ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡ ಉತ್ಸವದಿ ಸಾಂಸ್ಕೃತಿಕ ವೈವಿಧ್ಯತೆ

By Super
|
Google Oneindia Kannada News

Bhimsen Joshi
ಧಾರವಾಡ, ನ. 21 : ಧಾರವಾಡ ನೆಲದಲ್ಲಿ ವಿಶಿಷ್ಟ ಹಾಗೂ ಉತ್ಕೃಷ್ಟ ಸಂಸ್ಕೃತಿ-ಕಲೆ ಅರಳುತ್ತ ಬಂದಿದೆ. ಸುತ್ತಮುತ್ತೆಲ್ಲ ತನ್ನ ಪರಿಮಳ ಸೂಸುತ್ತ , ಪರಂಪರೆಯ ಪರಿಪಕ್ವತೆಯಿಂದಾಗಿ ಎಲ್ಲರ ಗಮನ ಸೆಳೆದು ಕನ್ನಡ ಸಂಸ್ಕೃತಿಗೆ ತಿರುಳು ತುಂಬಿದ ವೈವಿಧ್ಯಮಯ ಅಭಿವ್ಯಕ್ತಿಯ ತಾಣವಾಗಿದೆ. ಈ ಪ್ರಾಚೀನ ಪರಂಪರೆಯನ್ನು ಹಾಗೂ ನಾಡಿನ ಕಲೆ ಸಂಸ್ಕೃತಿಯನ್ನು ಜನಸಾಮಾನ್ಯರಿಗೆ ಪರಿಚಯಿಸುವ ಸಿರಿ ವೈಭವಕ್ಕೆ ಸಾಕ್ಷಿಯಾಗಿ ಇದೆ ನವೆಂಬರ್ 21 ರಿಂದ 23 ರವರೆಗೆ ಧಾರವಾಡ ಉತ್ಸವವನ್ನು ಏರ್ಪಡಿಸಲಾಗಿದೆ.

ಮೂರು ದಿನಗಳ ಕಾಲ ನಡೆಯುವ ಧಾರವಾಡ ಉತ್ಸವದಲ್ಲಿ ಸ್ಥಳೀಯ ಕಲಾವಿದರಲ್ಲದೆ ರಾಜ್ಯ, ಹೊರರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರತಿಷ್ಠಿತ ಕಲಾವಿದರು ತಮ್ಮ ಕಲಾ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಹುಬ್ಬಳ್ಳಿ - ಧಾರವಾಡ ಅವಳಿ ನಗರ ಹಾಗೂ ಕುಂದಗೋಳದಲ್ಲಿ ರೂಪಿಸಲಾಗುವ ವಿವಿಧ 14 ವೇದಿಕೆಗಳಲ್ಲಿ ಉತ್ಸವ ಅರ್ಥಪೂರ್ಣವಾಗಿ ಅನಾವರಣಗೊಳ್ಳಲಿದೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಸಂಭ್ರಮ ಹಾಗೂ ಈ ನೆಲದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಪ್ರಖ್ಯಾತ ಹಿಂದೂಸ್ತಾನಿ ಗಾಯಕರಾದ ಭೀಮಸೇನ ಜೋಶಿಯವರಿಗೆ ಭಾರತರತ್ನ ಗೌರವ ದೊರೆತ ಸ್ಮರಣೀಯ ಸಂದರ್ಭದಲ್ಲಿ ಈ ಉತ್ಸವದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಗೀತ ನೃತ್ಯ , ಜಾನಪದ, ಚಿತ್ರಕಲೆ, ಶಿಲ್ಪಕಲೆ, ವಿಚಾರ ಸಂಕಿರಣ, ಕವಿಗೋಷ್ಠಿ, ಸಾಕ್ಷಚಿತ್ರ ಪ್ರದರ್ಶನ, ಹಾಸ್ಯೋತ್ಸದ ಹಾಗೂ ವಿಶೇಷವಾಗಿ ಮಕ್ಕಳ ಕಾರ್ಯಕ್ರಮವನ್ನು ಉತ್ಸವದಲ್ಲಿ ಆಯೋಜಿಸಲಾಗಿದ್ದು, ಇವುಗಳು ಸಾಂಸ್ಕೃತಿಕ ವೈವಿಧ್ಯತೆಯನ್ನು ಪರಿಚಯಿಸಲಿವೆ.

ಕರ್ನಾಟಕ ಕಾಲೇಜಿನ ವೇದಿಕೆಯಲ್ಲಿ ದಿ. 21 ರಂದು ಪ್ರಖ್ಯಾತ ಶಹನಾಯಿ ವಾದಕರಾದ ಪಂಡಿತ ದಯಾಶಂಕರ ಅವರು ತಮ್ಮ ನಾದವರ್ಷಿಣಿ ಸಾದರ ಪಡಿಸಲಿದ್ದು , ದಿ. 22 ರಂದು ರಿಚರ್ಡ ಲೂಯಿಸ್ ಸೇರಿದಂತೆ ವಿವಿಧ ಕಲಾವಿದರು ಹಾಸ್ಯೋತ್ಸವದ ಮೂಲಕ ಸಭಿಕರವನ್ನು ನಗೆಲೋಕಕ್ಕೆ ಕರೆದೊಯ್ಯಲಿದ್ದಾರೆ ಹಾಗೂ 23 ರಂದು ಅಮೃತಸರದ ವಡಾಲಿ ಸಹೋದರರು ಸೂಫಿ ಸಂಗೀತದ ಸವಿ ಉಣಬಡಿಸಲಿದ್ದಾರೆ . ಅಂದೇ ಮಂಜುಳಾ ಪರಮೇಶ ಅವರ ನೃತ್ಯ, ಸ್ವರ ಸಾಧನಾ ಆಕಾಡೆಮಿ ಸಂಗೀತ ವೈವಿಧ್ಯ ಜರುಗಲಿದೆ.

ಧಾರವಾಡ ಅಣ್ಣಾಜಿರಾವ್ ಸಿರೂರ ರಂಗಮಂದಿರದಲ್ಲಿ ದಿ. 22 ರಂದು ಭಾರತರತ್ನ ಪುರಸ್ಕೃತರಾದ ಪಂ-ಭೀಮಸೇನ ಜೋಶಿಯವರಿಗೆ ಅಭಿನಂದನೆ ಹಾಗೂ ಗೌರವ ಅರ್ಪಣೆ ಕಾರ್ಯಕ್ರಮ ಜರುಗಲಿದ್ದು ಖ್ಯಾತ ನಾಮರು ಉಪನ್ಯಾಸ ನೀಡಲಿದ್ದಾರೆ . ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ದಿ. 22 ರಂದು ಪ್ರಸಿದ್ಧ ರಂಗಕಲಾವಿದೆ ಸುಭದ್ರಮ್ಮ ಮನ್ಸೂರ ತಂಡದವರಿಂದ ರಂಗಗೀತೆಗಳು ಹಾಗೂ ಭೂಪಾಲದ ರಂಗ ವಿದೂಷಕ ತಂಡದವರಿಂದ ತುಕ್ಕೆ - ಪೇ - ತುಕ್ಕಾ ಹಿಂದಿ ನಾಟಕ ಪ್ರದರ್ಶಿತವಾಗಲಿದೆ. ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ( ಆರ್ಟ್ ಗ್ಯಾಲರಿ ) ಜಾನಪದ , ಮಕ್ಕಳನಾಟಕ , ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ದಿ.21 ರಂದು ರಾಜಶೇಖರ ಮನಸೂರ ಅವರ ಗಾಯನ ಹಾಗೂ ವಿಶ್ವಖ್ಯಾತ ನೃತ್ಯ ಕಲಾವಿದೆ ಪದ್ಮವಿಭೂಷಣ ಸೋನಾಲ್ ಮಾನ್‌ಸಿಂಗ್ ತಂಡದಿಂದ ಓಡಿಸ್ಸಿ ನೃತ್ಯ ಪ್ರದರ್ಶಿತಗೊಳ್ಳಲಿದೆ. ದಿ. 22 ರಂದು ಪರಮೇಶ್ವರ ಹೆಗಡೆ ಅವರ ಗಾಯನ ಹಾಗೂ ಗ್ವಾಲಿಯರ್ ಕಿರಾಣಾ ಹಾಗೂ ಜೈಪುರ ಶೈಲಿಯ ಖ್ಯಾತ ಕಲಾವಿದೆ ವಿದುಷಿ ಪದ್ಮಾ ತಳವಲಕರ್ ಅವರ ಗಾಯನ ಕಾರ್ಯಕ್ರಮ ಉತ್ಸವಕ್ಕೆ ಮೆರಗು ತುಂಬಲಿವೆ . 23 ರಂದು ಬೆಳಿಗ್ಗೆ ಭೂಪಾಲದ ರಂಗವಿದೂಷಕ ತಂಡ ತುಕ್ಕೆ - ಪೇ - ತುಕ್ಕಾ ಹಿಂದಿ ನಾಟಕ ಪ್ರದರ್ಶಿಸಲಿದ್ದು ಅಂದು ರಾತ್ರಿ ಭಜನ ಸಪೂರಿ ಅವರು ಸಂತೂರ ವಾದ್ಯದಿಂದ ನಾದ ಮಾಧುರ್ಯ ತುಂಬಲಿದ್ದಾರೆ.

ಕಲೆ-ಸಾಹಿತ್ಯ- ಸಂಗಮ: ಕವಿ, ಕಾವ್ಯ - ಕುಂಚಕ್ಕೆ ಜೀವ ತುಂಬುವ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವನ್ನು ಜಿಲ್ಲಾ ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ. ದಿ.22 ರಂದು ಬೆಳಿಗ್ಗೆ 10.30 ಕ್ಕೆ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಾ.ಜಿ.ಎಸ್ ಆಮೂರ ಅವರ ಅಧ್ಯಕ್ಷತೆಯಲ್ಲಿ ಪ್ರಚಲಿತ ವಿಷಯಗಳ ಕುರಿತು ತಜ್ಞರೊಡಗೂಡಿದ ವಿಚಾರಗೋಷ್ಠಿ ನಡೆಯಲಿದ್ದು , ಮಧ್ಯಾಹ್ನ 3.30 ಗಂಟೆಗೆ ಡಾ.ಬಿ.ಎ ಸನದಿ ಅವರ ಅಧ್ಯಕ್ಷತೆಯಲ್ಲಿ ಕಾವ್ಯ-ಕುಂಚ ಕಾರ್ಯಕ್ರಮ ಜರುಗಲಿದೆ. ದಿ.23 ರಂದು ಮಧ್ಯಾಹ್ನ 3.30 ಗಂಟೆಗೆ ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್‌ನಲ್ಲಿ ಡಾ. ಬುದ್ದಣ್ಣ ಹಿಂಗಮಿರೆ ಅವರ ಅಧ್ಯಕ್ಷತೆಯಲ್ಲಿ ಸಹ ಗೀತ ಗಾಯನ ಕಾರ್ಯಕ್ರಮ ಜರುಗಲಿದೆ.

ದಿ.22 ರಂದು ಸವಾಯಿ ಗಂಧರ್ವ ಹಾಲ್‌ನಲ್ಲಿ ಡಾ.ಕೆ ವಿ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯದ ವಿವಿಧ ಆಯಾಮಗಳ ಕುರಿತು ವಿಚಾರಗೋಷ್ಠಿ, ನಡೆಯಲಿದೆ. ಧಾರವಾಡ ಹುಬ್ಬಳ್ಳಿಯಲ್ಲಿ ಹಿರಿಯ - ಕಿರಿಯ ಕಲಾವಿದರ ಚಿತ್ರಕಲಾ ಶಿಬಿರ ಆಯೋಜಿಸಲಾಗಿದೆ. ಹುಬ್ಬಳ್ಳಿಯ ಡಾ. ಗಂಗೂಬಾಯಿ ಹಾನಗಲ್ಲ ಅವರ ಮನೆಯಲ್ಲಿರುವ ಸಂಗೀತ ಪರಿಕರಗಳ ವಸ್ತು ಸಂಗ್ರಹಾಲಯ, ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಹಳೆಯ ನಾಣ್ಯ ಪ್ರದರ್ಶನ , ಅಂಚೆ ಚೀಟಿ ಮತ್ತು ಪತ್ರ ಪ್ರದರ್ಶನ ನಡೆಯಲಿದೆ.

ಮಕ್ಕಳ ವಿಶೇಷ ಕಾರ್ಯಕ್ರಮ : ದಿ.22 ರಂದು ಕಡಪಾ ಮೈದಾನದಲ್ಲಿ ಶಾಲಾ ಮಕ್ಕಳಿಂದ ಮಲ್ಲಕಂಬ ಹಾಗೂ ರೋಪ ಕಲೆ ಪ್ರದರ್ಶನ, ಕಲಾಭವನ ಹಾಗೂ ಇಂದಿರಾ ಗಾಜಿನ ಮನೆಯಲ್ಲಿ ಮಕ್ಕಳ ರಂಗೋಲಿ ಕಲಾಪ್ರದರ್ಶನ ಹಾಗೂ ಬಾಲ ಕಾರ್ಮಿಕರ ಪದ್ದತಿ ನಿರ್ಮೂಲನೆ ಬಗ್ಗೆ ಧಾರವಾಡದಲ್ಲಿ ತೊಗಲು ಗೊಂಬೆ ಆಟ ಪ್ರದರ್ಶನ ಜರುಗಲಿವೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಪ್ರದರ್ಶನಕ್ಕೆ ಈ ಬಾರಿ ಉತ್ಸವದಲ್ಲಿ ಅವಳಿನಗರದ ವಿವಿಧ ವೇದಿಕೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ರಂಗ ಸಂಭ್ರಮ : ಉತ್ಸವದಲ್ಲಿ ವಿವಿಧ ನಾಟಕ ತಂಡಗಳು ರಂಗ ಪ್ರದರ್ಶನದ ಮೂಲಕ ಜನರನ್ನು ಆಕರ್ಷಿಸಲಿದ್ದಾರೆ. ಹೆಗ್ಗೋಡಿನ ನೀನಾಸಂ, ಬೆಂಗಳೂರಿನ ಅನೇಕ ತಂಡ, ಧಾರವಾಡದ ಕಲಾ ಸಂಗಮ , ಹಾನಗಲ್ಲದ ಶೇಷಗಿರಿ ಕಲಾ ತಂಡ, ಗದಗದ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ, ಕೊಟ್ಟುರೇಶ್ವರ ನಾಟಕ ಮಂಡಳಿ, ಪ್ರೇಮಾ ಬದಾಮಿ ತಂಡ, ಹುಬ್ಬಳ್ಳಿಯ ರಂಗ ಭಾರತ ಹವ್ಯಾಸಿ ತಂಡ, ಕರ್ನಾಟಕ ಕಲಾ ಸೇವಾ ಸಂಘ ವಿವಿಧ ನಾಟಕಗಳನ್ನು ಪ್ರದರ್ಶಿಸಲಿದ್ದಾರೆ .

ಜಾನಪದ ಝೇಂಕಾರ: ಉತ್ಸವದಲ್ಲಿ ವರ್ಣ ರಂಜಿತ ಜಾನಪದ ಕಾರ್ಯಕ್ರಮಗಳು ಉತ್ಸವಕ್ಕೆ ಹೆಚ್ಚಿನ ಮೆರಗು ನೀಡಲಿವೆ . ನಾಡಿನ ಪ್ರಸಿದ್ಧ ಕಲಾವಿದರಾದ ಬಾನಂದೂರ ಕೆಂಪಯ್ಯ ಹಾಗೂ ಯುಗಧರ್ಮ ರಾಮಣ್ಣ ತಂಡದ ತತ್ವಪದ , ನಾಗರಾಜ ಜೋಗಿಯವರ ಕಿನ್ನರಿ ಜೋಗಿ , ಶಿವನಗೌಡ ಕೋಟಿ ತಂಡದ ಕೃಷ್ಣ ಪಾರಿಜಾತ , ಸಾಣೇಹಳ್ಳಿ ಶಿವಕುಮಾರ ಕಲಾ ತಂಡ ಹಾಗೂ ಡಾ. ಪ್ರಕಾಶ ಭಟ್ ಅವರ ಯಕ್ಷಗಾನ ಪ್ರದರ್ಶನಗಳಲ್ಲದೇ ಗೀಗಿ ಪದ, ಸಣ್ಣಾಟ, ದೊಡ್ಡಾಟ, ಹೆಜ್ಜೆ ಮೇಳ, ಹಂತಿ ಪದ, ಲಾವಣಿ, ಜನಪದ ನೃತ್ಯ, ಕೋಲಾಟ, ಹೆಜ್ಜೆ ಮಜ್ಜಲು, ಕಂಸಾಳೆ, ಜೋಗಿ ಪದ, ಸಂಪ್ರದಾಯ ಪದ ಚೌಡಕ್ಕಿ ಪದ, ಭಜನೆ, ಬೇಡರ ನೃತ್ಯ, ಜೋಗಿ ನೃತ್ಯ, ಲಂಬಾಣಿ ನೃತ್ಯ, ಪೂಜಾ ಕುಣಿತ ಮುಂತಾದ 30 ಹೆಚ್ಚು ಕಲಾ ತಂಡಗಳು ಜಾನಪದ ಸಂಸ್ಕೃತಿಯನ್ನು ವಿವಿಧ ವೇದಿಕೆಗಳಲ್ಲಿ ಪರಿಚಯಿಸಲಿದ್ದಾರೆ.

English summary
3,516 artistes set to energise Dharwad Utsav from today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X