ಬೆಂಗಳೂರು ಕಳ್ಳರಿಗೆ ಖುಲಾಯಿಸಿದ ಅದೃಷ್ಟ
ಬೆಂಗಳೂರು, ನ. 12 : ವಿದ್ಯುತ್ ಅಭಾವದಿಂದ ಲೋಡ್ ಶೆಡ್ಡಿಂಗ್ ಮಾಡಲಾಗುವುದು ಎಂದು ಸರ್ಕಾರ ಹೇಳುತ್ತಲೇ ಇರಲಿ. ಈ ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿರುವ ಪ್ರಕರಣಗಳು ಅನೇಕ ಕಡೆ ನಡೆಯುತ್ತಿರುವ ವರದಿಗಳೂ ಬರುತ್ತಿವೆ. ಕಳ್ಳಕಾಕರಿಗಂತೂ ಇದು ಅದೃಷ್ಟ ಖುಲಾಯಿಸುವ ಸಮಯ. ಸಂಜೆ ಹೊತ್ತಿಗೆ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದರಿಂದ ಕಳ್ಳತನದ ಪ್ರಕರಣಗಳು ಜಾಸ್ತಿಯಾಗತೊಡಗಿವೆ. ಕೇವಲ ಎರಡು ದಿನಗಳ ಅವಧಿಯಲ್ಲಿ ಬೆಂಗಳೂರಿನ ನಾನಾ ಕಡೆಗಳಲ್ಲಿ ಸರಗಳ್ಳತನ ನಡೆದಿದ್ದು, ಮಹಿಳೆಯರು ಓಡಾಡದಂತಹ ಸ್ಥಿತಿ ನಿರ್ಮಾಣವಾಗಿವೆ.
ಇತ್ತೀಚೆಗೆ ನಗರದಲ್ಲಿ ಸರಣಿ ಕಳ್ಳತನ ಹೆಚ್ಚಾಗುತ್ತಿದ್ದರೂ ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಲ್ಲೇಶ್ವರಂ, ರಾಜಾಜಿನಗರ, ಶ್ರೀರಾಮಪುರಂ, ಬನಶಂಕರಿ, ವಿಜಯನಗರ ಹಾಗೂ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ 7 ಗಂಟೆಯಿಂದ 8.45ರ ಅವಧಿಯಲ್ಲಿ ಸರಗಳ್ಳತನಗಳು ನಡೆದಿದೆ.
ಸರ ಅಪಹರಣ ಪ್ರಕರಣಗಳು ಹೆಚ್ಚಾಗುತ್ತಿರುವುದು ಕತ್ತಲೆ ರಾತ್ರಿಗಳ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.ಮಾಂಗಲ್ಯ ಸರ ಅಪಹರಣ, ಚಿನ್ನದ ಸರ ಕಳುವು, ಹಣ ಲಪಟಾಯಿಸುವುದು, ಪಿಕ್ ಪಾಕೆಟ್, ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ ಎಂದು ನಗರದ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ದೂರುಗಳಿಂದ ತಿಳಿದುಬಂದಿದೆ. ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವಿಶೇಷ ನಾಕಾಬಂದಿ ನಡೆಸುವಂತೆ ಆಯಾ ಠಾಣಾಧಿಕಾರಿಗಳಿಗೆ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಸಾಯಂಕಾಲದಿಂದ ಮಧ್ಯರಾತ್ರಿವರೆಗೂ ವಿಶೇಷ ಕಾರ್ಯಾಚರಣೆ ನಡೆಸುವಂತೆ ಆದೇಶ ನೀಡಿದ್ದಾರೆ.
ಈ ಮಧ್ಯೆ, ಲೋಡ್ ಶೆಡ್ಡಿಂಗ್ ಬಗ್ಗೆ ಪ್ರತಿಕ್ರಿಯಿಸಿರುವ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ತುಷಾರ್ ಗಿರಿನಾಥ್, ನ. 14 ರಿಂದ ವಿದ್ಯುತ್ ಸರಬರಾಜು ಮಾಡುವ ಸಮಯದ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ವಿದ್ಯುತ್ ಕೊರತೆ, ಲೋಡ್ ಶೆಡ್ಡಿಂಗ್ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಇಂಧನ ಸಚಿವರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದ್ದು, ಲೋಡ್ ಶೆಡ್ಡಿಂಗ್ ಸಮಯವನ್ನು ನಿಗದಿಪಡಿಸಲಾಗುವುದು ಎಂದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
