ಕಸಬ್ ಪ್ರಕರಣ ಕೈಗೆತ್ತಿಕೊಂಡ ವಕೀಲ ಸರೋಗಿ ?
ಮುಂಬೈ, ಡಿ. 15 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿ ಬಿದ್ದಿರುವ ಪಾಕಿಸ್ತಾನ ಮೂಲದ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪರ ವಕಾಲತ್ತು ನಡೆಸಲು ಖ್ಯಾತ ಕ್ರಿಮಿನಲ್ ಲಾಯರ್ ಅಶೋಕ್ ಸರೋಗಿ ಸಜ್ಜಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಉಗ್ರರ ಪರವಾಗಿ ವಕಾಲತ್ತು ನಡೆಸುವುದಕ್ಕೆ ಸಂಬಂಧಿಸಿದಂತೆ ಭಾರತದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಶೋಕ್ ಸರೋಗಿ ಮತ್ತೊಮ್ಮೆ ಉಗ್ರರ ಪರ ವಕಾಲತ್ತು ನಡೆಸುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎನ್ನುವುದು ಹಲವರ ವಾದವಾಗಿದೆ. ಉಗ್ರ ಅಜ್ಮಲ್ ಅಮೀರ್ ಕಸಬ್ ಪರ ವಕಾಲತ್ತು ನಡೆಸಲು ಮುಂದಾಗಿರುವ ಅಶೋಕ್ ಸರೋಗಿ ಅವರ ಕ್ರಮವನ್ನು ಸಂಘ ಪರಿವಾರ ಬಲವಾಗಿ ಖಂಡಿಸಿತ್ತು.
ಶಿವಸೇನೆ ಕಾರ್ಯಕರ್ತರು ಭಾನುವಾರ ಅಶೋಕ್ ಸರೋಗಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಅವರ ವಿರುದ್ಧ ಘೋಷಣೆ ಕೂಗಿದ್ದರು. ಉಗ್ರನ ಪರ ವಕಾಲತ್ತು ನಡೆಸಿದಲ್ಲಿ ನಿಮ್ಮ ಮನೆ ಮುಂದೆ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಶಿವಸೇನೆ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ಪೊಲೀಸರಿಗೆ ಮನವಿ ಸಲ್ಲಿಸಿರುವ ಶಿವಸೇನೆ ಕಾರ್ಯಕರ್ತರು, ನ್ಯಾಯವಾದಿ ಅಶೋಕ್ ಸರೋಗಿ ಅವರು ಉಗ್ರನ ಪರವಾಗಿ ವಕಾಲತ್ತು ನಡೆಸಬಾರದು ಎಂದು ಮನವೊಲಿಸಿ ಎಂದು ಕಾರ್ಯಕರ್ತರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸರೋಗಿ ಅವರ ಮನೆಗೆ ವ್ಯಾಪಕ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂತಹ ಕ್ರೂರಿಯಾಗಿದ್ದರೂ ಆತನು ಕೂಡ ನ್ಯಾಯಾಲಯದ ಮೊರೆ ಹೋಗಬಹುದು. ನ್ಯಾಯದ ಪರ ಹೋರಾಡಬಹುದು. ಆರೋಪಿ ಎಂತಹ ದೊಡ್ಡ ಅಪರಾಧ ಮಾಡಿದರೂ ಕಾನೂನು ಪ್ರಕಾರ ಹೋರಾಟ ಮಾಡುವ ಅವಕಾಶ ಎಲ್ಲರಿಗೂ ಇದೆ. ಈ ಹಿನ್ನೆಲೆಯಲ್ಲಿ ನಾನೊಬ್ಬ ಕ್ರಿಮಿನಲ್ ನ್ಯಾಯವಾದಿಯಾಗಿ ನನ್ನ ವೃತ್ತಿಗೆ ನಾನು ದ್ರೋಹ ಬಗೆಯಲಾರೆ, ಸತ್ಯ ನಿಷ್ಠೆಯಿಂದ ನನ್ನ ಕಾಯಕವನ್ನು ಮಾಡುವೆ ಎಂದು ಅಶೋಕ್ ಸರೋಗಿ ಕಳೆದ ಶನಿವಾರ ಸ್ಪಷ್ಟಪಡಿಸಿದ್ದರು. ಕಸಬ್ ಪ್ರಕರಣ ಕೈಗೆತ್ತಿಕೊಂಡಿಲ್ಲ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವೆ ಎಂದು ಸರೋಗಿ ಹೇಳಿದರು.
(ಏಜೆನ್ಸೀಸ್)
ಪೂರಕ ಓದಿಗೆ:
ಉಗ್ರರ ಹಸ್ತಾಂತರ ಸಾಧ್ಯವಿಲ್ಲ, ಗಿಲಾನಿ
ಉಗ್ರರ ಪರ ವಕಾಲತ್ತು ಬೇಡ: ಸಚಿವ ಸುರೇಶ್











Click it and Unblock the Notifications