ಡಮ್ಮಿ ಅಭ್ಯರ್ಥಿಗಳ ವಿರುದ್ಧ ಬಿಗಿ ಕ್ರಮ:ಆಯೋಗ
ಬೆಂಗಳೂರು, ಡಿ.24: ರಾಜ್ಯದ 8 ವಿಧಾನಸಭಾ ಉಪ ಚುನಾವಣೆಗೆ ಚುನಾವಣಾ ಆಯೋಗವು ಮಹಾ ಚುನಾವಣೆಗಳಿಗೆ ಮಾಡುವ ಮಟ್ಟದಲ್ಲಿ ವ್ಯವಸ್ಥೆಯನ್ನು ಮಾಡಿದೆ. ಪ್ರತಿಯೊಂದು ಮತ ಕ್ಷೇತ್ರಕ್ಕೂ ವೀಕ್ಷಕರನ್ನು ನೇಮಕ ಮಾಡಿರುವುದರ ಜೊತೆಗೆ ಪ್ರತಿ ಮತದಾನ ಕೇಂದ್ರಕ್ಕೂ ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಕ ಮಾಡಿದೆ.
ಈ ಬಾರಿಯ ಚುನಾವಣೆ ಆಯೋಗಕ್ಕೆ ಕಠಿಣ ಸವಾಲಾಗಿದ್ದು ಜನರು ಮಾಧ್ಯಮ ಮತ್ತು ರಾಜಕೀಯ ಪಕ್ಷಗಳು ಎಲ್ಲರ ಸಹಕಾರವೂ ನ್ಯಾಯಯುತ ಚುನಾವಣೆಯನ್ನು ನಡೆಸಲು ಅಗತ್ಯವಾಗಿದೆ. ಪ್ರತಿಯೊಂದು ಮತಕ್ಷೇತ್ರಗಳ ವೀಡಿಯೋ ಕವರೆಜ್ ವ್ಯವಸ್ಥೆ ಮಾಡಲಾಗಿದ್ದು ಮಾಹಿತಿಯನ್ನು ತಕ್ಷಣ ಪಡೆಯಲು ವ್ಯವಸ್ಥೆ ಮಾಡಿದೆ. ವೀಕ್ಷಕರು ಮತ್ತು ಮೈಕ್ರೋ ಮಟ್ಟದ ವೀಕ್ಷಕರುಗಳಿಗೆ ಸಾಕಷ್ಟು ಈ ಬಗ್ಗೆ ತಿಳುವಳಿಕೆ ಹಾಗೂ ತರಬೇತಿ ನೀಡಲಾಗಿದೆ.
ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಂದ ಯಾವುದೇ ರೀತಿಯ ಉಲ್ಲಂಘನೆಗಳು ನಡೆದಲ್ಲಿ ವಿಚಾರಣೆ ನಡೆಸಲು ವಿಶೇಷ ಪೋಲಿಸ್ ಕೇಂದ್ರಗಳನ್ನು ಆರಂಭಿಸಲಾಗಿದೆ.
ಡಮ್ಮಿ ಅಭ್ಯರ್ಥಿಗಳು ಇತರರ ಪರವಾಗಿ ಪ್ರಚಾರ ಮಾಡುವುದು ಹಣ ಅಥವಾ ಇತರೆ ವಸ್ತುಗಳನ್ನು ಹಂಚುವುದು ಮತ್ಯಾವುದೆ ರೀತಿಯ ಚಟುವಟಿಕೆಗಳಲ್ಲಿ ತೊಡಗುವುದನ್ನು ಇಂಡಿಯನ್ ಪೀನಲ್ ಕೋಡ್ 171 ಹೆಚ್ ಅಡಿಯಲ್ಲಿ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ ಚುನಾವಣಾ ಆಯೋಗದಿಂದ ಬಂದಿರುವ ಉಪ ಚುನಾವಣಾ ಆಯುಕ್ತರಾದ ಆರ್. ಬಾಲಕೃಷ್ಣನ್ ತಿಳಿಸಿದರು ಮತ್ತು ಇಂತಹ ಪ್ರಕರಣವನ್ನು ಸಾರ್ವಜನಿಕವಾಗಿ ಪರಿಗಣಿಸಿ ಮಾಧ್ಯಮಗಳಿಗೆ ಒದಗಿಸಲಾಗುವುದು ಎಂದರು.
ಪ್ರತಿಯೊಂದು ಮತಗಟ್ಟೆಗಳಲ್ಲಿಯೂ ಸಹ ಸಂಪರ್ಕ ಘಟಕಗಳನ್ನು ಏರ್ಪಡಿಸಿದ್ದು ಪೂರ್ಣ ಮಾಹಿತಿಯನ್ನು ಒದಗಿಸುವ ವ್ಯವಸ್ಥೆ ಮಾಡಿದೆ. ರಾತ್ರಿವೇಳೆಯಲ್ಲಿ ಹೆಚ್ಚಿನ ಚಟುವಟಿಕೆಗಳು ಜರುಗುವ ಸಂಭವಗಳೂ ಹೆಚ್ಚಾಗಿರುವ ಕಾರಣ ರಾತ್ರಿಪಾಳಿಯ ಗಸ್ತು ವ್ಯವಸ್ಥೆ ಮಾಡಿದ್ದು ಅದರಲ್ಲಿ ವೀಡಿಯೋ ತಂಡವೂ ಸಹ ಇರುತ್ತಿದ್ದು ಈ ಚಟುವಟಿಕೆಗೆ ಸಾರ್ವಜನಿಕರ ಸಹಕಾರವನ್ನು ಆಯೋಗವು ಕೋರಿದೆ. ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ರಾಜ್ಯ ಚುನಾವಣಾಧಿಕಾರಿ ಎಂ.ಎನ್. ವಿದ್ಯಾಶಂಕರ್,ಈ ವರೆಗೆ ರಾಜ್ಯದಲ್ಲಿ 128 ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡಿದ್ದು 28 ಲಕ್ಷ ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
ಗೌಡ್ರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವೆ: ಸಿಎಂ
ಉಪಚುನಾವಣಾ ಕಣ : ಚೂರು-ಪಾರು












Click it and Unblock the Notifications