ದೇವೇಗೌಡ ಆಧುನಿಕ ಭಸ್ಮಾಸುರ : ಬಚ್ಚೇಗೌಡ

ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿದೊಂದಿಗೆ ಮಾತನಾಡಿದ ಅವರು, ದೇವೇಗೌಡ ಕರಿನಾಗರ ಇದ್ದ ಹಾಗೆ, ಆಧುನಿಕ ಭಸ್ಮಾಸುರನ ಅವತಾರ ಇನ್ನೂ ಏನೇನೋ ವಾಚಾಮಗೋಚರ ಹರಿಹಾಯ್ದರು. ಜಾತಿ ರಾಜಕಾರಣ ಮಾಡುವುದರಲ್ಲಿ ದೇವೇಗೌಡ ಎತ್ತಿದ ಕೈ ಎಂದು ಹಿಗ್ಗಾಮುಗ್ಗಾ ಟೀಕೆಗಳ ಸುರಿಮಳೆಗೈದರು. ದೇವೇಗೌಡ ರಾಜಕಾರಣದಲ್ಲಿರುವುದು ಈ ರಾಜ್ಯದ ದುರ್ದೈವ. ಕನ್ನಡಿಗರು ಅದ್ಯಾವ ಪಾಪ ಮಾಡಿರುವರೋ ಗೊತ್ತಿಲ್ಲ. ಇಂಥ ನೀಚ ರಾಜಕಾರಣಿಯನ್ನು ಬೆಳೆಸಿ ಪೋಷಿಸಿರುವುದು ನೋವು ತರುವ ಸಂಗತಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡ, ತಾನು ತನ್ನ ಮಕ್ಕಳು ಮಾತ್ರ ಅಧಿಕಾರ ಅನುಭವಿಸಬೇಕು ಎನ್ನುವ ಸ್ವಾರ್ಥ ಮನಸ್ಸಿನ ವ್ಯಕ್ತಿ. ಅವನ ಕಾಟ ತಾಳಲಾರದೇ ಪಕ್ಷದಲ್ಲಿರುವ ಅನೇಕ ಮುಖಂಡರು ಅನ್ಯ ಪಕ್ಷಗಳಿಗೆ ಸೇರಿದರು. ಇನ್ನೂ ಕೆಲ ನಾಯಕರನ್ನು ಮೂಲೆಗುಂಪು ಮಾಡಿದ ದೇವೇಗೌಡ, ಬೆರಳೆಣಿಕೆಯಷ್ಟು ಮುಖಂಡರು ಈತನ ಕುಟಿಲ ರಾಜಕಾರಣಕ್ಕೆ ಬಲಿಯಾಗಿ ಅದೇ ಚಿಂತೆಯಲ್ಲಿ ಸಾವನ್ನಪ್ಪಿರುವುದು ಕಣ್ಮುಂದೆ ಇದೆ ಎಂದು ಬಚ್ಚೇಗೌಡ ಹೀನಾಮಾನ ತೆಗಳಿದರು.
ಅನೇಕ ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ದೇವೇಗೌಡರ ಮೇಲಿನ ಆಕ್ರೋಶವನ್ನು ಬಿಡಿಬಿಡಿಯಾಗಿ ಬಿಡಿಸಿಟ್ಟ ಬಚ್ಚೇಗೌಡ, ಗೌಡರ ಕುಟುಂಬ ಸದಸ್ಯರನ್ನು ತೀವ್ರವಾಗಿ ಟೀಕಿಸಿದರು. ಗೌಡರ ನಾಲ್ಕು ಜನ ಪುತ್ರರನ್ನು ಏಕವಚನದಲ್ಲಿ ನಿಂದಿಸಿದ ಬಚ್ಚೇಗೌಡ, ರೇವಣ್ಣ ರಾವಣನ ಪ್ರತಿರೂಪ. ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಕಂಗಾಲಾಗಿ ಚಿಕ್ಕಪುಟ್ಟ ವಿಷಯಗಳನ್ನು ದೊಡ್ಡದು ಮಾಡುತ್ತಾ ನಗೆಪಾಟಲಿಗೆ ಈಡಾಗುತ್ತಿದ್ದಾನೆ. ಉಳಿದ ಇಬ್ಬರು ಮಕ್ಕಳು ಕೂಡಾ ಕಮ್ಮಿಯೇನಲ್ಲ. ಎಲ್ಲರೂ ದೇವೇಗೌಡನ ಚಾಳಿಯವರೇ ಎಂದು ಜರಿದರು.
ಒಕ್ಕಲಿಗರ ಆರಾಧ್ಯದೈವ ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿಯವರ ಮೇಲೆ ದೇವೇಗೌಡ ಕ್ರಿಮಿನಲ್ ಮೊಕದ್ದಮೆ ಹೂಡಿದ ಪರಮ ನೀಚ ವ್ಯಕ್ತಿ ಎಂದ ಕೆಂಡಕಾರಿದ ಬಚ್ಚೇಗೌಡ, 65 ವರ್ಷದ ಸ್ವಾಮೀಜಿಯನ್ನು ಪರಿಪರಿಯಾಗಿ ಕಾಡಿದ ಪಾಪ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು. ಕುಮಾರಸ್ವಾಮಿ ಅವಧಿಯಲ್ಲೂ ಕೂಡಾ ಅವರಿಗೆ ಕಾಡಿದ ರೀತಿಯನ್ನು ತಾಳಲಾರದೆ ಸ್ವಾಮೀಜಿಗಳು ಐದು ವರ್ಷಗಳ ಕಾಲ ತಮಿಳುನಾಡಿಗೆ ತೆರಳಲು ನಿರ್ಧರಿಸಿದ್ದರು ಎಂದು ಹೇಳಿದರು.
ವಿಸೂ : ಬಚ್ಚೇಗೌಡರು ಇವತ್ತು ಮಧ್ಯಾನ್ಹ ಆಡಿದ ಮಾತುಗಳ ಸಾರಾಂಶವನ್ನು ಮಾತ್ರ ಇಲ್ಲಿ ಕೊಡಲಾಗಿದೆ. ಹಿರಿಯ ರಾಜಕಾರಣಿ ಎಚ್.ಡಿ. ದೇವೇಗೌಡರನ್ನು ಇಷ್ಟು ಹೀನಾಮಾನವಾಗಿ ಇದುವರೆವಿಗೆ ಸಾವರ್ಜನಿಕ ವೇದಿಕೆಯಲ್ಲಿ ಯಾರೂ ನಿಂದಿಸಿರಲಿಲ್ಲ. ಬಚ್ಚೇಗೌಡರು ಎಚ್ ಡಿ ಡಿ ಮತ್ತು ಅವರ ಕುಟುಂಬವನ್ನು ಬೆಂಡೆತ್ತಲು ಬಳಸಿದ ಪದಗಳನ್ನು ಕೇಳಿ ಪತ್ರಕರ್ತ ಸಮುದಾಯ ಹೌಹಾರಿತು. ಸಾರಿಗೆ ಸಚಿವ ಆರ್ . ಅಶೋಕ್ ಕೂಡ ಇದ್ದ ಪತ್ರಿಕಾಗೋಷ್ಠಿಯಲ್ಲಿ ನಮ್ಮ ವರದಿಗಾರನ ಕಿವಿಗೆ ಬಿದ್ದ ಮಾತುಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಛಾಪಿಸಲಾಗಿದೆ. We mean this one purely is a verbatim - ಸಂಪಾದಕ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications