ಸಾವಯುವ ಕೃಷಿಗೆ 200 ಕೋಟಿ, ಯಡಿಯೂರಪ್ಪ
ಬೆಂಗಳೂರು, ಜ. 27 : ಸಾವಯುವ ಕೃಷಿಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಲಿದ್ದು ಬರುವ ಬಜೆಟ್ ನಲ್ಲಿ 200 ಕೋಟಿ ರುಪಾಯಿ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಕೃಷಿ ಇಲಾಖೆ ಮತ್ತು ಸಾವಯುವ ಕೃಷಿ ಮಿಷನ್ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಬೃಹತ್ ಕೃಷಿ ಚೈತನ್ಯ ಸಮಾವೇಶ ಮತ್ತು ನೇಗಿಲಯೋಗಿಯ ಪ್ರತಿಜ್ಞಾ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಾವಯುವ ಕೃಷಿಗೆ ಉತ್ತೇಜನ ನೀಡಲು ಕಳೆದ ಬಾರಿ ಬಜೆಟ್ ನಲ್ಲಿ 200 ಕೋಟಿ ರುಪಾಯಿ ಅನುದಾನ ನೀಡಲಾಗಿತ್ತು. ಆದರೆ ಈ ಬಾರಿ ಬಜೆಟ್ ನಲ್ಲಿ ಅನುದಾನವನ್ನು ಹೆಚ್ಚಿಸಿ ಇಡೀ ರಾಜ್ಯವನ್ನು ಸಾವಯುವ ಕೃಷಿಯತ್ತ ಕೊಂಡೊಯ್ಯಲಾಗುವುದು ಎಂದರು.
ಸದ್ಯಕ್ಕೆ 50 ಸಾವಿರ ಸಾವಯುವ ಕೃಷಿಕರನ್ನು ಗುರುತಿಸಲಾಗಿದೆ. ಭವಿಷ್ಯದಲ್ಲಿ ಅವರ ಸಂಖ್ಯೆಯನ್ನು ಕನಿಷ್ಠ 2.5 ಲಕ್ಷಕ್ಕೆ ಹೆಚ್ಚಿಸಬೇಕು. ತನ್ಮೂಲಕ ರಸಾಯನಿಕ ಕೃಷಿ ಪದ್ದತಿಯನ್ನು ಬದಲಿಸಿ ರೈತರನ್ನು ನೆಮ್ಮದಿಯ ಆರೋಗ್ಯಕರ ಜೀವನದತ್ತ ಕರೆದುಕೊಂಡು ಹೋಗುವ ನೈಸರ್ಗಿಕ ಕೃಷಿ ಪದ್ಧತಿಗೆ ಒಳಪಡಿಸುವ ಕನಸಿದೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications