ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರನೇ ದಿನದ ಕಲಾಪ ಗಣಿ ಲಂಚಕ್ಕೆ ಹೋಮ

By Staff
|
Google Oneindia Kannada News

ಬೆಳಗಾವಿ, ಜ. 21 : ಭಾರಿ ಮಹತ್ವಕಾಂಕ್ಷೆ ಇಟ್ಟುಕೊಂಡು ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ಹಮ್ಮಿಕೊಂಡಿತ್ತು. ಆದರೆ, ಸದನ ಅಮೂಲ್ಯ ಸಮಯ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಪಗಳ ಕೆಸರೆರಚಾಟಕ್ಕೆ ಮೀಸಲಾಯಿತು. ಸಚಿವರಾದ ಜನಾರ್ದನರೆಡ್ಡಿ, ಕರುಣಾಕರರೆಡ್ಡಿ ಹಾಗೂ ಕುಮಾರಸ್ವಾಮಿ ಪರಸ್ಪರ ಏಕವಚನದಲ್ಲಿ ಬೆಕ್ಕು ನಾಯಿಗಳ ಹಾಗೆ ಕಚ್ಚಾಡುತ್ತಿರುವ ದೃಶ್ಯ ನಾಚಿಕೆ ತರಿಸುವಂತಿತ್ತು. ಯಥಾ ಪ್ರಕಾರ ಆರನೇ ದಿನವೂ ಕೂಡ ಗಣಿ ಗಲಾಟೆಯಲ್ಲಿಯೇ ಕಳೆದು ಹೋಯಿತು.

ಅಧಿವೇಶನದ ಆರನೇ ದಿನದಲ್ಲಿ 150 ಕೋಟಿ ರುಪಾಯಿಗಳ ಗಣಿ ಲಂಚ ಹಗರಣ ಮತ್ತೆ ಪ್ರತಿಧ್ವನಿಸಿತು. ಕಳೆದ ಐದು ದಿನಗಳಿಂದ ಸದನದ ಕಲಾಪವನ್ನು ಅಕ್ರಮ ಗಣಿಗಾರಿಕೆ ನುಂಗಿಹಾಕಿದ್ದರೆ, ಇಂದು ಮಧ್ಯಾಹ್ನದ ನಂತರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಗಣಿ ಧಣಿ, ಪ್ರವಾಸೋಧ್ಯಮ ಸಚಿವ ಜಿ ಜನಾರ್ದನರೆಡ್ಡಿ ವೈಯಕ್ತಿಕ ಟೀಕೆ, ಟಿಪ್ಪಣಿ, ತಾಕತ್ತು, ಆರೋಪ, ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು. 150 ಕೋಟಿ ರುಪಾಯಿಗಳ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಉಭಯ ನಾಯಕರ ನಡುವೆ ತೀವ್ರ ಮಾತಿನ ಚಕಮಕಿ, ವಾಗ್ವಾದ ನಡೆಯಿತು.

ಇಂದು ಬೆಳಗ್ಗೆ ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ಅಕ್ರಮ ಗಣಿಗಾರಿಕೆಯೇ ಪ್ರಮುಖ ವಿಷಯವಾಗಿ ಚರ್ಚೆಯಾಯಿತು. ಪ್ರತಿಪಕ್ಷಗಳು ಗಣಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿಬೇಕು ಎಂದು ಆಗ್ರಹಿಸಿದವು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಜಂಟಿ ಸದನ ಸಮಿತಿ ರಚಿಸುವುದಾಗಿ ಸದನಕ್ಕೆ ಮಾತು ನೀಡಿದರು.

ಇಂದು ಮಧ್ಯಾಹ್ನ ನಂತರ ಆರಂಭವಾದ ಸದನದ ಕಲಾಪದಲ್ಲಿ ಸ್ವೀಕರ್ ಜಗದೀಶ ಶೆಟ್ಟರ್ ಅವರು ಮೊದಲನೆದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಮ್ಮ ನಿಲುವಳಿ ಮಂಡಿಸಲು ಅವಕಾಶ ಮಾಡಿಕೊಟ್ಟರು. ಕುಮಾರಸ್ವಾಮಿ ನೇರವಾಗಿ ತಮ್ಮ ಮೇಲೆ ಹೊರಿಸಲಾಗಿರುವ 150 ಕೋಟಿ ಗಣಿ ಲಂಚ ಪ್ರಕರಣವನ್ನು ಪ್ರಸ್ತಾಪಿಸಿದರು. ಕಳೆದ ಒಂದೂವರೆ ವರ್ಷಗಳಿಂದ ಪತ್ರಿಕೆಗಳಲ್ಲಿ ಬಂದಿರುವ ಗಣಿ ಹಗರಣದ ಸುದ್ದಿಯನ್ನು ಸದನದಲ್ಲಿ ಒಂದೊಂದಾಗಿ ಓದಲು ಆರಂಭಿಸಿದರು. ಇದು ಆಡಳಿತ ಪಕ್ಷಕ್ಕೆ ತೀವ್ರ ಇರಿಸುಮುರಿಸು ತರಿಸಿತು.

ಕುಮಾರಸ್ವಾಮಿ ಅವರು ಮಂಡಿಸುತ್ತಿರುವ ನಿಲುವಿಗೆ ತೀವ್ರವಾಗಿ ಆಕ್ಷೇಪಿಸಿದ ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ, ಹೇಳಬೇಕಿರುವ ವಿಷಯವನ್ನು ನೇರವಾಗಿ ಹೇಳಿ ಎಂದು ತಾಕೀತು ಮಾಡಿದರು. ಆಗ ಕುಮಾರಸ್ವಾಮಿ ಆಕ್ರೋಶದಿಂದ ಗಣಿ ಲಂಚ ಹಗರಣ ಬಹಿರಂಗವಾಗಬೇಕು ಎಂದು ಆಗ್ರಹಿಸಿದರು. ಇದರಿಂದ ಕೋಪಗೊಂಡ ಜನಾರ್ದನರೆಡ್ಡಿ, ಮಾಜಿ ಮುಖ್ಯಮಂತ್ರಿ 150 ಕೋಟಿ ರುಪಾಯಿಗಳ ಗಣಿ ಹಗರಣ ಪ್ರಕರಣ ಸುಪ್ರಿಂಕೋರ್ಟ್ ಮುಂದೆ ನ್ಯಾಯಾಲಯದ ಮುಂದೆ ಇರುವ ಪ್ರಕರಣದ ಚರ್ಚೆ ಬೇಡ ಎಂದರು. ಆಷ್ಟಕ್ಕೆ ಸುಮ್ಮನಾದ ಕುಮಾರಸ್ವಾಮಿ ತಾಕತ್ತಿದ್ದರೆ ನಿಮ್ಮಲ್ಲಿರುವ ಸಿಡಿಗಳನ್ನು ಬಹಿರಂಗಪಡಿಸಿ ಎಂದು ನೇರ ಸವಾಲು ಹಾಕಿದರು.

ಇದಕ್ಕೆ ಸ್ಪಷ್ಟ ಉತ್ತರ ನೀಡಿದ ರೆಡ್ಡಿ, ನನ್ನ ಬಳಿ ಇನ್ನೂ 9 ಸಿಡಿಗಳು ಸೇರಿ ಅನೇಕ ದಾಖಲೆಗಳು ಇವೆ. ಅದನ್ನೂ ಸೂಕ್ತ ಸಮಯದಲ್ಲಿ ಸದನದಲ್ಲಿ ಬಹಿರಂಗಗೊಳಿಸುವುದಾಗಿ ಹೇಳಿದರು. ಮಾತು ಮುಂದುವರೆಸಿದ ಅವರು, ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲು ಸೇರುವುದನ್ನು ಶೀಘ್ರ ದೇಶ ನೋಡಲಿದೆ ಎಂದು ವ್ಯಂಗ್ಯವಾಡಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X