ಬೆಂಗಳೂರಿನಲ್ಲಿ ಮತ್ತೆ ಬೀದಿ ನಾಯಿ ಹಾವಳಿ
ಬೆಂಗಳೂರು, ಡಿ. 15 : ನಗರದಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಶುರುವಾಗಿದೆ. ಭಾನುವಾರ ರಾತ್ರಿ ವಿದ್ಯಾರಣ್ಯಪುರದ ಸಪ್ತಗಿರಿ ಲೇಔಟ್ ನಲ್ಲಿ 9 ಮಂದಿಗಳಿಗೆ ಬೀದಿ ನಾಯಿ ಕಚ್ಚಿದ ಘಟನೆಗಳು ನಡೆದಿವೆ. ಗಾಯಾಳುಗಳನ್ನು ಮಲ್ಲೇಶ್ವರಂ ನಲ್ಲಿ ಇರುವ ಕೆ ಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಆರು ತಿಂಗಳು ಹಿಂದೆ ಬೀದಿ ನಾಯಿಗಳ ಕಡಿತದಿಂದ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಜೊತೆಗೆ ಅನೇಕ ಮಂದಿ ಗಾಯಗೊಂಡಿದ್ದರು. ಬೀದಿ ನಾಯಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ತಾತ್ಕಾಲಿಕ ಉಪಶಮನ ಕೈಗೊಂಡಿತಾದರೂ ಆ ತಕ್ಷಣಕ್ಕೆ ಘಟನೆಗೆ ತೆಪೆ ಹಚ್ಚಲು ಯಶಸ್ವಿಯಾಗಿತ್ತು. ಬೀದಿ ನಾಯಿಗಳ ಗಣತಿಗೆ ತಂಡಗಳನ್ನು ರಚಿಸಿ ಅನೇಕ ಸಾಹಸ ಕೆಲಸಗಳನ್ನು ಬಿಬಿಎಂಪಿ ಮಾಡಿತು. ಅಲ್ಲದೇ ಕಂಡಕಂಡಲ್ಲಿ ನೂರಾರು ನಾಯಿಗಳನ್ನು ಕೊಲ್ಲುವ ಕೆಲಸವು ನಡೆದು ಹೋಯಿತು. ಇಷ್ಟೆಲ್ಲದರ ಮಧ್ಯೆ ಸ್ಲಲ್ಪ ದಿನ ನಾಯಿಗಳ ಹಾವಳಿ ಇರಲಿಲ್ಲ. ಇದರಿಂದ ಜನರು ನಿಟ್ಟುರಿಸು ಬಿಟ್ಟು ನಿಶ್ಚಿಂತೆಯಿಂದ ತಿರುಗಾಡುತ್ತಿದ್ದರು.
ಆದರೆ ಇದೀಗ ಮತ್ತೆ ಬೀದಿ ನಾಯಿಗಳ ಹಾವಳಿ ಎದುರಾಗಿದ್ದು, ಸಾರ್ವಜನಿಕರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಭಾನುವಾರ ರಾತ್ರಿಯ ವಿದ್ಯಾರಣ್ಯಪುರದ ಸಪ್ತಗಿರಿ ಲೇಔಟ್ ನಲ್ಲಿ ಸುಮಾರು 9 ಮಂದಿಗೆ ಬೀದಿ ವಾಯಿಗಳು ಕಚ್ಚಿವೆ. ಗಾಯಗೊಂಡವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದ ತಕ್ಷಣ ಬಿಬಿಎಂಪಿ ಅಧಿಕಾರಿಗಳು ಮತ್ತೆ ಬೀದಿ ನಾಯಿಗಳನ್ನು ಕೊಲ್ಲುವ ಕೆಲಸದಲ್ಲಿ ನಿರತರಾಗಿದ್ದಾರೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿಗೆ ತೊಡೋದು ಸರಿಯಲ್ಲ ಎನ್ನುವುದು ಸಾರ್ವಜನಿಕರ ಮಾತಾಗಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications