ಲೋಕಾಯುಕ್ತರ ಗಾಳಕ್ಕೆ ಸಿಗಡಿ ಮೀನುಗಳು
ಬೆಂಗಳೂರು, ನ. 12 : ಬೆಂಗಳೂರು ಕಬ್ಬನ್ ಪೇಟೆ ವಿಭಾಗದ ವಾಣಿಜ್ಯ ತೆರಿಗೆ ಅಧಿಕಾರಿ ಉಷಾ ಬಾಯಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಕಬ್ಬನ್ ಪೇಟೆಯಲ್ಲಿ ಕಂಪ್ಯೂಟರ್ ಸ್ಟೇಷನರಿ ಅಂಗಡಿ ಮಾಲಿಕ ಮಂಜು ಬನ್ಸಾಲಿ ಅವರಿಂದ ಹತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಅವರು ಸಿಕ್ಕಿಬಿದ್ದರು. 2005/06/07ನೇ ಸಾಲಿಗೆ ವ್ಯಾಟ್ ಪುನರ್ವಿಮರ್ಶೆ ಮಾಡುವುದಕ್ಕಾಗಿ ಉಷಾ ಬಾಯಿ ಲಂಚ ಪಡೆದಿದ್ದರು.
ಇಂಥದೇ ಇನ್ನೊಂದು ಪ್ರಕರಣದಲ್ಲಿ ಬಳ್ಳಾರಿಯ ಆರ್ ಟಿ ಒ ಕೃಷ್ಣಾರೆಡ್ಡಿ ಮತ್ತು ಗುಮಾಸ್ತ ಗುಪ್ತಾ ಲಂಚ ಪಡೆಯುವಾಗ ಲೋಕಾಯುಕ್ತ ಗಾಳಕ್ಕೆ ಸಿಕ್ಕಿಸಿದ್ದ ಹುಳ ತಿನ್ನುವಾಗ ಸಿಕ್ಕಿಹಾಕಿಕೊಂಡರು. ಕೆ. ಎಂ. ಶಿವಕುಮಾರ್ ಎಂಬ ಲಾರಿ ಮಾಲೀಕರಿಂದ ಕರ್ನಾಟಕ ಸರಕಾರದ ರಸ್ತೆ ಸಾರಿಗೆ ಇಲಾಖೆಯ ಈ ಸಿಬ್ಬಂದಿವರ್ಗ ಮೂರು ಸಾವಿರ ರೂಪಾಯಿ ಲಂಚ ಕೇಳಿದ್ದರು.
ಕೋಟಿಗಟ್ಟಳೆ ಹಣವನ್ನು ಅಕ್ರಮವಾಗಿ ಸಂಪಾದಿಸಿದ ತಿಮಿಂಗಲಗಳು ಲೋಕಾಯುಕ್ತ ಬಲೆಗೆ ಬಿದ್ದಾಗ ಊರೆಲ್ಲ ಸುದ್ದಿಯಾಗುತ್ತದೆ. ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗುತ್ತದೆ. ಜನ ನಿಬ್ಬೆರಗಾಗಿ ಓದುತ್ತಾರೆ. ಆದರೆ, ಇಂಥ ಚಿಲ್ಲರೆ ಹತ್ತುಸಾವಿರ, ಮೂರು ಸಾವಿರ ಲಂಚ ಪ್ರಕರಣಗಳಿಗೆ ಲೋಕಾಯುಕ್ತ ಅಧಿಕಾರಿಗಳನ್ನು ಹೊರತುಪಡಿಸಿದರೆ ಅನ್ಯರು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನೆನಪಿರಲಿ, ಲಕ್ಷ ರು. ಲಂಚ ನೀಡುವುದೂ ಭ್ರಷ್ಟಾಚಾರವೆ, ಸಾವಿರ ರು. ಲಂಚ ನೀಡುವುದೂ ಭ್ರಷ್ಟಾಚಾರವೆ.
ನೀವು ಲೋಕಾಯುಕ್ತರಿಗೆ ದೂರು ಕೊಡುವುದಿದ್ದರೆ ಅಥವಾ ದುಮ್ಮಾನ ಹೇಳಿಕೊಳ್ಳುವುದಿದ್ದರೆ ಬೆಂಗಳೂರು ಲೋಕಾಯುಕ್ತ ಕಚೇರಿಯ ಹೆಲ್ಪ್ ಲೈನ್ ಬರೆದುಕೊಳ್ಳಿರಿ. 080-2237 5014 Extn :298. ಕಚೇರಿಯ ವೆಬ್ ಸೈಟ್ ನೋಡಿ. http://lokayukta.kar.nic.in/index.asp ಪ್ರತಿದಿನ ಅಪ್ ಡೇಟ್ ಆಗುವ ವಿರಳರಲ್ಲಿ ಅತಿವಿರಳ ಸರಕಾರಿ ವೆಬ್ ಸೈಟುಗಳಲ್ಲಿ ಲೋಕಾಯುಕ್ತರ ವಿಳಾಸವೂ ಒಂದು. ಇದುವರೆಗೆ 32378 ಚಾರಣಿಗರು ಈ ತಾಣಕ್ಕೆ ಭೇಟಿನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
