ಮಂಗಳೂರು ಇನ್ಫಿಗೆ ಹುಸಿಬಾಂಬ್ ಕರೆ ವ್ಯಕ್ತಿ ಸೆರೆ
ಮಂಗಳೂರು, ನ. 20: ಇಲ್ಲಿನ ಹೊರವಲಯದ ಕೊಟ್ಟಾರದಲ್ಲಿರುವ ಇನ್ಫೋಸಿಸ್ ಕಂಪೆನಿಗೆ ಬುಧವಾರ ಬೆದರಿಕೆ ಕರೆ ಬಂದು, ಕೆಲಕಾಲ ಉದ್ವಿಗ್ವ ವಾತಾವರಣ ಉಂಟಾದ ಘಟನೆ ಜರುಗಿತ್ತು. ಇಂದು ಕೊಣಾಜೆ ಪೊಲೀಸರು ತೀವ್ರ ತನಿಖೆ ನಡೆಸಿ, ಹುಸಿ ಕರೆ ಮಾಡಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಗುರುಪ್ರಸಾದ್ ಎಂದು ಗುರುತಿಸಲಾಗಿದ್ದು, ಇನ್ಫೋಸಿಸ್ ನ ಭದ್ರತಾ ಕಚೇರಿಯ ಮಾಜಿ ನೌಕರ ಎಂದು ತಿಳಿದುಬಂದಿದೆ.
ಕೊಟ್ಟಾರದ ಇನ್ಫಿ ಕಟ್ಟಡದಲ್ಲಿ ಬಾಂಬ್ ಇಡಲಾಗಿದೆ ಎಂದು ಬುಧವಾರ ಸುಮಾರು 12:30 ರ ಸುಮಾರಿಗೆ ಅನಾಮಿಕ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿತ್ತು. ತಕ್ಷಣ ವಿಷಯವನ್ನು ಪೊಲೀಸರಿಗೆ ಇನ್ಫಿ ಆಡಳಿತ ಮಂಡಳಿ ತಿಳಿಸಿದ್ದರು. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಬಂದ ಸ್ಥಳೀಯ ಪೊಲೀಸರು ತೀವ್ರ ತಪಾಸಣೆ ನಡೆಸಿದ ನಂತರ ಬೆದರಿಕೆ ಕರೆ ಹುಸಿ ಎಂದು ತಿಳಿದು ಬಂದಿತ್ತು. ಈ ಘಟನೆ ನಂತರ ಇನ್ಫಿ ಸೇರಿದಂತೆ ಎಲ್ಲಾ ಐಟಿ ಕಂಪೆನಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲಾಗಿದೆ ಎಂದು ಎಸ್ ಪಿ ಸತೀಶ್ ಕುಮಾರ್ ತಿಳಿಸಿದರು.
ಈ ಸಮಯದಲ್ಲಿ ಕಟ್ಟಡದಲ್ಲಿದ್ದ ಸುಮಾರು 300 ಕ್ಕೂ ಅಧಿಕ ಉದ್ಯೋಗಿಗಳು ಜೀವ ಭಯದಿಂದ ಹೊರಗಡೆ ಓಡಿ ಬಂದರು ಎನ್ನಲಾಗಿದೆ. ಸುಮಾರು 90 ನಿಮಿಷಗಳ ಕಾಲ ಇನ್ಫಿ ಕ್ಯಾಂಪಸ್ ನಲ್ಲಿ ತಪಾಸಣೆ ನಡೆಸಿ ಪೊಲೀಸರು ಬೆದರಿಕೆ ಕರೆ ಮಾಡಿದ ಅನಾಮಿಕನಿಗೆ ಹಿಡಿಶಾಪ ಹಾಕಿ ಠಾಣೆಗೆ ತೆರಳಿದರು ಎಂದು ತಿಳಿದುಬಂದಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications