ಉಗ್ರರ ಪರ ವಕಾಲತ್ತು ಬೇಡ: ಸಚಿವ ಸುರೇಶ್
ಮಂಗಳೂರು, ಡಿ. 15 : ದೇಶದ್ರೋಹಿ ಕೃತ್ಯದಲ್ಲಿ ತೊಡಗಿರುವ ಶಂಕಿತ ಭಯೋತ್ಪಾದಕರು ಹಾಗೂ ಭಯೋತ್ಪಾದನೆ ಕೃತ್ಯ ಎಸಗಿದ ವ್ಯಕ್ತಿಗಳ ಪರವಾಗಿ ವಕಾಲತ್ತು ನಡೆಸುವುದಿಲ್ಲ ಎಂದು ವಕೀಲರು ನಿರ್ಧಾರ ಕೈಗೊಳ್ಳಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸುರೇಶ್ ಕುಮಾರ್ ವಕೀಲರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂಬೈ ಭಯೋತ್ಪಾದನೆಯ ಬಳಿಕ ನಾಗರಿಕರಲ್ಲಿ ಹುಟ್ಟಿರುವ ಉಗ್ರವಾದಿ ವಿರೋಧಿ ಭಾವವನ್ನು ರಾಷ್ಟ್ರೀಯ ಭಾವನೆಯನ್ನಾಗಿ ಪರಿವರ್ತಿಸಲು ಬಿಜೆಪಿಯಲ್ಲಿರುವ ವಕೀಲರು, ಯುವಜನತೆ ನಿರ್ಣಾಯಕ ಪಾತ್ರ ವಹಿಸಬೇಕು ಎಂದರು. ರಾಜ್ಯದ ಎಲ್ಲ ಕೆಳಹಂತದ ನ್ಯಾಯಾಲಯದಲ್ಲಿ ಕನ್ನಡದಲ್ಲೇ ಕಲಾಪ ಹಾಗೂ ತೀರ್ಪು ನೀಡುವ ಕೆಲಸ ಆಗಬೇಕು. ಜನರಿಗೆ ವಿಚಾರಣೆ ತೀರ್ಪಿನ ಬಗ್ಗೆ ಅರಿವು ಮೂಡಿಸಲು ಕನ್ನಡ ಬಳಕೆ ಅಗತ್ಯ ಎಂದು ಹೇಳಿದರು.
ವಕೀಲರ ಕಲ್ಯಾಣ ನಿಧಿಯನ್ನು 1.5 ಲಕ್ಷ ರು ನಿಂದ 5 ಲಕ್ಷ ರು ಗೆ ಹೆಚ್ಚಿಸಬೇಕು ಎಂಬ ವಕೀಲರ ಬೇಡಿಕೆಯನ್ನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಮುಂದಿನ ಬಜೆಟ್ ನಲ್ಲಿ ತೆಗೆದಿರಿಸುವ ಪ್ರಯತ್ನ ನಡೆಸಲಾಗುವುದು ಎಂದು ಸುರೇಶಕುಮಾರ್ ಭರವಸೆ ನೀಡಿದರು. ವಕೀಲರಿಗೆ 1 ಸಾವಿರದಿಂದ 2 ಸಾವಿರದವರೆಗೆ ನೀಡಬೇಕು ಎನ್ನುವ ವಕೀಲ ಇನ್ನೊಂದು ಬೇಡಿಕೆಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ: ಕಸಬ್ ಪ್ರಕರಣ ಕೈಗೆತ್ತಿಕೊಂಡ ವಕೀಲ ಸರೋಗಿ ?











Click it and Unblock the Notifications