ಮಾಯಾ ಬರ್ಥಡೇಗೆ ಹಣ ನೀಡದ ಅಧಿಕಾರಿ ಕೊಲೆ
ಲಕ್ನೋ, ಡಿ. 24 : ಪ್ರಧಾನಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಕುಮಾರಿ ಮಾಯಾವತಿ ಅವರ ಹುಟ್ಟುಹಬ್ಬಕ್ಕೆ ಹಣ ನೀಡಲು ನಿರಾಕರಿಸಿದ ಎಂಬ ಕಾರಣಕ್ಕಾಗಿ ಬಿಎಸ್ ಪಿ ಶಾಸಕ ಮಹಾಶಯನ ಬೆಂಬಲಿಗರು ಲೋಕೋಪಯೋಗಿ ಇಂಜಿನಿಯರ್ ಒಬ್ಬರನ್ನು ಮಾರಣಾಂತಿಕವಾಗಿ ಬಡಿದು ಹತ್ಯೆ ಮಾಡಿರುವ ಘಟನೆ ಬುಧವಾರ ಬೆಳಗ್ಗೆ ಐರಿಯಾ ಜಿಲ್ಲೆಯಲ್ಲಿ ನಡೆದಿದೆ.
ಜನವರಿ 15 ರಂದು ಮುಖ್ಯಮಂತ್ರಿ ಮಾಯಾವತಿ ಅವರ ಹುಟ್ಟುಹಬ್ಬ ಆಚರಿಸಲು ಸಿದ್ದತೆ ನಡೆಸಲಾಗಿದೆ. ಸರ್ಕಾರಿ ಇಲಾಖೆಯಿಂದ ಹಣ ಸಂಗ್ರಹಿಸಿ ಎಂದು ಮಾಯಾವತಿ ಅವರೇ ಪಕ್ಷದ ಶಾಸಕರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಬಿಎಸ್ ಪಿ ಶಾಸಕ ಶೇಖರ್ ತಿವಾರಿ ಅವರ ಬೆಂಬಲಿಗರು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮನೋಜ್ ಗುಪ್ತಾ ಮುಖ್ಯಮಂತ್ರಿ ಹುಟ್ಟುಹಬ್ಬ ಹಣ ನೀಡುವಂತೆ ವಿನಂತಿಸಿಕೊಂಡಿದ್ದಾರೆ. ಹಣ ನೀಡಲು ಮನೋಜ್ ಗುಪ್ತ ನಿರಾಕರಿಸಿದ್ದಾರೆ, ಇದರಿಂದ ರೊಚ್ಚಿಗೆದ್ದ ಶಾಸಕರ ಬೆಂಬಲಿಗರು ಅವರನ್ನು ಮಾರಣಾಂತಿಕವಾಗಿ ಬಡಿದು ಹತ್ಯೆ ಮಾಡಿದ್ದಾರೆ.
ಇಂಜಿನಿಯರ್ ಗುಪ್ತಾ ಕುಟುಂಬದವರೂ ಬಿಎಸ್ಪಿ ಶಾಸಕರ ಮೇಲೆ ಆರೋಪ ಮಾಡಿದ್ದಾರೆ. ಆದರೆ ಘಟನೆ ನಡೆದು ಮೂರು ಗಂಟೆ ಕಳೆದರೂ ಪೊಲೀಸರು ಇನ್ನೂ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
(ಏಜನ್ಸೀಸ್)












Click it and Unblock the Notifications