• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮೊಳಗಿನ ಆಲ್ ಖೈದಾಗಳ ಬೆಂಡೆತ್ತಿ

By Staff
|
Google Oneindia Kannada News

* ಬಿ. ಜಿ. ಮಹೇಶ್

ಉಗ್ರರ ಕಬಂಧಬಾಹುಗಳಿಂದ ಒತ್ತೆಯಾಳುಗಳನ್ನು ಮುಕ್ತಿಗೊಳಿಸಲು ಸೇನಾಪಡೆ, ರಾಷ್ಟ್ರೀಯ ಭದ್ರತಾ ಪಡೆ, ಮಹಾರಾಷ್ಟ್ರ ಪೊಲೀಸ್ ಮತ್ತು ಕೆಲ ಸ್ವಯಂ ಸೇವಾ ಸಂಘಟನೆಗಳು ಶತಪ್ರಯತ್ನ ನಡೆಸಿವೆ. ಈ ಧೀರ ಯೋಧರ ಸಾಹಸಕ್ಕೆ ದೇಶದಾದ್ಯಂತ ಪ್ರಶಂಸೆಯ ಸುರಿಮಳೆ ವ್ಯಕ್ತವಾಗತೊಡಗಿದೆ. ಈ ಮಧ್ಯೆ ಕೆಲ ರಾಜಕಾರಣಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ಮುಂದೆ ಮುಖ ತೋರಿಸಿ ಅನುಕಂಪ ವ್ಯಕ್ತಪಡಿಸುವ ಮೂಲಕ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಮುಂದಾಗಿರುವುದು ಖಂಡನೀಯ. ಬುಧವಾರ ರಾತ್ರಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಎನ್ ಎಸ್ ಜಿ ಮತ್ತು ಸೇನಾ ಪಡೆಯ ಕಾರ್ಯಕ್ಷಮತೆಯ ಬಗ್ಗೆ ಮಾತನಾಡುತ್ತಿರುವುದು ಅಸಹ್ಯಕರ ಎನಿಸುತ್ತಿತ್ತು.

ಮುಂಬೈನ ಟ್ರೈಡೆಂಟ್ ಒಬೆರಾಯ್, ತಾಜ್ ಹೋಟೆಲ್ ಹಾಗೂ ನಾರಿಮನ್ ಹೌಸ್ ಗಳಲ್ಲಿ ಸೇನಾ ಪಡೆ, ಎನ್ಎಸ್ ಜಿ ಪಡೆ ಉಗ್ರರೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದರೆ, ಹೊರಗಡೆ ಎಲೆಕ್ಟ್ರಾನಿಕ್ ಮಾಧ್ಯಮದವರ ಕೆಲಸ ಏನು ? ಆಪರಾಧ ಚಿತ್ರೀಕರಣವನ್ನು ಬಿತ್ತರಿಸುವುದು ಮೊದಲು ನಿಲ್ಲಿಸಿ ಎಂದು ಎಲ್ಲ ಮಾಧ್ಯಮಗಳ ಮುಖ್ಯಸ್ಥರಿಗೆ ಒಂದು ವಿನಂತಿ. ಹೌದು, ನಿಮ್ಮ ಪ್ರಕಾರ ಇದು ಇಡೀ ದೇಶವೇ ಗಮನಿಸುತ್ತಿರುವ ಸಂಗತಿಯನ್ನು ಪ್ರಸಾರ ಮಾಡುವುದರಲ್ಲಿ ಏನು ತಪ್ಪಿದೆ ಎಂದು ಸಮರ್ಥಿಸಿಕೊಳ್ಳುತ್ತಿರಿ ಎನ್ನುವುದು ಗೊತ್ತಿದೆ. ಆದರೆ ಉಗ್ರರೊಂದಿಗೆ ಪ್ರಾಣ ಹಂಗನ್ನು ತೊರೆದು ಹೋರಾಟ ನಡೆಸಿರುವ ಯೋಧರ ಬಗ್ಗೆ ಕ್ಷಣ ಕಾಲ ಯೋಚನೆ ಮಾಡಬೇಕಲ್ಲವೇ. ಜೀವವನ್ನು ಪಣಕ್ಕಿಟ್ಟು ಹೋರಾಟಕ್ಕಿಳಿದಿರುವ ಯೋಧರ ಕೆಲಸಕ್ಕೆ ಅಡ್ಡಿ ಆತಂಕ ಬಾರದ ಹಾಗೆ ವರ್ತಿಸುವ ಜವಾಬ್ದಾರಿ ಕೂಡಾ ನಮ್ಮದಲ್ಲವೆ. ಉಗ್ರರ ಒತ್ತೆಯಲ್ಲಿರುವ ಎಲ್ಲರೂ ಸುರಕ್ಷಿತವಾಗಿ ಬಿಡುಗಡೆ ಹೊಂದಿದರೆ ಎಲ್ಲರಿಗೂ ಸಂತೋಷವಾಗುತ್ತದೆ. ಟಿವಿ ಮುಂದೆ ಕುಳಿತು ಕ್ಷಣಕ್ಷಣದ ತಾಜಾ ಖಬರ್ ನೀಡುವ ವಾಹಿನಿಗಳಿಗಂತೂ ಹಬ್ಬವೋಹಬ್ಬ. ಆದರೆ ಎಲ್ಲರಿಗೂ ಏನಾಗುತ್ತದೆ ಎಂದು ತಿಳಿದುಕೊಳ್ಳುವ ಕಾತರವೇ ಹೊರತು, ಉಗ್ರರೊಂದಿಗೆ ಸೆಣಸುತ್ತಿರುವ ಯೋಧರ ಬಗ್ಗೆ ಕಿಂಚತ್ತೂ ಯಾರು ಚಿಂತಿಸುತ್ತಿಲ್ಲ ಎನ್ನುವುದು ಗಂಭೀರ ಪ್ರಶ್ನೆಯಾಗಿದೆ.

ಇಂದಿನ ದಿನದಲ್ಲಿ ರಾಜಕೀಯ ಅರ್ಥ ಕಳೆದುಕೊಂಡಿದೆ. ಅಪ್ರಯೋಜಕ ರಾಜಕಾರಣಿಗಳು ಎನ್ನುವುದನ್ನು ಪ್ರತಿ ಸಲವೂ ನಮ್ಮನ್ನಾಳುವ ಮುಖಂಡರು ಸಾಬೀತುಪಡಿಸಿದ್ದಾರೆ. ದೇಶದ ಹಿತವನ್ನು ಕಾಪಾಡುವುದನ್ನು ನಮ್ಮ ಮುಖಂಡರು ಎಂದೋ ಮರೆತುಬಿಟ್ಟಿದ್ದಾರೆ. ಅಧಿಕಾರ ಚುಕ್ಕಾಣಿ ಹಿಡಿದ ಸರ್ಕಾರಗಳು ಸ್ವಾರ್ಥ ಸಾಧನೆಯನ್ನೆ ಮೆರೆದಿವೆ. ಅನೇಕ ತಲೆಮಾರಿಗೆ ಆಗುವಷ್ಟು ಹಣ ಕೂಡಿಹಾಕುವುದು ಅವರ ಏಕೈಕ ಉದ್ದೇಶ. ಸ್ವಿಸ್ ಬ್ಯಾಂಕಿನಲ್ಲಿ ಭಾರತದ ಸಾವಿರಾರು ಕೋಟಿ ರುಪಾಯಿ ಹಣ ಕೊಳೆಯುತ್ತಾ ಬಿದ್ದಿದೆ. ಸ್ವಿಸ್ ಬ್ಯಾಂಕ್ ವೊಂದರಲ್ಲಿ ಹಣವನ್ನು ಠೇವಣಿಯಾಗಿ ಇಟ್ಟಿರುವ ದೇಶಗಳಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ. ಈ ಹಣವನ್ನು ಯಾರು, ಹೇಗೆ ಠೇವಣಿಯಾಗಿರಿಸಿದರು ಎಂಬುದು ಈವರೆಗೂ ತಿಳಿದಿಲ್ಲ. ಆದರೆ ವಿಷಾದದ ಸಂಗತಿ ಎಂದರೆ ದೇಶ ಕಾಯುವ ಭದ್ರತಾ ಸಿಬ್ಬಂದಿಗೆ ಸಂಬಳ ಏರಿಸಲು ಸರ್ಕಾರ ಮೀನಮೇಷ ಎಣಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಬುಧವಾರ ರಾತ್ರಿ ಮುಂಬೈಗೆ ಬೆಂಕಿಜ್ವಾಲೆಯಾಗಿ ಉರಿಯುತ್ತಿದ್ದರೆ ದೇಶದ ಆಡಳಿತ ನಡೆಸುತ್ತಿರುವ ಸರ್ಕಾರ ಘಟನೆಯ ಬಗ್ಗೆ ಒಂದೇ ಒಂದು ಮಾತು ಹೇಳಲು ಮನಸ್ಸು ಮಾಡುತ್ತಿಲ್ಲ. ಚುನಾವಣೆಗಳು ಮುಂದಿವೆ. ಈ ಸಂದರ್ಭದಲ್ಲಿ ಏನಾದರೂ ಎಡವಟ್ಟು ಹೇಳಿಕೆ ನೀಡಿದರೆ ಅಲ್ಪಸಂಖ್ಯಾತರ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಮುಂದಾಲೋಚನೆ. ಪ್ರತಿಪಕ್ಷದ ನಾಯಕ ಎಲ್ ಕೆ ಅಡ್ವಾಣಿ ಕೂಡಾ ಈ ಕುರಿತು ಏರು ಧ್ವನಿಯಲ್ಲಿ ಸರ್ಕಾರದ ವಿರುದ್ಧ ಮುಗಿಬಿದ್ದರು. ಆರೋಪಗಳು ದಂಡಿದಂಡಿಯಾಗಿ ಸುರಿಸಿದರು. ಆದರೆ, ಸರ್ಕಾರಕ್ಕೆ ದೇಶದ ಸಾರ್ವಭೌಮತ್ವಕ್ಕಿಂತ ಅಲ್ಪಸಂಖ್ಯಾತರ ಮತಗಳು ಮೇಲಾಗಿ ಕಂಡಿದ್ದು ಪ್ರಜಾಪ್ರಭುತ್ವದ ಅಣಕ.

ಬೆಂಕಿಯುಂಡೆಯಂತಾಗಿರುವ ಮುಂಬೈಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭೇಟಿ ನೀಡುವ ಉದ್ದೇಶವಾದರೂ ಏನಿತ್ತು ? ಮುಂಬೈ ಘಟನೆ ಬಗ್ಗೆ, ಉಗ್ರರ ಕೃತ್ಯದ ಬಗ್ಗೆ, ಕೇಂದ್ರ ಸರ್ಕಾರ ವೈಫಲ್ಯದ ಬಗ್ಗೆ ಏನಾದರೂ ಹೇಳಿಕೆ ನೀಡುವುದಿದ್ದರೆ ಗುಜರಾತಿನಿಂದಲೇ ಹೇಳಬಹುದಿತ್ತು. ಮುಂಬೈಗೆ ಬಂದು ಘಟನಾ ಸ್ಥಳಕ್ಕೆ ತೆರಳಿ ಹೇಳಿಕೆ ನೀಡುವ ಹಕೀಕತ್ತಾದರೂ ಏನು ? ಮಹಾರಾಷ್ಟ್ರ ಎದುರಿಸುತ್ತಿರುವ ಕ್ಲಿಷ್ಟಕರ ಸಂದರ್ಭದಲ್ಲಿ ನರೇಂದ್ರ ಮೋದಿಯನ್ನು ಮುಂಬೈ ನಗರದೊಳಗೆ ಪ್ರವೇಶಿಸದಂತೆ ನಿರ್ಭಂದ ಹೇರಬೇಕಿತ್ತು. ಆತಂಕದ ಕ್ಷಣದಲ್ಲಿ ಯಾವುದೋ ಉದ್ದೇಶಕ್ಕೆ ಭೇಟಿ ನೀಡಿ ಭದ್ರತಾ ಸಿಬ್ಬಂದಿಗೆ ಮತ್ತಷ್ಟು ಸಮಸ್ಯೆ ತಂದೊಡ್ಡುವುದು ಸರಿಯೇ?

ಭಾರತದ ಇಂಗ್ಲಿಷ್ ಚಾನೆಲ್ಗಳು ಸೇರಿದಂತೆ ಪ್ರಾದೇಶಿಕ ಟಿವಿಗಳಲ್ಲೂ ಇದರದೇ ಸುದ್ದಿ. ಟೈಮ್ಸ್ ನೌ ಚಾನೆಲ್ ನ ವಾರ್ತಾ ವಾಚಕ ಅರ್ನಬ್ ಗೋಸ್ವಾಮಿ ಮಾತ್ರ ದೇಶದ ಜನತೆ ಪರ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು ಶ್ಲಾಘನೀಯ. ಅವರ ಕಾರ್ಯಕ್ರಮದಲ್ಲಿ ಭಾರತೀಯರ ಕಳಕಳಿ ಎದ್ದು ಕಾಣುತ್ತಿತ್ತು. ಅರ್ನಬ್ ಮುಂಬೈ ಸುದ್ದಿ ಹೇಳುತ್ತಿದ್ದಾಗ ಭಾವೋದ್ವೇಗದಿಂದ ಮಾತನಾಡುತ್ತಿದ್ದಾಗ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಸುಹೇಲ್ ಸೇಥ್ ಕೂಡಾ ಅರ್ನಬ್ ಗೆ ಅಷ್ಟೆ ಸಾಥ್ ನೀಡಿ ಘಟನೆ ಸವಿವರವನ್ನು ಬಿಡಿಬಿಡಿಯಾಗಿ ಬಿಡಿಸಿಡುತ್ತಿದ್ದರು. ಪ್ರತಿ ಹಂತದಲ್ಲೂ ನಮ್ಮ ರಾಜಕಾರಣಿಗಳ ಮಾಡುತ್ತಿರುವ ತಪ್ಪುಗಳು, ಅದಕ್ಕೆ ನೀಡುವ ಸಮಜಾಯಿಷಿಗಳು, ಹೀಗೆ ಪ್ರತಿಯೊಂದನ್ನು ಸ್ಪಷ್ಟವಾಗಿ, ಒಮ್ಮೊಮ್ಮೆ ವ್ಯಂಗ್ಯವಾಗಿ ಸುದ್ದಿ ಪ್ರಸಾರ ಮಾಡಿದರು. ಒಂದೇ ಮಾತಿನಲ್ಲಿ ಹೇಳುವುದಾದರೆ ಅರ್ನಬ್ ಮತ್ತು ಸೇಥ್ ಜೋಡಿ ಸುಪರ್ಬ್.

ರಾಜಕಾರಣಿಗಳೆ ನಿಮಗೊಂದು ಸವಿನಯದ ಸಲಹೆ:
ಭಯೋತ್ಪಾದನಾ ಕೃತ್ಯಗಳು ಆದಾಗ ಮೊಸಳೆ ಕಣ್ಣೀರು ಸುರಿಸುವುದರ ಜತೆಗೆ ಭದ್ರತಾ ಸಿಬ್ಬಂದಿಯ ಕಾರ್ಯಕ್ಷಮತೆಯ ಬಗ್ಗೆ ಅವಹೇಳನ ಮಾಡುವುದನ್ನು ಮೊದಲು ನಿಲ್ಲಸಿ. ನೀವು ಮತಗಳಿಗೆ ಮಾಡುವ ತಂತ್ರಗಾರಿಕೆ ಬಿಟ್ಟು ದೇಶದ ಭದ್ರತೆಗಾಗಿ ಚಿಂತನೆ ನಡೆಸಿ. ಭಯೋತ್ಪಾದನೆ ನಿಗ್ರಹಕ್ಕೆ ನೂತನ ಕಾನೂನು ಬೇಕಿಲ್ಲ. ಸದ್ಯಕ್ಕಿರುವ ರಾಷ್ಟ್ರೀಯ ಭದ್ರತಾ ಕಾನೂನಿನಿಂದ ಭಯೋತ್ಪಾದನೆಯನ್ನು ಮೆಟ್ಟಿ ಹಾಕಬಹುದು ಎಂದು ಕಾಂಗ್ರೆಸ್ ಹೇಳುತ್ತದೆ. ಇನ್ನೊಂದಡೆ ಪ್ರತಿಸಲವೂ ಭಯೋತ್ಪಾದನೆ ಕೃತ್ಯಗಳು ಸಂಭವಿಸಿದಾಗ ಬಿಜೆಪಿ ನಾಯಕರು ಪಠಿಸುವುದು ಒಂದೇ ಮಂತ್ರ. ನಿಗ್ರಹಕ್ಕೆ ಪೋಟಾದಂತಹ ಇನ್ನೊಂದು ಕಾಯ್ದೆ ಬೇಕು ಎಂದು ಪ್ರತಿಪಾದಿಸುತ್ತದೆ.

ಒಂದೇ ಮಾತಿನಲ್ಲಿ ಹೇಳುವುದಾದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮಾತುಗಳನ್ನು ಕೇಳಿ ಕೇಳಿ ಸಾಕಾಗಿದೆ. ಆದರೆ ಇಂತಹ ಭಯೋತ್ಪಾದನಾ ಕೃತ್ಯಗಳನ್ನು ಹತ್ತಿಕ್ಕಿಲು ಬೇಕಿರುವುದು ಒಗ್ಗಟ್ಟು. ಇಂಥ ಆಪತ್ತಿನ ಸಂದರ್ಭಗಳಲ್ಲಿ ಅಮೆರಿಕದಂತೆ ಎಲ್ಲರೂ ಒಂದುಗೂಡಬೇಕು. ಅಂದಾಗ ಮಾತ್ರ ಇಂಥ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗತ್ತೆ. ಜಾತಿ ಲೆಕ್ಕಾಚಾರ, ಮತಗಳ ಎಣಿಕೆಯಲ್ಲಿ ಕುಳಿತಿರುವ ನಮ್ಮ ರಾಜಕಾರಣಿಗಳು ಅದನ್ನು ಬದಿಗಿಟ್ಟು ಏಕತೆಗೆ ಮುಂದಾದಾಗ ಮಾತ್ರ ಭಯೋತ್ಪಾದನೆ ಮೆಟ್ಟಿ ನಿಲ್ಲಲು ಸಾಧ್ಯವಾಗಲಿದೆ.

ಇವೆಲ್ಲದರ ನಡುವೆ ಆರ್ಥಿಕ ಸ್ಥಿತಿ ಮತ್ತಷ್ಟು ಕುಸಿಯುವ ಆತಂಕಕಾರಿ ಸೂಚನೆಗಳು ಕೇಳಿ ಬರುತ್ತಿವೆ. ವಿದೇಶಿ ಬಂಡವಾಳದ ಬಾವಿ ನಿಧಾನವಾಗಿ ಒಣಗುತ್ತಿದೆ. ಇದು ಅತ್ಯಂತ ಕ್ಲಿಷ್ಟಕರ ಸಂದರ್ಭವೇ ಸರಿ. ಇಂಥ ಸಮಯ ಬಂದಾಗ ಭಾರತೀಯರಾದ ನಾವು ಕೈಚೆಲ್ಲಿ ಕುಳಿತುಕೊಳ್ಳಬಾರದು. ನನ್ನ ಎಣಿಕೆ ಪ್ರಕಾರ ಇವತ್ತು ಮಾರುಕಟ್ಟೆ ಚೇತರಿಸಿಕೊಂಡು ಸುಮಾರು 500 ಹೆಚ್ಚು ಅಂಕಗಳನ್ನು ಗಳಿಸಬಹುದು. ಹೀಗಾದರೆ ಅದೇ ನಮ್ಮ ಗೆಲವು. ಅವರಿಗೆ ( ಭಯೋತ್ಪಾಕರಿಗೆ, ರಾಜಕಾರಣಿಗಳಿಗಲ್ಲ) ನಾವು ನೀಡುವ ಸಮರ್ಥ ಪ್ರತ್ಯುತ್ತರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X