳಿಸಿಕೊಂಡು ಉಳಿದ 54,200 ರೂ.ಗಳನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.

ಆದರೆ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ನೀಡಿಲ್ಲ ಹಾಗೂ ಬ್ಯಾಂಕಿನವರು ಅನುಚಿತ ವ್ಯಾಪಾರ ಪದ್ದತಿಯನ್ನು ಅನುಸರಿಸಿದ್ದಾರೆ ಎಂದು ಬ್ಯಾಂಕಿನ ವಿರುದ್ಧ ಮೈಸೂರು ಗ್ರಾಹಕರ ವೇದಿಕೆಗೆ ದೂರನ್ನು ಸಲ್ಲಿಸಿದ್ದರು. ಈ ದೂರಿನ ಮೇಲೆ ಎದುರುದಾರರನ್ನು ಕರೆಸಿಕೊಂಡು ವಿಚಾರಣೆಗೆ ಒಳಪಡಿಸಿದಾಗ ಬ್ಯಾಂಕಿನವರು ಆಭರಣಗಳನ್ನು ನಿಗಧಿತ ಅವಧಿಗೆ ಗಿರವಿ ಇಟ್ಟುಕೊಂಡಿರಲಿಲ್ಲ.

ಒಂದು ವೇಳೆ ಸಾಲಗಾರರು ಅಸಲು ಮತ್ತು ಬಡ್ಡಿಯನ್ನು ಹಿಂತಿರುಗಿಸಲು ವಿಳಂಬ ಮಾಡಿದರೆ ಹೆಚ್ಚು ಬಡ್ಡಿಯನ್ನು ಹಾಕಿ ಸಾಲಗಾರರಿಗೆ ಸಮಯ ನೀಡಬಹುದಾಗಿತ್ತು. ಅದ್ಯಾವುದೇ ಕ್ರಮವನ್ನು ಜರುಗಿಸದೆ ಸಾಲಗಾರರಾದ ಮಹೇಶ್ ಅವರಿಗೆ ಆಭರಣಗಳನ್ನು ಹರಾಜು ಮಾಡುವುದರ ಬಗ್ಗೆ ಕಾನೂನುಬದ್ಧ ಯಾವುದೇ ರೀತಿಯ ತಿಳುವಳಿಕೆ ಅಥವಾ ನೋಟೀಸನ್ನು ಜಾರಿ ಮಾಡದೆ ಮಾರುಕಟ್ಟೆಯಲ್ಲಿ ಇದ್ದ ಬೆಲೆಗಿಂತ ಕಡಿಮೆ ಬೆಲೆಗೆ ಆಭರಣಗಳನ್ನು ಮಾರಾಟ ಮಾಡಿರುವುದು ಅಕ್ರಮವೆಂದು ನಿರ್ಣಯಿಸಿ ಒಂದು ವೇಳೆ ಬ್ಯಾಂಕಿನವರು ಮಂಜೂರು ಮಾಡಿದ ಸಾಲ ಮತ್ತು ಅದಕ್ಕೆ ಹಾಕಿದ ಬಡ್ಡಿ ಆಭರಣದ ಬೆಲೆಗಿಂತ ಹೆಚ್ಚಿಗೆ ಆಗಿದ್ದರೆ ಆಭರಣಗಳನ್ನು ಹರಾಜು ಮಾಡಬಹುದಾಗಿತ್ತು.

ಅಥವಾ ಆಭರಣಗಳನ್ನು ಹರಾಜು ಮಾಡುವಾಗ ಅವರ ಸಾಲ ಮತ್ತು ಬಡ್ಡಿಯನ್ನು ಸರಿದೂಗಿಸುವಂತಹ ಮೌಲ್ಯದ ಕೆಲವು ಆಭರಣಗಳನ್ನು ಮಾತ್ರ ಹರಾಜು ಮಾಡಿ ಉಳಿದ ಆಭರಣಗಳನ್ನು ಹಿಂತಿರುಗಿಸಬಹುದಾಗಿತ್ತು. ಇದ್ಯಾವುದೇ ನಿಯಮಬದ್ಧ ಕ್ರಮವನ್ನು ಬ್ಯಾಂಕಿನವರು ತೆಗೆದುಕೊಳ್ಳದೆ ಎಲ್ಲಾ ಆಭರಣಗಳನ್ನು ಹರಾಜು ಮಾಡಿ ತಮ್ಮ ವ್ಯವಹಾರದಲ್ಲಿ ಅನುಚಿತ ವ್ಯಾಪಾರ ಪದ್ದತಿಯನ್ನು ಅನುಸರಿಸಿ ಗ್ರಾಹಕರಿಗೆ ನಷ್ಟ ಉಂಟು ಮಾಡಿದ್ದಾರೆ ಎಂದು ತೀರ್ಮಾನಿಸಿ ದೂರುದಾರರು ಈ ವೇದಿಕೆಗೆ ದೂರನ್ನು ಸಲ್ಲಿಸಿದ ದಿನಾಂಕದಂದು ಇದ್ದ ಚಿನ್ನದ ಬೆಲೆಗೆ ಸಮಾನವಾಗಿ 227.7 ಗ್ರಾಂ ಚಿನ್ನದ ಬೆಲೆಯನ್ನು ನಿಗದಿಪಡಿಸಿ ಬ್ಯಾಂಕಿನವರಿಗೆ ಬರಬೇಕಾಗಿದ್ದ ಒಟ್ಟು ಹಣವನ್ನು ಕಡಿತಗೊಳಿಸಿ ಹೆಚ್ಚುವರಿ 1,46,450 ರೂ.ಗಳನ್ನು ದೂರುದಾರರಿಗೆ ಬಡ್ಡಿ ಸಮೇತ ಪಾವತಿಸತಕ್ಕದ್ದು ಹಾಗೂ ದೂರಿನ ಖರ್ಚು ಬಾಬ್ತು 1000 ರೂ.ಗಳನ್ನು ದೂರುದಾರರಿಗೆ ಪಾವತಿಸಿ, ವೇದಿಕೆಯ ಪರಿಹಾರ ನಿಧಿಗೆ 5000 ರೂ.ಗಳನ್ನು ಪಾವತಿಸುವಂತೆ ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಡಿ. ಕೃಷ್ಣಪ್ಪ, ಸದಸ್ಯರಾದ ವೈ.ವಿ. ಉಮಾಶೆಣೈ ಹಾಗೂ ಜೆ. ಶಿವಕುಮಾರ್ ಅವರನ್ನು ಒಳಗೊಂಡ ಗ್ರಾಹಕರ ವೇದಿಕೆ ತೀರ್ಪು ನೀಡಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X