ಬ್ಯಾಂಕ್ ಠೇವಣಿಗಳ ಬಗ್ಗೆ ಆತಂಕ ಬೇಡ:ಪ್ರಧಾನಿ
ನವದೆಹಲಿ, ನ.3:ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ಭಾರತ ಆರ್ಥಿಕ ವ್ಯವಸ್ಥೆಗೂ ತಟ್ಟುತ್ತಿದ್ದು ಈ ಕುರಿತು ಯಾವುದೇ ಆತಂಕ ಬೇಡ ಎಂದು ಪ್ರಧಾನಿ ಮನಮೋಹನ್ ಸಿಂಗ್ ಉದ್ಯಮಪತಿಗಳಲ್ಲಿ ಧೈರ್ಯ ತುಂಬಿದ್ದಾರೆ. ''ಬ್ಯಾಂಕ್ ಠೇವಣಿಯ ಸುರಕ್ಷತೆ ಬಗ್ಗೆ ಯಾರೊಬ್ಬರಿಗೂ ಯಾವುದೇ ಆತಂಕ ಬೇಡ. ಬ್ಯಾಂಕಿಂಗ್ ವ್ಯವಸ್ಥೆಗೆ ಬೆನ್ನುಲುಬಾಗಿ ಸರ್ಕಾರ ಇದೆ, ನೀವು ನಿಶ್ಚಿಂತೆಯಿಂದ ಇರಿ'' ಎಂದು ಪ್ರಧಾನಿ ಉದ್ಯಮಿಗಳಿಗೆ ಇಂದು ಭರವಸೆ ನೀಡಿದರು.
ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಲು ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕಿಂಗ್ ಕ್ಷೇತ್ರಗಳಿಗೆ ಬೆನ್ನುಲುಬಾಗಿ ಸರ್ಕಾರ ಇದೆ. ತಮ್ಮ ಠೇವಣಿಗಳ ಬಗ್ಗೆ ನಿಶ್ಚಿಂತೆಯಿಂದ ಇರಿ. ನಮ್ಮ ಆರ್ಥಿಕಾಭಿವೃದ್ಧಿಯನ್ನು ಕಾಪಾಡಲು ಎಲ್ಲ ರೀತಿಯ ಹಣಕಾಸು ನೀತಿಗಳನ್ನು ಅನುಸರಿಸಲಾಗುತ್ತದೆ. ಭಾರತದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹಾಗೂ ಆರ್ಥಿಕ ಬಿಕ್ಕಟ್ಟಿನಂತಹ ಪರಿಸ್ಥಿತಿಗಳನ್ನು ತಡೆಯಲು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ನೆರವು ಸಹ ಪಡೆಯಲಾಗುತ್ತದೆ ಎಂದು ಪ್ರಧಾನಿಗಳು ತಿಳಿಸಿದರು.
ಮುಂಬರುವ ಸವಾಲುಗಳನ್ನು ಎದುರಿಸಲು ಸರ್ಕಾರದೊಂದಿಗೆ ಉದ್ಯಮಗಳು ಕೈಜೋಡಿಸಬೇಕಾದ ಅವಶ್ಯಕತೆ ಇದೆ ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟರು. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲುಭಾರತದ ವಿವಿಧ ಉದ್ಯಮಿಗಳೊಂದಿಗೆ ಪ್ರಧಾನಿಗಳು ಸಭೆ ಸೇರಿದ್ದರು. ಸಭೆಯಲ್ಲಿ ಮುಖೇಶ್ ಅಂಬಾನಿ, ಆನಂದ್ ಮಹೀಂದ್ರ, ಕೆ.ವಿ.ಕಾಮತ್, ಸುನಿಲ್ ಭಾರತಿ ಮಿಟ್ಟಲ್, ದೀಪಕ್ ಪರೀಖ್, ಶಶಿ ರುಯಾ, ಕೆ.ಪಿ.ಸಿಂಗ್ ಹಾಗೂ ರಾಜ್ ಕುಮಾರ್ ಧೂತ್ ಭಾಗವಹಿಸಿದ್ದರು.
ಸಭೆಯಲ್ಲಿ ಸಿಐಐನ ಕಾಮತ್, ಎಫ್ ಐಸಿಸಿಐ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಹಾಗೂ ಅಸೋಚಾಮ್ ಮುಖ್ಯಸ್ಥ ಸಜ್ಜನ್ ಜಿಂದಾಲ್ ಸರ್ಕಾರದ ರೀತಿನೀತಿಗಳಲ್ಲಿ ಮತ್ತಷ್ಟು ಪಾರದರ್ಶಕತೆ ಹಾಗೂ ಬಡ್ಡಿದರಗಳನ್ನು ಮತ್ತಷ್ಟು ಕಡಿಮೆ ಮಾಡುವುದರಿಂದ ಆರ್ಥಿಕ ವಲಯದಲ್ಲಿ ವಿಶ್ವಾಸ ಹೆಚ್ಚಿಸಬಹುದು ಎಂದು ಪ್ರಧಾನಿಗಳಿಗ ಮನವರಿಕೆ ಮಾಡಿದರು.
ಆರ್ಥಿಕ ವೃದ್ಧಿಯನ್ನು ಸಾಧಿಸಲು ಉಳಿದ ಆಯ್ಕೆಗಳ ಬಗ್ಗೆ ಚರ್ಚಿಸಲು ಹಾಗೂ ಪ್ರಧಾನಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ವಿತ್ತ ಸಚಿವ ಪಿ.ಚಿದಂಬರಂ, ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನಲ್ ಡಿ.ಸುಬ್ಬರಾವ್ ಪಾಲ್ಗೊಂಡಿದ್ದರು.
(ಏಜೆನ್ಸೀಸ್)












Click it and Unblock the Notifications