ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ ನಿಂದ ಜಾತಿ ಗಣತಿ ಆರಂಭ

By Staff
|
Google Oneindia Kannada News

ಬೆಂಗಳೂರು, ನ. 21 : ಹೊಸ ತಂತ್ರಜ್ಞಾನ ಹಾಗೂ ಶೀಘ್ರ ಫಲಿತಾಂಶ ಪಡೆಯಲು ಸಿಂಪ್ಯೂಟರ್ ಮೂಲಕ ಸಮೀಕ್ಷೆ ಮಾಡಲು ಹಿಂದುಳಿದ ವರ್ಗದ ಆಯೋಗ ನಿರ್ಧರಿಸಿದ್ದು ಇದಕ್ಕಾಗಿ ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಸಿಎಂಸಿ ಸಂಸ್ಥೆಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿರುವುದಾಗಿ ಆಯೋಗದ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕಾನಾಥ್ ಅವರು ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿದರು.

ಇಂದು ಮಧ್ಯಾಹ್ನ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಭೇಟಿ ನೀಡಿ ಹಿಂದುಳಿದ ವರ್ಗದವರ ಸಮೀಕ್ಷೆ ಹಾಗೂ ಇತರ ಧ್ಯೇಯೋದ್ದೇಶಗಳನ್ನು ಕುರಿತ ಚರ್ಚೆಯ ಸಂದರ್ಭದಲ್ಲಿ ಆಯೋಗದ ಅಧ್ಯಕ್ಷರು ಹಿಂದುಳಿದ ವರ್ಗದ ಪಟ್ಟಿಯಲ್ಲಿ ಹೊಸ ಸೇರ್ಪಡೆ, ಪ್ರವರ್ಗ ಬದಲಾವಣೆ, ಪರ್ಯಾಯ ಪದ ಸೇರ್ಪಡೆ ಕುರಿತಂತೆ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರು ಕೇಳಿದ ವಿವರಗಳಿಗೆ ಮಾಹಿತಿ ನೀಡಿ ದ್ವಾರಕಾನಾಥ್ ಅವರು ಮನೆ, ಮನೆ ಜಾತಿವಾರು ಸಮೀಕ್ಷೆ ನಡೆಸಿದಾಗ ಮಾತ್ರ ಹಿಂದುಳಿದ ಜನಾಂಗದವರ ಸ್ಥೂಲ ಪರಿಸ್ಥಿತಿಯ ನೈಜ ಚಿತ್ರಣ ಸಿಗಲು ಸಾಧ್ಯ. ಈ ಸಮಿತಿಯ ಆಧಾರದ ಮೇಲೆ ಹೊಸ ಸೇರ್ಪಡೆ, ಪ್ರವರ್ಗ ಬದಲಾವಣೆ ಮೊದಲಾದವುಗಳ ಬಗ್ಗೆ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಅವರು ಹೇಳಿದರು. ಆಯೋಗದಲ್ಲಿ ಈ ಕುರಿತಂತೆ ಒಟ್ಟು 90 ಮನವಿಗಳು ಬಾಕಿ ಇರುವುದಾಗಿ ಅವರು ತಿಳಿಸಿದರು.

20 ದಿನಗಳ ಕಾಲ ರಾಜ್ಯದ್ಯಂತ ನಡೆಯಲಿರುವ ಈ ಸಮೀಕ್ಷೆಗೆ ಸುಮಾರು ಒಂದು ಲಕ್ಷ ಗಣತಿದಾರರ ಅಗತ್ಯವಿದ್ದು, ಇದಕ್ಕಾಗಿ ಕಂದಾಯ, ಗ್ರಾಮೀಣ ಅಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆಗಳ ಸಿಬ್ಬಂದಿ ಹಾಗೂ ಶಿಕ್ಷಕರನ್ನು ನಿಯೋಜಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು. 1931ರ ನಂತರ ಇದೇ ಪ್ರಥಮ ಬಾರಿಗೆ ನಡೆಯಲಿರುವ ಈ ಸಮೀಕ್ಷೆಗೆ 1.15 ಕೋಟಿ ವೆಚ್ಚವಾಗುವ ಅಂದಾಜು ಮಾಡಲಾಗಿದೆ. ಸಮೀಕ್ಷೆಯು ಮುಂಬರುವ ಏಪ್ರಿಲ್, ಮೇನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಮೀಸಲಾತಿ ಕುರಿತು ಸಮಾಲೋಚನೆ
ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯ ಕೊರತೆಯ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದೊಡನೆ ಪ್ರಸ್ತಾಪಿಸಿದ ಕಲ್ಯಾಣ ಸಮಿತಿಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ದ್ವಾರಕಾನಾಥ್ ಅವರು ಉತ್ತರ ನೀಡಿ, ಇತ್ತೀಚೆಗೆ ತಮಿಳುನಾಡಿಗೆ ಭೇಟಿ ನೀಡಿದಾಗ ಅಲ್ಲಿ ಶೇ. 69ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಇದನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲಾಗಿದೆ. ಅದೇರೀತಿ ನಮ್ಮ ರಾಜ್ಯದಲ್ಲಿ ಮಾಡುವ ಬಗ್ಗೆ ಚಿಂತನೆ ನಡೆಯಬೇಕಿದೆ ಎಂದರು.

ಹಿಂದುಳಿದ ವರ್ಗದವರಿಗೆ ವಿಶೇಷ ಪ್ಯಾಕೇಜ್ ನೀಡುವ ಅಗತ್ಯತೆ ಬಗ್ಗೆ ಒತ್ತಿ ಹೇಳಿದರು. ಕೆನೆ ಪದರ ಹಿಂದುಳಿದ ವರ್ಗಗಳಿಗೆ ಮಾತ್ರ ಅನ್ವಯಿಸುತ್ತದೆ. ಈಗಾಗಲೇ ಎನ್‌ಸಿಬಿಸಿ ಸಮಿತಿಗೆ ಕೆನೆ ಪದರದ ಆರ್ಥಿಕ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಸುವ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಅದೇ ರೀತಿ ರಾಜ್ಯದಲ್ಲಿಯೂ ಅಳವಡಿಸುವ ಬಗ್ಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಆಯೋಗದ ಅವಧಿ 3 ವರ್ಷಕ್ಕೆ ನಿಗದಿಪಡಿಸಲು ಸಮ್ಮತಿ
ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಭೇಟಿ ನೀಡಿದ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆದಿರುವ ಕೆಲಸ ಕಾರ್ಯಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಯಾವುದೇ ಸರ್ಕಾರ ಬರಲಿ, ಹಿಂದುಳಿದ ವರ್ಗಗಳ ಆಯೋಗವು ಶಾಶ್ವತ ಆಯೋಗವಾಗಿದ್ದು, ಇದು ಸತತ 3 ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ಒಂದು ಒಟ್ಟಾರೆ ಫಲಿತಾಂಶ ಸಿಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಪ್ರಸ್ತುತ ಆಯೋಗದ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಮಿತಿ, ಸರ್ಕಾರಕ್ಕೆ ಈ ಕುರಿತು ಮನವಿ ಮಾಡುವುದಾಗಿ ತಿಳಿಸಿತು.

ಕಲ್ಯಾಣ ಸಮಿತಿಯಿಂದ ಡಿ. ದೇವರಾಜ ಅರಸು ಭವನ ವೀಕ್ಷಣೆ
ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಡಿ.ದೇವರಾಜ ಅರಸು ಭವನ ವೀಕ್ಷಿಸಿ, ಈ ಕಾಮಗಾರಿಗೆ ತಗುಲಿದ ವೆಚ್ಚ ಹಾಗೂ ಗುಣಮಟ್ಟವನ್ನು ಪರಿಶೀಲಿಸಿತು. ಅರಸು ಭವನದ ಸಭಾಂಗಣದ ಕಾಮಗಾರಿ ಪ್ರಗತಿಯಲ್ಲಿದ್ದು, ಜ.20 ರೊಳಗಾಗಿ ಪೂರ್ಣವಾಗಲಿದೆ ಎಂದು ಮುಖ್ಯ ಅಭಿಯಂತರು ತಿಳಿಸಿದರು. ನೆಲಹಾಸು (ಫ್ಲೋರಿಂಗ್) ಕಾಮಗಾರಿಯ ದೋಷಗಳನ್ನು ಸರಿಪಡಿಸುವಂತೆ ಮಾಲೀಕಯ್ಯಾ ಗುತ್ತೇದಾರ್ ಸೂಚಿಸಿದರು. ಸಭಾಂಗಣದ ಕಾಮಗಾರಿ ಪೂರ್ಣಗೊಂಡ ಮೇಲೆ ಕಲ್ಯಾಣ ಸಮಿತಿ ಮತ್ತೊಮ್ಮೆ ಭೇಟಿ ನೀಡಿ ವರದಿ ನೀಡುವುದಾಗಿ ಅವರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X