ಲಂಚ ತಿನ್ನುತ್ತಿದ್ದ ಬಿಜೆಪಿ ಶಾಸಕ ಬಲೆಗೆ
ಬೆಂಗಳೂರು, ಜ. 29: ನಗರದ ಶಾಸಕರ ಭವನದ ಮೇಲೆ ಗುರುವಾರ ಮಧ್ಯಾಹ್ನ ಹಠಾತ್ ದಾಳಿ ನಡೆಸಿದ ಲೋಕಾಯುಕ್ತರ ತಂಡ, ಭಾರಿ ಮಿಕವನ್ನು ಬಲೆಗೆ ಕೆಡವಿಕೊಂಡಿದೆ. ಲಂಚ ಸ್ವೀಕರಿಸುತ್ತಿದ್ದ ಕೆಜಿಎಫ್ ನ ಬಿಜೆಪಿ ಶಾಸಕ ವೈ. ಸಂಪಂಗಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಇಂದು ಮಧ್ಯಾಹ್ನದ ವೇಳೆಗೆ ಶಾಸಕರ ಭವನದ ಕಚೇರಿ ಹೊಕ್ಕ ಲೋಕಾಯುಕ್ತರ ತಂಡ, ಬಿಜೆಪಿ ಶಾಸಕರನ್ನು ಸೆರೆ ಹಿಡಿದಿದೆ. ಕ್ರಿಮಿನಲ್ ಮೊಕದ್ದಮೆಯೊಂದನ್ನು ಮುಚ್ಚಿಹಾಕಲು ಫರೂಕ್ ಎಂಬುವವರಿಂದ ಶಾಸಕ ಸಂಪಂಗಿ ಲಂಚ ಪಡೆಯುತ್ತಿದ್ದರು ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಲೋಕಾಯುಕ್ತ ಅಧಿಕಾರಿಗಳು ಶಾಸಕರ ಭವನದಲ್ಲಿ ಇನ್ನೂ ಪರೀಶೀಲನೆ ನಡೆಸುತ್ತಿದ್ದಾರೆ.

ಡಿಕೇಶಿ ಕಿಡಿ: ಲೋಕಾಯುಕ್ತರಿಗೆ ಅಭಿನಂದಿಸಲು ಬಯಸುತ್ತಿದ್ದೇನೆ. ಸರ್ಕಾರಿ ಅಧಿಕಾರಿಗಳ ಅವ್ಯವಹಾರವನ್ನು ಕಣ್ಣಾರೆ ನೋಡುತ್ತಿದ್ದೆವು, ಈಗ ಇದು ಸರ್ಕಾರದ ದೊಡ್ಡ ಹಿನ್ನೆಡೆ. ಜನ ಸಾಮಾನ್ಯರಿಂದ ಹಣ ಸುಲಿಗೆ ಮಾಡುವುದು ನಿರಂತರವಾಗಿ ನಡೆದುಕೊಂಡು ಬಂದಿದೆ. ಇದು ಎಲ್ಲಾ ಶಾಸಕರಿಗೆ ಪಾಠ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಕುಮಾರಸ್ವಾಮಿ ಛೀಮಾರಿ:ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಏನು ಅಭಿವೃದ್ಧಿ ಎಂದು ಹೇಳುತ್ತಿದ್ದಾರೆ ಅದು ಜನರ ಅಭಿವೃದ್ಧಿಯಲ್ಲ. ಬಿಜೆಪಿ ಪಕ್ಷದ ಅಭಿವೃದ್ಧಿ ಅಂಥ ಸಾಬೀತಾಗಿದೆ. ಇದು ಬಿಜೆಪಿ ಪಕ್ಷದ ಸಿದ್ಧಾಂತ. ಹಣಕ್ಕೆ ಎಷ್ಟು ಪ್ರಾಮುಖ್ಯ ಕೊಟ್ಟಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ. ಆ ಶಾಸಕರನ್ನು ಪಕ್ಷದಿಂದ ಹೊರ ಹಾಕಬೇಕು. ಬಿಜೆಪಿ ಕೆಟ್ಟ ಮಾರ್ಗದಿಂದಲೇ ಅಧಿಕಾರಕ್ಕೆ ಬಂದಿದ್ದು, ಪಕ್ಷೇತರ ಶಾಸಕರು ಜೀವಂತ ಉದಾಹರಣೆ. ಭ್ರಷ್ಟಾಚಾರ ನಿರ್ಮೂಲನೆಗೆ ಜನ ಸಾಮಾನ್ಯರಿಂದದೊಡ್ಡ ಹೋರಾಟ ಅಗತ್ಯವಿದೆ. ಲೋಕಾಯುಕ್ತರಿಗೆ ಸಂಪೂರ್ಣ ಅಧಿಕಾರ ನೀಡಬೇಕು. ನಾನು ಅಧಿಕಾರದಲ್ಲಿದ್ದಾಗ ಈ ಬಗ್ಗೆ ಪ್ರಸ್ತಾಪಿಸಿದ್ದೆ. ಆದರೆ ಶಾಸಕರು ಬೆಂಬಲಿಸಿರಲಿಲ್ಲ ಎಂದು ಜೆಡಿಎಸ್ ನ ಮುಖಂಡ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಮಂಗಳೂರು ಘಟನೆ, ಸಿಎಂ ರಾಜೀನಾಮೆಗೆ ಆಗ್ರಹ











Click it and Unblock the Notifications