ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಪದವಿ ತಪ್ಪಿಸಿದ್ದು ದೇವಗೌಡ: ಸಿದ್ದು

By Staff
|
Google Oneindia Kannada News

ಬೆಂಗಳೂರು, ನ. 19 : ನನಗೆ ಎರಡು ಬಾರಿ ಮುಖ್ಯಮಂತ್ರಿ ಪದವಿಯನ್ನು ತಪ್ಪಿಸಿದ್ದು ದೇವೇಗೌಡ, ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆಯವರನ್ನು ಉಚ್ಚಾಟಿಸಿದ್ದು ಕೂಡಾ ಈ ದೇವೇಗೌಡರೆ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ಸುದೀರ್ಘ ದಿನಗಳ ನಂತರ ಮೌನ ಮುರಿದಿರುವ ಸಿದ್ದರಾಮಯ್ಯ ಮಾಜಿ ದೇವೇಗೌಡರ ವಿರುದ್ದ ತೀವ್ರ ವಾಗ್ಧಾಳಿ ನಡೆಸಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇವೇಗೌಡ ಸುಳ್ಳು ಹೇಳಿ ಮೊಸಳೆ ಕಣ್ಣೀರು ಸುರಿಸುವುದರಲ್ಲಿ ನಿಸ್ಸೀಮ ಎಂದರು. ತಮ್ಮ ಪುತ್ರರನ್ನು ರಾಜಕೀಯ ಮುಖ್ಯವಾಹಿನಿ ತರುವ ಏಕೈಕ ಉದ್ದೇಶದಿಂದ ಎರಡನೇ ಪಂಕ್ತಿಯ ನಾಯಕರಾಗಿದ್ದ ನಮ್ಮನ್ನು ಬೇಕೆಂತಲೇ ಪ್ರತಿ ಹಂತದಲ್ಲಿ ನಮ್ಮನ್ನೂ ಮೂಲೇ ಗುಂಪು ಮಾಡುತ್ತಾ ಬಂದರು ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದು, ದೇವೇಗೌಡ ಸಮಯ ಸಾಧಕ ರಾಜಕಾರಣಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯೇ ಇಲ್ಲದ ವ್ಯಕ್ತಿ ಎಂದು ಕಟುವಾಗಿ ಟೀಕಿಸಿದರು.

ನನಗೆ ಎರಡು ಬಾರಿ ಮುಖ್ಯಮಂತ್ರಿ ಆಗುವ ಸುಯೋಗ ಒದಗಿಬಂದಿತ್ತು. ಸ್ವತಃ ದೇವೇಗೌಡರೆ ನನಗೆ ಪೀಠ ದೊರೆಯದಂತೆ ಮಾಡಿದರು. ನಮ್ಮ ಶಕ್ತಿಯಿಂದಲೇ ದೇವೇಗೌಡ ಇಷ್ಟೊಂದು ದೊಡ್ಡ ಮಟ್ಟದ ರಾಜಕಾರಣಿಯಾಗಲು ಸಾಧ್ಯವಾಯಿತೇ ಹೊರತು ನಮ್ಮ ಸಹಾಯ ಇಲ್ಲದಿದ್ದರೆ ಇಂದು ದೇವೇಗೌಡರನ್ನು ಕೇಳುವವರು ಗತಿ ಇರಲಿಲ್ಲ. ಆದರೆ ಇದನ್ನೆಲ್ಲಾ ಮರೆತು ಅವರು ನಮಗೆ ಪ್ರತಿ ಸಲವು ಅನ್ಯಾಯ ಮಾಡಿದರು. ರಾಜ್ಯದ ಜನತೆ ಎಲ್ಲವೂ ಗೊತ್ತಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ಜನತಾ ಪರಿವಾರದಿಂದ ಉಚ್ಚಾಟಿಸಲು ಈ ದೇವೇಗೌಡರೆ ಕಾರಣ ಎಂದು ಸಿದ್ದರಾಮಯ್ಯ ನೇರ ಆರೋಪ ಮಾಡಿದರು. ನನ್ನ ಸಿಎಂ ಪದವಿಗೆ ಕುತ್ತು ತಂದಿರುವುದು ಹಾಗೂ ಹೆಗಡೆ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದು ನಾನಲ್ಲ ಎಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು. ಈ ಎರಡು ವಿಷಯದಲ್ಲಿ ನನ್ನ ಪಾತ್ರವಿಲ್ಲ ಎಂದು ಪ್ರಮಾಣ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ದೇವೇಗೌಡರ ವಿರುದ್ಧ ಯಾವ ಕಾರಣಕ್ಕೂ ಮಾತನಾಡುವುದಿಲ್ಲ ಎಂದು ಹೇಳಿದರು.

ಆದರೆ ದೇವೇಗೌಡರು ಸಾಮಾನ್ಯ ವ್ಯಕ್ತಿಯಲ್ಲ. ಸಮಯ ನೋಡಿಕೊಂಡು ದ್ವೇಷ ಸಾಧಿಸುವ ವ್ಯಕ್ತಿ, ಅದಕ್ಕೆ ಬಲಿಯಾದವರ ದೊಡ್ಡ ಪಟ್ಟಿಯೇ ಕಣ್ಣು ಮುಂದಿದೆ ಎಂದು ಗೌಡರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಇತ್ತೀಚೆಗೆ ಕಾಂಗ್ರೆಸ್ ಅವಗಣನೆಗೆ ಒಳಗಾಗಿರುವ ಸಿದ್ದು, ತಮ್ಮ ಅಂತರಂಗದ ಇಂಗಿತವನ್ನು ಹೊರಗೆಡವಿದರು. ಜನತಾ ಪರಿವಾರ ಒಗ್ಗೂಡಿದಲ್ಲಿ ಉತ್ತಮ ಪಕ್ಷ ಕಟ್ಟಲು ಸಾಧ್ಯ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ವಂಚಿತರನ್ನಾಗಿ ಮಾಡಿದ್ದಕ್ಕೆ ನೊಂದಿರುವ ಸಿದ್ದರಾಮಯ್ಯ ಕಾಂಗ್ರೆಸ್ ತೊರೆಯುವ ಸಾಧ್ಯತೆಗಳನ್ನು ತಳ್ಳುಹಾಕುವಂತಿಲ್ಲ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X